ಬೆಂಗಳೂರು: ಫೆಬ್ರವರಿ ಆರಂಭದಿಂದಲೇ ರಾಜ್ಯದಲ್ಲಿ ಬಿಸಿಲ ತಾಪಮಾನ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಹವಾಮಾನ ತಜ್ಞರ ಪ್ರಕಾರ, ಈ ವರ್ಷ ಬೇಸಿಗೆ ಸಾಮಾನ್ಯಕ್ಕಿಂತ ತೀವ್ರವಾಗಿದ್ದು, ಮಾರ್ಚ್‌ನಿಂದ ಬಿಸಿಲಿನ ಪ್ರಮಾಣ ಇನ್ನಷ್ಟು ಹೆಚ್ಚಾಗಲಿದೆ.
ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆ ಬಿಸಿಲು ಹೆಚ್ಚಳಈಗಾಗಲೇ ಬೆಂಗಳೂರಿನ ತಾಪಮಾನ ಗರಿಷ್ಠ 32 ಡಿಗ್ರಿ ಸೆಲ್ಸಿಯಸ್ ದಾಟಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಏರಿಕೆ ಸಾಧ್ಯತೆ ಇದೆ. ಕರಾವಳಿ ಮತ್ತು ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಉಷ್ಣಾಂಶ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಜನರು ಹೆಚ್ಚಿನ ಬಿಸಿಗೆ ಸಿದ್ಧರಾಗಬೇಕಾಗಿದೆ ಎಂದು ಹವಾಮಾನ ತಜ್ಞ ಶ್ರೀನಿವಾಸ್ ರೆಡ್ಡಿ ತಿಳಿಸಿದ್ದಾರೆ.
ಹವಾಮಾನ ವೈಪರೀತ್ಯ: ಚಳಿ, ಮಳೆ, ಈಗ ತೀವ್ರ ಬಿಸಿಲುಈ ಬಾರಿ ಮಳೆ ಹಾಗೂ ಚಳಿ ಹೆಚ್ಚಾಗಿದ್ದರಿಂದ, ಇದೀಗ ಬಿಸಿಲು ಸಹ ಅತಿ ತೀವ್ರವಾಗಲಿದೆ. ದಕ್ಷಿಣ ಒಳನಾಡಿನ ಕೆಲವು ಪ್ರದೇಶಗಳಲ್ಲಿ ಗರಿಷ್ಠ ಉಷ್ಣಾಂಶ 1 ರಿಂದ 3 ಡಿಗ್ರಿ ಸೆಲ್ಸಿಯಸ್ ಹೆಚ್ಚಾಗಿರುವುದಾಗಿ ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ತಾಪಮಾನ ವಿವರ (ಡಿಗ್ರಿ ಸೆಲ್ಸಿಯಸ್
ನಗರ ಗರಿಷ್ಠ ಉಷ್ಣಾಂಶ ವಾಡಿಕೆಗಿಂತ ಹೆಚ್ಚಾದ ಪ್ರಮಾಣ
ಬೆಂಗಳೂರು 32.8 1.4
ದಾವಣಗೆರೆ 36.2 3.2
ಕಲಬುರಗಿ 37.6 2.6
ಬಾಗಲಕೋಟೆ 37.6 2.6
ಗದಗ 35.1 2.1
ಕಳೆದ 24 ಗಂಟೆಗಳ ಅವಧಿಯಲ್ಲಿ ದಕ್ಷಿಣ ಒಳನಾಡಿನ ಕೆಲವೆಡೆ ಕನಿಷ್ಠ ಉಷ್ಣಾಂಶವು ಸಾಮಾನ್ಯ ಮಟ್ಟಕ್ಕಿಂತ 2 ರಿಂದ 4 ಡಿಗ್ರಿ ಸೆಲ್ಸಿಯಸ್ ಕಡಿಮೆ ದಾಖಲಾಗಿದ್ದು, ಗರಿಷ್ಠ ಉಷ್ಣಾಂಶವು ಹೆಚ್ಚಾಗಿದೆ. ಈ ವೇಳೆ ಜನರು ಹೆಚ್ಚು ಎಚ್ಚರಿಕೆಯಿಂದ ಇರಲು ಮತ್ತು ಬೇಸಿಗೆಗೆ ಸಿದ್ಧತೆಗಳನ್ನು ಮಾಡಿಕೊಳ್ಳಲು ಹವಾಮಾನ ಇಲಾಖೆ ಸೂಚಿಸಿದೆ.