ವಿಜಯನಗರ: ವಿವಾಹಿತೆಯೊಬ್ಬರು ತನ್ನ ಪ್ರಿಯಕರ ಮೋಸ ಮಾಡಿದ್ದಕ್ಕೆ ತುಂಗಭದ್ರಾ ನದಿಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವಿಜಯನಗರ ಜಿಲ್ಲೆಯ ಹಡಗಲಿ ತಾಲೂಕಿನ ಮದಲಗಟ್ಟಿ ಗ್ರಾಮದಲ್ಲಿ ನಡೆದಿದೆ. ಮಹಿಳೆ ತನ್ನ ಸಾವಿನ ಮುಂಚೆ ಒಂದು ಡೆತ್ ನೋಟ್ ಬರೆದಿಟ್ಟಿದ್ದು, ಅದರಲ್ಲಿ “ನನ್ನ ಸಾವಿಗೆ ನನ್ನ ಪ್ರಿಯತಮನೇ ಕಾರಣ” ಎಂದು ಹೇಳಿದ್ದಾಳೆ. ಕೆ.ಅಯ್ಯನಹಳ್ಳಿ ಗ್ರಾಮದ ವಿವಾಹಿತೆ ಮಹಿಳೆ ಎಂದು ತಿಳಿದುಬಂದಿದೆ.
ಮಹಿಳೆಯೊಬ್ಬರು ತಾನು ಆತ್ಮಹತ್ಯೆ ಮಾಡಿಕೊಳ್ಳುವ ಕಾರಣವನ್ನು ಒಂದು ಪತ್ರದಲ್ಲಿ ವಿವರಿಸಿದ್ದು, “ನನ್ನ ಸಾವಿಗೆ ನನ್ನ ಪ್ರಿಯತಮ ಸುಗೂರು ಶಿವಮೂರ್ತಿಯೇ ಕಾರಣ. ಈತನಿಗೆ ಮರಣದಂಡನೆ ಶಿಕ್ಷೆಯಾಗಬೇಕು. ನನ್ನನ್ನು ಲೈಂಗಿಕವಾಗಿ ಬಳಸಿಕೊಂಡಿದ್ದಾನೆ, ಮದುವೆಯಾಗುವುದಾಗಿ ಹೇಳಿ ಮೋಸ ಮಾಡಿದ್ದಾನೆ. ನನ್ನನ್ನು ಪ್ರೀತಿಸುತ್ತಿದ್ದೇನೆ ಎಂದು ಹೇಳುತ್ತಾ ಸಾಕಷ್ಟು ಹುಡುಗಿಯರ ಜೊತೆ ಸುತ್ತಾಡಿ ಕೊನೆಗೆ ನನ್ನನ್ನು ಬಿಟ್ಟಿದ್ದಾನೆ” ಎಂದು ತಿಳಿಸಿದ್ದಾರೆ.
ಘಟನೆಯ ವಿವರಗಳ ಪ್ರಕಾರ, ಮಹಿಳೆಯು ತುಂಗಭದ್ರಾ ಸೇತುವೆಯಿಂದ ನದಿಗೆ ಜಿಗಿಯುವುದನ್ನು ಕೆಲವು ಬೈಕ್ ಸವಾರರು ಗಮನಿಸಿದ್ದಾರೆ. ಅವರು ತಕ್ಷಣವೇ ಮದಲಗಟ್ಟಿ ಗ್ರಾಮಸ್ಥರಿಗೆ ಮಾಹಿತಿ ನೀಡಿದ್ದಾರೆ. ಸ್ಥಳೀಯ ಮೀನುಗಾರರು ಮಹಿಳೆಯನ್ನು ರಕ್ಷಿಸಲು ಪ್ರಯತ್ನಿಸಿದರೂ, ನದಿಯ ರಭಸಕ್ಕೆ ಆಕೆ ಕೊಚ್ಚಿಹೋಗಿದ್ದಾಳೆ ಎಂದು ತಿಳಿದುಬಂದಿದೆ. ಈ ಘಟನೆಯು ಹೂವಿನಹಡಗಲಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದ್ದು, ಪೊಲೀಸರು ತನಿಖೆಯನ್ನು ಆರಂಭಿಸಿದ್ದಾರೆ.
ಕಾಣೆಯಾದ ಮಹಿಳೆ ಮತ್ತು ಕೆ.ಅಯ್ಯನಹಳ್ಳಿಯಲ್ಲಿ ಪತ್ರ ಬರೆದಿಟ್ಟ ಮಹಿಳೆ ಒಬ್ಬರೇ ಎಂದು ಪೊಲೀಸರು ಸಂಶಯ ವ್ಯಕ್ತಪಡಿಸಿದ್ದಾರೆ. ಪತ್ರದಲ್ಲಿ ಉಲ್ಲೇಖಿತ ಆರೋಪಿಯಾದ ಸುಗೂರು ಶಿವಮೂರ್ತಿಯ ವಿರುದ್ಧ ಕಾನೂನು ಕ್ರಮಕ್ಕೆ ಪೊಲೀಸರು ಸಿದ್ಧತೆ ನಡೆಸುತ್ತಿದ್ದಾರೆ.