ಬೆಂಗಳೂರು, ಜನವರಿ 13: ತಮಿಳುನಾಡು ಕರಾವಳಿಯಲ್ಲಿ ಚಂಡಮಾರುತ ರೂಪುಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಕರ್ನಾಟಕದ ಹವಾಮಾನದಲ್ಲಿ ಬದಲಾವಣೆ ಕಂಡುಬಂದಿದೆ. ಕಳೆದ ಕೆಲವು ದಿನಗಳಿಂದ ಅನುಭವಿಸುತ್ತಿದ್ದ ತೀವ್ರ ಚಳಿ ಇದೀಗ ಕಡಿಮೆಯಾಗಿದ್ದು, ರಾಜ್ಯದ ಹಲವೆಡೆ ಮೋಡ ಕವಿದ ವಾತಾವರಣ ನಿರ್ಮಾಣವಾಗಿದೆ. ಇದರ ಪರಿಣಾಮವಾಗಿ ಕರಾವಳಿ ಮತ್ತು ಮಲೆನಾಡು ಭಾಗದ ಕೆಲವು ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಉಡುಪಿ, ಉತ್ತರ ಕನ್ನಡ, ಚಾಮರಾಜನಗರ, ಚಿಕ್ಕಮಗಳೂರು, ಹಾಸನ, ಕೊಡಗು ಮತ್ತು ಮೈಸೂರು ಜಿಲ್ಲೆಗಳಲ್ಲಿ ಇಂದು ಅಥವಾ ಮುಂದಿನ 24 ಗಂಟೆಗಳ ಅವಧಿಯಲ್ಲಿ ಸಾಧಾರಣ ಮಳೆಯಾಗುವ ನಿರೀಕ್ಷೆ ಇದೆ. ಬೆಂಗಳೂರು ನಗರದಲ್ಲಿಯೂ ಮೋಡ ಕವಿದ ವಾತಾವರಣವಿದ್ದು, ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆ ಕಂಡುಬಂದಿದೆ. ಇದರಿಂದಾಗಿ ನಗರದಲ್ಲಿ ತಾಪಮಾನ ಸ್ವಲ್ಪ ಇಳಿಕೆಯಾಗಿದ್ದು, ಬೆಳಗ್ಗೆ ಮತ್ತು ಸಂಜೆ ವೇಳೆಗೆ ತಂಪು ವಾತಾವರಣ ಅನುಭವವಾಗುತ್ತಿದೆ.
ಉತ್ತರ ಒಳನಾಡು ಹಾಗೂ ಮಧ್ಯ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಒಣಹವಾಮಾನ ಮುಂದುವರಿಯಲಿದೆ. ಬಾಗಲಕೋಟೆ, ಬೀದರ್, ಧಾರವಾಡ, ಗದಗ, ಹಾವೇರಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿ, ಚಿತ್ರದುರ್ಗ, ದಾವಣಗೆರೆ, ಕೋಲಾರ, ಮಂಡ್ಯ, ರಾಮನಗರ ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಒಣಹವೆ ಇರಲಿದೆ ಎಂದು ತಿಳಿಸಲಾಗಿದೆ.
ರಾಜ್ಯದಲ್ಲಿ ಅತ್ಯಂತ ಕಡಿಮೆ ತಾಪಮಾನ ಬೀದರ್‌ನಲ್ಲಿ ದಾಖಲಾಗಿದ್ದು, ಕನಿಷ್ಠ ಉಷ್ಣಾಂಶ 12.5 ಡಿಗ್ರಿ ಸೆಲ್ಸಿಯಸ್ ಆಗಿದೆ. ಬೆಂಗಳೂರಿನ ಎಚ್‌ಎಎಲ್ ಪ್ರದೇಶದಲ್ಲಿ ಗರಿಷ್ಠ ಉಷ್ಣಾಂಶ 23.5 ಡಿಗ್ರಿ ಸೆಲ್ಸಿಯಸ್ ಹಾಗೂ ಕನಿಷ್ಠ 17.1 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ನಗರ ಪ್ರದೇಶದಲ್ಲಿ 23.4 ಡಿಗ್ರಿ ಗರಿಷ್ಠ ಹಾಗೂ 18.0 ಡಿಗ್ರಿ ಕನಿಷ್ಠ ಉಷ್ಣಾಂಶ ಕಂಡುಬಂದಿದೆ. ಕೆಐಎಎಲ್‌ನಲ್ಲಿ 23.6/17.2 ಡಿಗ್ರಿ ಸೆಲ್ಸಿಯಸ್ ಮತ್ತು ಜಿಕೆವಿಕೆಯಲ್ಲಿ 24.4/13.2 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ.
ಕರಾವಳಿ ಜಿಲ್ಲೆಗಳಾದ ಹೊನ್ನಾವರದಲ್ಲಿ 35.5 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಹಾಗೂ 23.2 ಡಿಗ್ರಿ ಕನಿಷ್ಠ ಉಷ್ಣಾಂಶ ದಾಖಲಾಗಿದ್ದು, ಕಾರವಾರದಲ್ಲಿ 33.6/24.2 ಡಿಗ್ರಿ ಸೆಲ್ಸಿಯಸ್ ತಾಪಮಾನವಿದೆ. ಮಂಗಳೂರು ವಿಮಾನ ನಿಲ್ದಾಣದಲ್ಲಿ 32.8 ಡಿಗ್ರಿ ಗರಿಷ್ಠ ಮತ್ತು 22.5 ಡಿಗ್ರಿ ಕನಿಷ್ಠ ಉಷ್ಣಾಂಶ ದಾಖಲಾಗಿದೆ.
ಉತ್ತರ ಕರ್ನಾಟಕದ ಬೆಳಗಾವಿ ವಿಮಾನ ನಿಲ್ದಾಣದಲ್ಲಿ 25.6/16.2 ಡಿಗ್ರಿ ಸೆಲ್ಸಿಯಸ್, ವಿಜಯಪುರದಲ್ಲಿ 27.0/15.4 ಡಿಗ್ರಿ ಸೆಲ್ಸಿಯಸ್ ಹಾಗೂ ಧಾರವಾಡದಲ್ಲಿ 26.0/15.5 ಡಿಗ್ರಿ ಸೆಲ್ಸಿಯಸ್ ತಾಪಮಾನ ಕಂಡುಬಂದಿದೆ. ಕಲಬುರಗಿಯಲ್ಲಿ 30.2 ಡಿಗ್ರಿ ಗರಿಷ್ಠ ಹಾಗೂ 19.2 ಡಿಗ್ರಿ ಕನಿಷ್ಠ ಉಷ್ಣಾಂಶ ದಾಖಲಾಗಿದೆ.
ಇದೇ ವೇಳೆ ಮಹಾರಾಷ್ಟ್ರದ ದಕ್ಷಿಣ ಭಾಗಗಳು, ಮರಾಠವಾಡ ಹಾಗೂ ಕೇರಳ, ತಮಿಳುನಾಡು, ಲಕ್ಷದ್ವೀಪ ಮತ್ತು ಪುದುಚೇರಿಯಲ್ಲಿ ಮಳೆಯಾಗುವ ಸಾಧ್ಯತೆ ಇದೆ. ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ ಒಣಹವಾಮಾನ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.





