ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಆಹಾರ ಸೇವನೆಗೆ ಸಂಬಂಧಿಸಿದಂತೆ ಹಿರಿಯರು ಬಹಳ ಶಿಸ್ತಿನ ನಿಯಮಗಳನ್ನು ಅನುಸರಿಸುತ್ತಿದ್ದರು. ಊಟವನ್ನು ಕುಳಿತುಕೊಂಡು ತಿನ್ನಬೇಕು, ಆಹಾರವನ್ನು ಚೆನ್ನಾಗಿ ಅಗಿಯಬೇಕು, ಒಂದು ಬಾಯಿಗೆ ಎಷ್ಟು ಪ್ರಮಾಣದಲ್ಲಿ ತಿನ್ನಬೇಕು ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡಿದ್ದಾರೆ. ಆಹಾರವನ್ನು ತಿನ್ನುವಾಗ ಗಡಿಬಿಡಿಯಿಲ್ಲದೆ, ಶಾಂತವಾಗಿ, ಗಮನವಿಟ್ಟು ಸೇವಿಸಬೇಕು ಎಂಬುದು ಅವರ ಸಲಹೆಯಾಗಿತ್ತು.
ಇಂದಿನ ವೇಗದ ಜೀವನಶೈಲಿಯಲ್ಲಿ ಜನರಿಗೆ ಆಹಾರ ಸೇವನೆಗೆ ಸಾಕಷ್ಟು ಸಮಯವೇ ಇಲ್ಲ. ನೀರು ಕುಡಿಯಲೂ ಸಮಯವಿಲ್ಲದಷ್ಟು ಒತ್ತಡದ ಜೀವನದಲ್ಲಿ, ಆಹಾರವನ್ನು ಸರಿಯಾಗಿ ಅಗಿಯದೆ ತಿನ್ನುವ ಚಟ ಜನರಲ್ಲಿ ಮೂಡಿದೆ. ಇದರಿಂದಾಗಿ ಕೆಲವೊಮ್ಮೆ ದುರಂತಕಾರಿ ಘಟನೆಗಳು ಸಂಭವಿಸುತ್ತವೆ. ಅಂತಹದೊಂದು ಆಘಾತಕಾರಿ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಬಿಣಗಾ ಗ್ರಾಮದಲ್ಲಿ ನಡೆದಿದೆ. ಯುವಕನೊಬ್ಬ ಊಟದ ವೇಳೆ ಅನ್ನದ ಅಗಳು ಗಂಟಲಿನಲ್ಲಿ ಸಿಲುಕಿ ದಾರುಣವಾಗಿ ಸಾವನ್ನಪ್ಪಿದ್ದಾನೆ.
ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಬಿಣಗಾ ಗ್ರಾಮದ ನಿವಾಸಿಯಾಗಿದ್ದ ಅಮಿತ್ ಮಾಳಸೇರ (38) ಎಂಬ ಯುವಕನಿಗೆ ಈ ದುರಂತ ಸಂಭವಿಸಿದೆ. ಘಟನೆಯ ವಿವರಗಳ ಪ್ರಕಾರ, ಅಮಿತ್ ತನ್ನ ಮನೆಯಲ್ಲಿ ಊಟ ಮಾಡುತ್ತಿದ್ದಾಗ, ಅನ್ನದ ಒಂದು ತುತ್ತು ಗಂಟಲಿನಲ್ಲಿ ಸಿಲುಕಿಕೊಂಡಿದೆ. ಇದರಿಂದ ಉಸಿರಾಟದ ತೊಂದರೆಯಾಗಿ ತೀವ್ರವಾಗಿ ನರಳಾಡಿದ್ದಾನೆ. ಮನೆಯವರು ತಕ್ಷಣವೇ ನೀರು ಕುಡಿಸಲು ಪ್ರಯತ್ನಿಸಿದರೂ, ಅವನ ಆರೋಗ್ಯ ಸ್ಥಿತಿ ಹದಗೆಟ್ಟಿದೆ. ತಕ್ಷಣವೇ ಅವನನ್ನು ಕಾರವಾರದ ಜಿಲ್ಲಾಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೂ ಆಸ್ಪತ್ರೆಗೆ ತಲುಪುವಷ್ಟರಲ್ಲಿ ಅವನು ಕೊನೆಯುಸಿರೆಳೆದಿದ್ದಾನೆ. ಈ ಘಟನೆಯ ಕುರಿತು ಕಾರವಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.