ಬೆಂಗಳೂರು: “ನನಗೆ ಮಗು ಇದೆ, ದಯವಿಟ್ಟು ಬಿಟ್ಟುಬಿಡಿ ಎಂದು ಮನವಿ ಮಾಡಿದೆವು. ಆದರೆ ಅವರು ಕಿವಿಗೊಡಲಿಲ್ಲ. ನಾವಿಲ್ಲಿ ಕಷ್ಟದಲ್ಲಿರುವಾಗ, ನೀವು ಹೇಗೆ ಸಂಭ್ರಮಿಸಬಹುದು ಎಂದು ಕೇಳಿದ ನಂತರ ನನ್ನ ಪತಿಯ ತಲೆಗೆ ಗುಂಡು ಹಾರಿಸಿದರು” ಎಂದು ಭಯೋತ್ಪಾದಕ ದಾಳಿಯಲ್ಲಿ ಪತಿಯನ್ನು ಕಳೆದುಕೊಂಡ ಡಾ. ಸುಜಾತಾ ಕಣ್ಣೀರಿಟ್ಟಿದ್ದಾರೆ.
ಏಪ್ರಿಲ್ 18ರಂದು ಬೆಂಗಳೂರಿನಿಂದ ಕುಟುಂಬ ಸಮೇತವಾಗಿ ಕಾಶ್ಮೀರ ಪ್ರವಾಸಕ್ಕೆ ತೆರಳಿದ್ದ ಸುಜಾತಾ ಮತ್ತು ಭರತ್, ಪಹಲ್ಗಾಮ್‌ನಲ್ಲಿರುವ ಬೈಸರನ್ ಪ್ರದೇಶಕ್ಕೆ ಭೇಟಿ ನೀಡಿದ್ದರು. ಪ್ರಕೃತಿ ಸೌಂದರ್ಯದಿಂದ ಮಿಂಚುತ್ತಿರುವ ಈ ಸ್ಥಳವನ್ನು ಮಿನಿ ಸ್ವಿಟ್ಜರ್‌ಲ್ಯಾಂಡ್ ಎಂದೇ ಕರೆಯುತ್ತಾರೆ. ಪೈನ್ ಮರಗಳಿಂದ ಆವೃತವಾದ ಆ ಹಸಿರಿನ ಪ್ರದೇಶದಲ್ಲಿ ಪ್ರವಾಸಿಗರು ಕಾಶ್ಮೀರ ಉಡುಪಿನಲ್ಲಿ ಚಿತ್ರ ಸೆರೆಹಿಡಿಯುತ್ತಿರುವ ದೃಶ್ಯ ಕಂಡು ಬಂತಿತ್ತು. ಮಧ್ಯಾಹ್ನ 1.30ಕ್ಕೆ ಹಸಿವಾಗಿದ್ದ ಕಾರಣ ಕುಟುಂಬ ಹಿಂತಿರುಗಲು ನಿರ್ಧರಿಸಿತು.
ಅದೇ ವೇಳೆ ಇದ್ದಕ್ಕಿದ್ದಂತೆ ಗುಂಡಿನ ಶಬ್ದ ಕೇಳಿಸಿತ್ತು. ಪ್ರಾರಂಭದಲ್ಲಿ ಪಟಾಕಿ ಅಥವಾ ಕಾಡು ಪ್ರಾಣಿಗಳನ್ನು ಹೆದರಿಸಲು ಸಿಡಿಸುವ ಶಬ್ದವೆಂದು ಎಲ್ಲರೂ ಭಾವಿಸಿದರು. ಆದರೆ ಶಬ್ದಗಳ ತೀವ್ರತೆ ಹೆಚ್ಚಿದಂತೆ ಆತಂಕದ ವಾತಾವರಣ ನಿರ್ಮಾಣವಾಯಿತು. ಪ್ರವಾಸಿಗರು ಟೆಂಟ್‌ಗಳ ಕಡೆಗೆ ಓಡತೊಡಗಿದರು. ಪ್ರವಾಸಿಗರ ಮೇಲೆ ದಾಳಿ ನಡೆಯುತ್ತಿದೆ ಎಂಬುದು ಸ್ಪಷ್ಟವಾಯಿತು.
ಸುಜಾತಾ ಅವರ ಪ್ರಕಾರ, ತಮ್ಮಿಂದ ಸుಮಾರು 500 ಮೀಟರ್ ದೂರದಲ್ಲಿ ಮತ್ತೊಂದು ದಂಪತಿಯತ್ತ ಉಗ್ರರು ಗುಂಡು ಹಾರಿಸಿ ಹತ್ಯೆ ಮಾಡಿದರು. ಕೆಲವು ಕ್ಷಣಗಳಲ್ಲೇ ಒಬ್ಬ ಉಗ್ರ ಭರತ್ ಅವರ ಹಿಂದೆ ನಿಂತಿದ್ದ. ಆತುರದಿಂದ ಪತ್ನಿಗೆ “ಚಿಂತಿಸಬೇಡ, ಶಾಂತವಾಗಿರು” ಎಂದು ಭರವಸೆ ನೀಡುತ್ತಿದ್ದರು. ಸುಜಾತಾ ಅವರು ಮಗುವನ್ನು ತೋರಿಸಿ, “ದಯವಿಟ್ಟು ಗುಂಡು ಹಾರಿಸಬೇಡಿ” ಎಂದು ಕೇಳಿಕೊಂಡರೂ ಭಯೋತ್ಪಾದಕನು ಕಿವಿಗೊಡಲಿಲ್ಲ. ಎರಡು ಬಾರಿ ಭರತ್ ಅವರ ತಲೆಗೆ ಗುಂಡು ಹಾರಿಸಿ, ಅವರನ್ನು ಕೊಂದುಹಾಕಿದರು.
“ನಮ್ಮ ಮುಂದೆಯೇ ಪತಿ ನೆಲಕ್ಕುರುಳಿದರು. ಆ ಘಳಿಕೆಯಲ್ಲಿ ಭಯೋತ್ಪಾದಕನು ‘ನಾವಿಲ್ಲಿ ಸಂಕಷ್ಟದಲ್ಲಿದ್ದೇವೆ. ನೀವು ಇಲ್ಲಿ ಆನಂದಿಸಲು ಬಂದಿದ್ದೀರಿ? ಎಂದು ಹೇಳಿದನ್ನು ನಾನು ಕೇಳಿದೆ” ಎಂದು ಡಾ. ಸುಜಾತಾ ಹೇಳಿದ್ದಾರೆ. ಅವರು ತಮ್ಮ ಕುಟುಂಬ ಯಾವ ಧರ್ಮಕ್ಕೆ ಸೇರಿದವರು ಎಂಬುದನ್ನೂ ಪ್ರಶ್ನಿಸಲಿಲ್ಲ. ಕೇವಲ ಸಂಭ್ರಮಿಸುತ್ತಿದ್ದೀರಿ ಎಂಬ ಕಾರಣಕ್ಕಾಗಿ ಗುಂಡು ಹಾರಿಸಿದರು.
ಪತಿಯು ನೆಲಕ್ಕುರುಳುತ್ತಿದ್ದಂತೆ, ಅವರು ತಕ್ಷಣ ಪತಿಯ ಜೇಬಿನಲ್ಲಿ ಇದ್ದ ದಾಖಲೆಗಳು ಹಾಗೂ ಮೊಬೈಲ್ ತೆಗೆದುಕೊಂಡು ಮಗನೊಂದಿಗೆ ಸುರಕ್ಷಿತ ಸ್ಥಳದತ್ತ ಓಡಿದರು. ಸುತ್ತಲೂ ಗುಂಡಿನ ಶಬ್ದ ಕೇಳಿಸುತ್ತಲೇ ಇತ್ತು. ಎಲ್ಲೆಡೆ ಶವಗಳು ಬಿದ್ದಿದ್ದವು. ಪಹಲ್ಗಾಮ್ ಪಟ್ಟಣದಲ್ಲಿ ಭದ್ರತೆ ಇದ್ದರೂ ಬೈಸರನ್ ಬೆಟ್ಟದ ತುದಿಯಲ್ಲಿ ಯಾವುದೇ ಭದ್ರತೆ ಇರಲಿಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.