ಕೋಲಾರ, ಮಾರ್ಚ್ 15: ರಾಜ್ಯದಾದ್ಯಂತ ಎಲ್‌ಪಿಜಿ ಸಿಲಿಂಡರ್ ಸಮಸ್ಯೆ (LPG Cylinder Crisis) ತೀವ್ರವಾಗಿರುವ ಈ ಹೊತ್ತಿನಲ್ಲೇ, ಕೆಲವು ಹೋಟೆಲ್ ಮತ್ತು ಬೇಕರಿ ಮಾಲೀಕರು ಅಕ್ರಮವಾಗಿ ಗೃಹಬಳಕೆ ಸಿಲಿಂಡರ್‌ಗಳನ್ನು (Domestic Cylinders) ಬಳಸುತ್ತಿರುವ ಘಟನೆ ಕೋಲಾರ ಜಿಲ್ಲೆಯ ಬಂಗಾರಪೇಟೆಯಲ್ಲಿ ಬೆಳಕಿಗೆ ಬಂದಿದೆ. ಬಂಗಾರಪೇಟೆ ತಹಶೀಲ್ದಾರ್ ಸುಜಾತಾ ಅವರ ನೇತೃತ್ವದಲ್ಲಿ ನಡೆದ ವಿಶೇಷ ಕಾರ್ಯಾಚರಣೆಯಲ್ಲಿ ಒಟ್ಟು 21 ಗೃಹಬಳಕೆ ಸಿಲಿಂಡರ್‌ಗಳನ್ನು ವಶಕ್ಕೆ ಪಡೆಯಲಾಗಿದೆ.
ಕೋಲಾರ ಜಿಲ್ಲೆಯ ಬಂಗಾರಪೇಟೆ ಪಟ್ಟಣದಲ್ಲಿ ಈ ದಾಳಿ ನಡೆದಿದ್ದು, ವಾಣಿಜ್ಯ ಬಳಕೆಗೆ ನಿರ್ದಿಷ್ಟವಾಗಿ ನೀಡಲಾಗುವ ಕಮರ್ಷಿಯಲ್ ಸಿಲಿಂಡರ್‌ಗಳ ಬದಲು ಗೃಹಬಳಕೆ ಸಿಲಿಂಡರ್‌ಗಳನ್ನು ಬಳಸುತ್ತಿತ್ತು. ಈ ಹಿನ್ನೆಲೆಯಲ್ಲಿ ತಹಶೀಲ್ದಾರ್ ಸುಜಾತಾ ಅವರ ನೇತೃತ್ವದ ತಂಡ ಹಲವು ಹೋಟೆಲ್ ಮತ್ತು ಬೇಕರಿಗಳ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಿತು.
ಅಧಿಕಾರಿಗಳ ತಂಡ ಎರಡು ಬೇಕರಿ ಮತ್ತು ಐದುಕ್ಕೂ ಹೆಚ್ಚು ಹೋಟೆಲ್‌ಗಳಲ್ಲಿ ತಪಾಸಣೆ ನಡೆಸಿದಾಗ, ವಾಣಿಜ್ಯ ಬಳಕೆಗೆ ಬೇಕಾದ ಸಿಲಿಂಡರ್‌ಗಳ ಬದಲು ಗೃಹಬಳಕೆ ಸಿಲಿಂಡರ್ ಬಳಸುತ್ತಿರುವುದು ಬೆಳಕಿಗೆ ಬಂದಿದೆ. ನಿಯಮ ಉಲ್ಲಂಘನೆಯ ಹಿನ್ನೆಲೆಯಲ್ಲಿ 21 ಗೃಹಬಳಕೆ ಸಿಲಿಂಡರ್‌ಗಳನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಜೊತೆಗೆ ಸಂಬಂಧಪಟ್ಟ ಮಾಲೀಕರಿಗೆ ಕಟ್ಟುನಿಟ್ಟಿನ ಎಚ್ಚರಿಕೆಯನ್ನು ನೀಡಲಾಗಿದೆ.
ದಾಳಿ ವೇಳೆ ಬಂಗಾರಪೇಟೆಯ ಕೆಲವು ಪ್ರಸಿದ್ಧ ಹೋಟೆಲ್‌ಗಳ ಮೇಲೂ ಅಧಿಕಾರಿಗಳು ಪರಿಶೀಲನೆ ನಡೆಸಿದರು. ಬಿಜಿಟಿ, ಮುಬಾರಕ್, ಆಂಬೂರ್ ಹಾಗೂ ಕೆಜಿಎನ್ ಬಿರಿಯಾನಿ ಹೋಟೆಲ್‌ಗಳಲ್ಲಿ ತಪಾಸಣೆ ನಡೆಸಿದ ಅಧಿಕಾರಿಗಳು ಅಕ್ರಮ ಬಳಕೆಯನ್ನು ಪತ್ತೆಹಚ್ಚಿದ್ದಾರೆ.
ಈ ಕಾರ್ಯಾಚರಣೆಯಿಂದ ಹೋಟೆಲ್ ಮಾಲೀಕರು ತಕ್ಷಣವೇ ನಿಯಮಾನುಸಾರ ಕಮರ್ಷಿಯಲ್ ಸಿಲಿಂಡರ್ ಬಳಕೆ ಮಾಡುವುದಾಗಿ ಭರವಸೆ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಇಂತಹ ಅಕ್ರಮಗಳು ಕಂಡುಬಂದರೆ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.
ಅಲ್ಲದೆ, ದಾಳಿ ವೇಳೆ ಕೆಲವು ಹೋಟೆಲ್‌ಗಳಲ್ಲಿ ಸ್ವಚ್ಛತೆ ಕೊರತೆ ಕೂಡ ಅಧಿಕಾರಿಗಳ ಗಮನಕ್ಕೆ ಬಂದಿದೆ. ಆಹಾರ ತಯಾರಿಕೆ ನಡೆಯುವ ಸ್ಥಳಗಳಲ್ಲಿ ಸ್ವಚ್ಛತೆಯ ನಿಯಮಗಳನ್ನು ಪಾಲಿಸದಿರುವುದು ಕಂಡುಬಂದಿದೆ.
ತಹಶೀಲ್ದಾರ್ ಸುಜಾತಾ ಮಾತನಾಡಿ, ಗೃಹಬಳಕೆ ಸಿಲಿಂಡರ್‌ಗಳನ್ನು ವಾಣಿಜ್ಯ ಉದ್ದೇಶಗಳಿಗೆ ಬಳಸುವುದು ನಿಯಮಬಾಹಿರವಾಗಿದೆ. ಸರ್ಕಾರದಿಂದ ಸಬ್ಸಿಡಿ ನೀಡಲಾಗುವ ಸಿಲಿಂಡರ್‌ಗಳನ್ನು ವ್ಯಾಪಾರಕ್ಕಾಗಿ ಬಳಸುವುದರಿಂದ ಸಾಮಾನ್ಯ ಜನರಿಗೆ ಸಿಲಿಂಡರ್ ಲಭ್ಯತೆ ಸಮಸ್ಯೆಯಾಗಬಹುದು. ಈ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಇಂತಹ ಅಕ್ರಮಗಳ ವಿರುದ್ಧ ನಿರಂತರವಾಗಿ ಕಾರ್ಯಾಚರಣೆ ಮುಂದುವರಿಸಲಾಗುವುದು ಎಂದು ತಿಳಿಸಿದ್ದಾರೆ.





