ದಕ್ಷಿಣ ಭಾರತದ ಮಹಾಕುಂಭ ಮೇಳವೆಂದೇ ಪ್ರಸಿದ್ಧಿ ಪಡೆದಿರುವ ಕೊಪ್ಪಳ ಜಿಲ್ಲೆಯ ಗವಿಮಠದ ಗವಿ ಸಿದ್ದೇಶ್ವರ ಜಾತ್ರೆ ಇಂದಿನಿಂದ ಆರಂಭಗೊಂಡಿದ್ದು, ಲಕ್ಷಾಂತರ ಭಕ್ತರ ಸ್ವಾಗತಕ್ಕೆ ಸಕಲ ಸಿದ್ಧತೆಗಳು ಭರದಿಂದ ಸಾಗಿವೆ. ಭಕ್ತಿ, ಸೇವೆ ಮತ್ತು ಸಂಪ್ರದಾಯಗಳ ಅಪೂರ್ವ ಸಂಗಮವಾಗಿರುವ ಈ ಜಾತ್ರೆ ಪ್ರತಿವರ್ಷವೂ ರಾಜ್ಯ ಮಾತ್ರವಲ್ಲದೆ ಹೊರರಾಜ್ಯಗಳ ಭಕ್ತರು ಆಗಮಿಸುತ್ತಾರೆ.
ಗವಿಮಠದ ಜಾತ್ರೆಯ ಅವಿಭಾಜ್ಯ ಅಂಗವಾಗಿರುವ ಮಹಾದಾಸೋಹ ಈ ಬಾರಿ ಕೂಡ ವಿಶೇಷವಾಗಿದೆ . ಡಿಸೆಂಬರ್ 1ರಿಂದಲೇ ಆರಂಭವಾಗಿರುವ ಅನ್ನದಾನ ಸೇವೆ ಡಿಸೆಂಬರ್ 18ರವರೆಗೆ ನಿರಂತರವಾಗಿ ನಡೆಯಲಿದ್ದು, ಈ ಅವಧಿಯಲ್ಲಿ ಲಕ್ಷಾಂತರ ಭಕ್ತರಿಗೆ ಊಟದ ವ್ಯವಸ್ಥೆ ಮಾಡಲಾಗಿದೆ. ಜಾತ್ರೆಯ ದಾಸೋಹದ ಪ್ರಮುಖ ವೈಶಿಷ್ಟ್ಯವೆಂದರೆ ಗ್ರಾಮೀಣ ಸುವಾಸನೆ ಹೊತ್ತ ಜೋಳ ಮತ್ತು ಸಜ್ಜೆ ರೊಟ್ಟಿಯ ಸವಿ.
ಜಾತ್ರೆಗೆ ಮುನ್ನವೇ ಹಟ್ಟಿ, ಕಿನ್ನಾಳ, ಇರಕಲಗಡ ಸೇರಿದಂತೆ ಸುತ್ತಮುತ್ತಲಿನ ಬಹುತೇಕ ಗ್ರಾಮಗಳಲ್ಲಿ ರೊಟ್ಟಿ ಬಡಿಯುವ ಕಾರ್ಯ ಆರಂಭವಾಗಿದ್ದು, ಎಲ್ಲೆಡೆ ರೊಟ್ಟಿಯ ಸಪ್ಪಳ ಮೊಳಗುತ್ತಿದೆ. ಬೆಳಗ್ಗಿನಿಂದ ಸಂಜೆಯವರೆಗೂ ದುಡಿಯುವ ಮಹಿಳೆಯರು, ರಾತ್ರಿ ವೇಳೆಯಲ್ಲೂ ಗುಂಪುಗೂಡಿ ರೊಟ್ಟಿ ತಟ್ಟುವ ಮೂಲಕ ದಾಸೋಹಕ್ಕೆ ತಯಾರಿ ನಡೆಸಿದ್ದರು.
ಈ ಬಾರಿ ಮಹಾದಾಸೋಹಕ್ಕಾಗಿ ಸುಮಾರು 15 ಲಕ್ಷಕ್ಕೂ ಅಧಿಕ ರೊಟ್ಟಿಗಳು ಸಿದ್ಧಗೊಳ್ಳಲಿವೆ ಎನ್ನಲಾಗಿದ್ದು, ಸಾವಿರಾರು ಸ್ವಯಂಸೇವಕರು, ಗ್ರಾಮಸ್ಥರು ಹಾಗೂ ಭಕ್ತರು ಸೇರಿ ಈ ಸೇವೆಯನ್ನು ಯಶಸ್ವಿಗೊಳಿಸುತ್ತಿದ್ದಾರೆ.
ಜೊತೆಗೆ, ಈ ವರ್ಷದ ಜಾತ್ರೆಯ ಮತ್ತೊಂದು ವಿಶೇಷ ಆಕರ್ಷಣೆಯಾಗಿ ಮೈಸೂರು ಪಾಕ್ ದಾಸೋಹ ಸೇರ್ಪಡೆಯಾಗಿದೆ. ರಾಯಚೂರು ಜಿಲ್ಲೆಯ ಸಿಂಧನೂರು ಗೆಳೆಯರ ಬಳಗದಿಂದ ಸುಮಾರು 10 ಲಕ್ಷ ಮೈಸೂರು ಪಾಕ್ ತಯಾರಿಸಿದ್ದಾರೆ. ಇಂದಿನಿಂದ ಎರಡು ದಿನಗಳ ಕಾಲ ಮೈಸೂರು ಪಾಕ್ ತಯಾರಿ ಕಾರ್ಯ ನಡೆಯಲಿದ್ದು, ಇದಕ್ಕಾಗಿ ಸುಮಾರು 150 ಮಂದಿ ಬಾಣಸಿಗರು ಶ್ರಮಿಸುತ್ತಿದ್ದಾರೆ.
ಮೈಸೂರು ಪಾಕ್ ತಯಾರಿಗಾಗಿ 60 ಕ್ವಿಂಟಾಲ್ ಸಕ್ಕರೆ, 30 ಕ್ವಿಂಟಾಲ್ ಕಡಲೆ ಹಿಟ್ಟು, 5,000 ಲೀಟರ್ ಎಣ್ಣೆ, 3 ಕ್ವಿಂಟಾಲ್ ತುಪ್ಪ ಹಾಗೂ 50 ಕೆಜಿ ಏಲಕ್ಕಿಯನ್ನು ಬಳಸಲಾಗುತ್ತಿದೆ. ಸಿಂಧನೂರು ಗೆಳೆಯರ ಬಳಗ ಕಳೆದ ಹತ್ತು ವರ್ಷಗಳಿಂದ ನಿರಂತರವಾಗಿ ಗವಿಮಠದ ದಾಸೋಹ ಸೇವೆಯಲ್ಲಿ ತೊಡಗಿಸಿಕೊಂಡಿದ್ದು, ಈ ಹಿಂದೆ ಬೂಂದಿ ಲಾಡು, ಶೇಂಗಾ ಹೊಳಿಗೆ, ಜಿಲೇಬಿ ಸೇರಿದಂತೆ ವಿವಿಧ ಸಿಹಿ ಪದಾರ್ಥಗಳನ್ನು ಭಕ್ತರಿಗೆ ಅರ್ಪಿಸಿದ್ದರು. ಈ ವರ್ಷ ಮೊದಲ ಬಾರಿಗೆ ಮೈಸೂರು ಪಾಕ್ ತಯಾರಿಸುವ ಮೂಲಕ ವಿಶೇಷತೆ ಮೆರೆದಿದ್ದಾರೆ.





