ಬೆಂಗಳೂರು: ರಾಜ್ಯಾದ್ಯಂತ ಕಳೆದ ಕೆಲವು ದಿನಗಳಿಂದ ಶೀತಗಾಳಿಯ (Cold Wave) ಅಬ್ಬರ ಜೋರಾಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ವಿಶೇಷವಾಗಿ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಚಳಿಯ ತೀವ್ರತೆ ಮಿತಿಮೀರಿದ್ದು, ಹವಾಮಾನ ಇಲಾಖೆಯು ಮುನ್ನೆಚ್ಚರಿಕೆ ಕ್ರಮವಾಗಿ ಪ್ರಮುಖ 5 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದೆ.
ವಿಜಯಪುರದಲ್ಲಿ 20 ವರ್ಷಗಳ ದಾಖಲೆ ಮುರಿದ ಚಳಿ
ಉತ್ತರ ಕರ್ನಾಟಕದ ವಿಜಯಪುರ ಜಿಲ್ಲೆಯಲ್ಲಿ ಚಳಿ ದಾಖಲೆ ಮಟ್ಟಕ್ಕೆ ಕುಸಿದಿದೆ. ಭಾನುವಾರ (ಡಿಸೆಂಬರ್ 21) ವಿಜಯಪುರದಲ್ಲಿ 6.9 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ ದಾಖಲಾಗಿದ್ದು, ಇದು ಕಳೆದ 20 ವರ್ಷಗಳ ಅವಧಿಯಲ್ಲಿ ದಾಖಲಾದ ಮೂರನೇ ಅತಿ ಕಡಿಮೆ ಉಷ್ಣಾಂಶವಾಗಿದೆ. ಬಯಲು ಸೀಮೆಯ ಜನರಿಗೆ ಈ ಶೀತಗಾಳಿ ವಾತಾವರಣ ನಡುಕ ಹುಟ್ಟಿಸುತ್ತಿದೆ.
ಈ 5 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಣೆ
ಹವಾಮಾನ ಇಲಾಖೆಯ ಮುನ್ಸೂಚನೆಯಂತೆ ಉತ್ತರ ಕರ್ನಾಟಕದ ಐದು ಜಿಲ್ಲೆಗಳಲ್ಲಿ ಶೀತಗಾಳಿಯ ಪ್ರಭಾವ ಇಂದೂ ಕೂಡ ಅಧಿಕವಾಗಿರಲಿದೆ.
ಬೀದರ್, ಕಲಬುರಗಿಯಾದಗಿರಿ, ರಾಯಚೂರು, ವಿಜಯಪುರ ಜಿಲ್ಲೆಗಳಲ್ಲಿ ಸಾಧಾರಣಕ್ಕಿಂತ ಕಡಿಮೆ ಉಷ್ಣಾಂಶ ಇರಲಿದ್ದು, ಮುಂಜಾನೆ ಮತ್ತು ತಡರಾತ್ರಿ ಚಳಿಯ ತೀವ್ರತೆ ಹೆಚ್ಚಿರಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ.
ಒಣ ಹವೆಯ ಮುನ್ಸೂಚನೆ
ರಾಜ್ಯದ ಕರಾವಳಿ ಮತ್ತು ಒಳನಾಡಿನ ಬಹುತೇಕ ಜಿಲ್ಲೆಗಳಲ್ಲಿ ಒಣ ಹವೆ ಮುಂದುವರಿಯಲಿದೆ.
-
ಕರಾವಳಿ: ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಒಣ ಹವೆ ಇರಲಿದೆ.
-
ದಕ್ಷಿಣ ಒಳನಾಡು: ಬೆಂಗಳೂರು ನಗರ, ಗ್ರಾಮಾಂತರ, ಮೈಸೂರು, ಮಂಡ್ಯ, ರಾಮನಗರ, ಕೋಲಾರ, ಹಾಸನ ಸೇರಿದಂತೆ ಹಳೇ ಮೈಸೂರು ಭಾಗದಲ್ಲಿ ಚಳಿಯ ಜೊತೆಗೆ ಶುಷ್ಕ ವಾತಾವರಣ ಇರಲಿದೆ.
-
ಉತ್ತರ ಒಳನಾಡು: ಬೆಳಗಾವಿ, ಧಾರವಾಡ, ಗದಗ, ಹಾವೇರಿ ಜಿಲ್ಲೆಗಳಲ್ಲಿ ಹಗಲು ಹೊತ್ತಿನಲ್ಲಿ ಬಿಸಿಲು ಕಂಡರೂ, ರಾತ್ರಿ ವೇಳೆ ಚಳಿ ತೀವ್ರವಾಗಿರುತ್ತದೆ.
ಬೆಂಗಳೂರಿನಲ್ಲಿ ಮೈಕೊರೆಯುವ ಚಳಿ
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕಳೆದ ಒಂದು ವಾರದಿಂದ ವಾತಾವರಣದಲ್ಲಿ ಭಾರಿ ಬದಲಾವಣೆಯಾಗಿದೆ. ಮೋಡ ಮುಸುಕಿದ ವಾತಾವರಣವಿದ್ದು, ಕನಿಷ್ಠ ತಾಪಮಾನ 14°C ವರೆಗೆ ಕುಸಿದಿದೆ. ಗರಿಷ್ಠ ತಾಪಮಾನ 27°C ಆಸುಪಾಸಿನಲ್ಲಿರಲಿದೆ. ಮಂಜು ಮುಸುಕಿದ ಮುಂಜಾನೆ ಸವಾರರಿಗೆ ಕಿರಿಕಿರಿ ಉಂಟುಮಾಡುತ್ತಿದ್ದರೆ.
ತೀವ್ರವಾಗಿ ಬದಲಾಗುತ್ತಿರುವ ಹವಾಮಾನದಿಂದಾಗಿ ಶೀತ, ಕೆಮ್ಮು, ಜ್ವರದಂತಹ ಸಮಸ್ಯೆಗಳು ಹೆಚ್ಚಾಗುತ್ತಿವೆ. ಈ ಹಿನ್ನೆಲೆಯಲ್ಲಿ ವೈದ್ಯರು ಕೆಲವು ಮಹತ್ವದ ಸಲಹೆಗಳನ್ನು ನೀಡಿದ್ದಾರೆ:
-
ಬೆಚ್ಚನೆಯ ಉಡುಪು: ಹೊರಗೆ ಹೋಗುವಾಗ ಸ್ವೆಟರ್, ಮಫ್ಲರ್ ಅಥವಾ ಬೆಚ್ಚನೆಯ ಬಟ್ಟೆಗಳನ್ನು ಧರಿಸುವುದು ಕಡ್ಡಾಯ.
-
ಬಿಸಿ ಆಹಾರ: ಯಾವಾಗಲೂ ಬಿಸಿಯಾದ ಆಹಾರ ಮತ್ತು ಕಾಯಿಸಿ ಆರಿಸಿದ ನೀರನ್ನು ಸೇವಿಸಿ.
-
ಮಕ್ಕಳು ಮತ್ತು ವೃದ್ಧರು: ಶೀತಗಾಳಿಯಿಂದ ಇವರ ಮೇಲೆ ಬೇಗನೆ ಪರಿಣಾಮ ಬೀರುವುದರಿಂದ ಹೆಚ್ಚಿನ ಕಾಳಜಿ ವಹಿಸಬೇಕು.





