ಬೆಂಗಳೂರು, ಏಪ್ರಿಲ್ 10: ಕರ್ನಾಟಕದಲ್ಲಿ ಹವಾಮಾನದಲ್ಲಿ ವೈವಿಧ್ಯತೆ ಕಂಡುಬರುತ್ತಿದ್ದು, ಉತ್ತರ ಒಳನಾಡಿನ ಜಿಲ್ಲೆಗಳು ತೀವ್ರ ಬಿಸಿಲಿನ ಕಾಟ ಅನುಭವಿಸುತ್ತಿದ್ದರೆ, ದಕ್ಷಿಣ ಒಳನಾಡು ಹಾಗೂ ಮಲೆನಾಡು ಭಾಗಗಳಲ್ಲಿ ಮಳೆಯ ನಿರೀಕ್ಷೆ ಮೂಡಿದೆ. ಭಾರತೀಯ ಹವಾಮಾನ ಇಲಾಖೆ ನೀಡಿರುವ ಮುನ್ಸೂಚನೆಯ ಪ್ರಕಾರ, ಮುಂದಿನ ಐದು ದಿನಗಳವರೆಗೆ ರಾಜ್ಯದ ಹೆಚ್ಚಿನ ಭಾಗಗಳಲ್ಲಿ ಗರಿಷ್ಠ ತಾಪಮಾನದಲ್ಲಿ ಇಳಿಕೆ ಕಾಣುವ ಸಾಧ್ಯತೆ ಕಡಿಮೆ.
ಉತ್ತರ ಕರ್ನಾಟಕ: 42 ಡಿಗ್ರಿ ತಾಪಮಾನ, ಉಷ್ಣ ಅಲೆ ಭೀತಿ
ಬಾಗಲಕೋಟೆ, ಕಲಬುರಗಿ, ರಾಯಚೂರು, ವಿಜಯಪುರ, ಕೊಪ್ಪಳ, ಬಳ್ಳಾರಿ, ಧಾರವಾಡ, ಗದಗ, ವಿಜಯನಗರ, ಯಾದಗಿರಿ, ಹಾವೇರಿ ಹಾಗೂ ಬೆಳಗಾವಿ ಜಿಲ್ಲೆಗಳಲ್ಲಿ ಉಷ್ಣ ಅಲೆಯ ತೀವ್ರತೆ ಅಧಿಕವಾಗಿದೆ. ಮುಂದಿನ 5 ದಿನಗಳಲ್ಲಿ ಗರಿಷ್ಠ ತಾಪಮಾನ 42 ಡಿಗ್ರಿ ಸೆಲ್ಸಿಯಸ್ ವರೆಗೆ ಏರಿಕೆಯಾಗುವ ಸಾಧ್ಯತೆ ಇದೆ. ವಿಶೇಷವಾಗಿ ಬಾಗಲಕೋಟೆ, ಕಲಬುರಗಿ, ರಾಯಚೂರು, ವಿಜಯಪುರಗಳಲ್ಲಿ ಹಗಲಿನಲ್ಲಿ 40-42 ಡಿಗ್ರಿ ದಾಖಲಾಗುವ ಮುನ್ಸೂಚನೆ ಇದೆ. ಇನ್ನು ರಾತ್ರಿಯ ಸಮಯದಲ್ಲೂ ತಾಪಮಾನ ಸಾಮಾನ್ಯಕ್ಕಿಂತ ಹೆಚ್ಚಿರಲಿದೆ, ಇದು ಆರೋಗ್ಯಕ್ಕೆ ಅಪಾಯಕಾರಿ. ಮಧ್ಯ ಕರ್ನಾಟಕದ ದಾವಣಗೆರೆ ಮತ್ತು ಚಿತ್ರದುರ್ಗದಲ್ಲೂ ಬಿಸಿ ಗಾಳಿ ಮತ್ತು ಆರ್ದ್ರತೆಯ ವಾತಾವರಣ ಇರಲಿದೆ.
ದಕ್ಷಿಣ ಕರ್ನಾಟಕ, ಮಲೆನಾಡು, ಕರಾವಳಿ: ಮಳೆಯ ಸಾಧ್ಯತೆ
ಉತ್ತರ ಕರ್ನಾಟಕ ಸುಡುಗಾಡಿನಂತೆ ಇದ್ದರೆ, ದಕ್ಷಿಣ ಒಳನಾಡಿನ ಬೆಂಗಳೂರು ನಗರ ಮತ್ತು ಗ್ರಾಮಾಂತರ, ಮೈಸೂರು, ಮಂಡ್ಯ, ಹಾಸನ, ಕೊಡಗು ಜಿಲ್ಲೆಗಳಲ್ಲಿ ಸಾಧಾರಣ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ. ಮಲೆನಾಡಿನ ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ – ಅಲ್ಲಿ ಗುಡುಗು ಸಹಿತ ಭಾರಿ ಮಳೆಯಾಗಬಹುದು. ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡಗಳಲ್ಲೂ ಸಣ್ಣ ಪ್ರಮಾಣದ ಮಳೆಯಾಗುವ ಸಾಧ್ಯತೆಯಿದೆ. ಆದರೆ ಸಮುದ್ರದ ಅಲೆಗಳ ಅಬ್ಬರ ಹೆಚ್ಚಿರಲಿದ್ದು, ಮೀನುಗಾರರು ಮತ್ತು ಕರಾವಳಿ ವಾಸಿಗಳು ಎಚ್ಚರಿಕೆಯಿಂದಿರಬೇಕು.
IMD ಎಚ್ಚರಿಕೆ: ಮುಂದಿನ 3 ದಿನಗಳ ಕಾಲ ಸೂರ್ಯನ ತಾಪಕ್ಕೆ ಸಜ್ಜಾಗಿರಿ
ರಾಜ್ಯದಾದ್ಯಂತ ಗರಿಷ್ಠ ತಾಪಮಾನ ಇಳಿಕೆಯಾಗದು. ಬದಲಿಗೆ 2-3 ಡಿಗ್ರಿ ಸೆಲ್ಶಿಯಸ್ ಏರಿಕೆಯಾಗುವ ಸಾಧ್ಯತೆ ಇದೆ. ಹೀಗಾಗಿ ಸಾರ್ವಜನಿಕರು ಮಧ್ಯಾಹ್ನ 12 ರಿಂದ ಸಂಜೆ 4 ಗಂಟೆಯವರೆಗೆ ನೇರ ಸೂರ್ಯನ ಬೆಳಕಿಗೆ ಮೈಯೊಡ್ಡುವುದನ್ನು ತಪ್ಪಿಸಬೇಕು. ಹೊರಗೆ ಹೋಗಲೇಬೇಕಾದರೆ ಛತ್ರಿ, ಟೋಪಿ, ತಿಳಿ ಬಣ್ಣದ ಹತ್ತಿ ಬಟ್ಟೆಗಳನ್ನು ಬಳಸಿ.
ಹೀಟ್ ಸ್ಟ್ರೋಕ್ ತಪ್ಪಿಸಲು ಆರೋಗ್ಯ ಇಲಾಖೆ ಸಲಹೆಗಳು
-
ದಿನವಿಡೀ ನಿಯಮಿತವಾಗಿ ನೀರು ಕುಡಿಯಿರಿ. ಎಳನೀರು, ಮಜ್ಜಿಗೆ, ಮನೆಯಲ್ಲಿ ತಯಾರಿಸಿದ ಹಣ್ಣಿನ ರಸಗಳನ್ನು ಸೇವಿಸಿ.
-
ಕೆಫೀನ್ (ಕಾಫಿ, ಟೀ) ಮತ್ತು ಹೆಚ್ಚು ಸಕ್ಕರೆಯ ಪಾನೀಯಗಳನ್ನು ಕಡಿಮೆ ಮಾಡಿ ಅವು ದೇಹವನ್ನು ನಿರ್ಜಲೀಕರಣಗೊಳಿಸುತ್ತವೆ.
-
ಹೊರಾಂಗಣ ಕೆಲಸ ಮಾಡುವವರು ಹೆಚ್ಚಿನ ನೀರು ಕುಡಿಯುತ್ತಿರಬೇಕು ಮತ್ತು ಆಗಾಗ ವಿಶ್ರಾಂತಿ ತೆಗೆದುಕೊಳ್ಳಬೇಕು.
-
ವಾಕರಿಕೆ, ತಲೆಸುತ್ತು, ಅತಿಯಾದ ಬಾಯಾರಿಕೆ ಕಂಡುಬಂದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಿ.
ಉತ್ತರ ಕರ್ನಾಟಕದಲ್ಲಿ ಉಷ್ಣಾಘಾತದ ಅಪಾಯವಿದ್ದು, ವಯೋವೃದ್ಧರು, ಮಕ್ಕಳು ಮತ್ತು ಗರ್ಭಿಣಿಯರು ವಿಶೇಷ ಎಚ್ಚರಿಕೆ ವಹಿಸಬೇಕು. ಪಶುಪಾಲಕರು ಪ್ರಾಣಿಗಳಿಗೆ ನೆರಳು ಮತ್ತು ಸಾಕಷ್ಟು ನೀರಿನ ವ್ಯವಸ್ಥೆ ಮಾಡಬೇಕು. ಮತ್ತೊಂದೆಡೆ, ಮಳೆ ನಿರೀಕ್ಷೆಯಲ್ಲಿರುವ ದಕ್ಷಿಣ ಜಿಲ್ಲೆಗಳು ಸಂತಸದಲ್ಲಿದ್ದರೂ, ಗುಡುಗು ಮತ್ತು ಮಿಂಚಿನ ಅಪಾಯದಿಂದ ದೂರವಿರಲು ಕ್ರಮ ಕೈಗೊಳ್ಳಬೇಕು. ಒಟ್ಟಾರೆ ಕರ್ನಾಟಕದ ಜನತೆ ಈ ವೈವಿಧ್ಯಮಯ ಹವಾಮಾನದಲ್ಲಿ ಎಚ್ಚರಿಕೆಯಿಂದಿರುವುದು ಅತ್ಯಗತ್ಯ.





