ಬೆಂಗಳೂರು, ಡಿಸೆಂಬರ್ 10: ಮಳೆ ಹೊಡೆತ, ಉತ್ಪಾದನ ವೆಚ್ಚದ ಏರಿಕೆ ಮತ್ತು ಮಾರುಕಟ್ಟೆಯಲ್ಲಿ ಬೆಲೆ ಕುಸಿತ ಈ ಮೂರು ಸಂಕಷ್ಟದಲ್ಲಿ ಸಿಲುಕಿದ್ದ ಕರ್ನಾಟಕದ ತೊಗರಿ (Toor Dal) ಬೆಳೆಗಾರರಿಗೆ ಕೇಂದ್ರ ಸರ್ಕಾರದಿಂದ ದೊಡ್ಡ ಸಂತಸದ ಸುದ್ದಿ ಬಂದಿದೆ. ರಾಜ್ಯ ಸರ್ಕಾರ ಹಾಗೂ ಕೇಂದ್ರ ನಾಯಕರಿಂದ ಬಂದ ನಿರಂತರ ಮನವಿಗೆ ಸ್ಪಂದಿಸಿದ ಕೇಂದ್ರ ಸರ್ಕಾರ, ಕನಿಷ್ಠ ಬೆಂಬಲ ಬೆಲೆ (MSP) ಅಡಿಯಲ್ಲಿ ಮಹತ್ವದ ನಿರ್ಧಾರ ತೆಗೆದುಕೊಂಡಿದ್ದು, ಒಟ್ಟು 9.67 ಲಕ್ಷ ಮೆಟ್ರಿಕ್ ಟನ್ ತೊಗರಿಯನ್ನು ನಫೆಡ್ (NAFED) ಮತ್ತು ಎನ್‌ಸಿಸಿಎಫ್ (NCCF) ಮುಖಾಂತರ ಖರೀದಿಸಲು ಹಸಿರು ನಿಶಾನೆ ತೋರಿಸಿದೆ.
ರಾಜ್ಯದಲ್ಲಿ ಕೃಷಿಕರ ಸಮಸ್ಯೆಗೆ ತಕ್ಷಣ ಪರಿಹಾರ ಕಲ್ಪಿಸುವ ಸಲುವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಧಾನ ಮಂತ್ರಿ ನರೇಂದ್ರ ಮೋದಿಗೆ ಪತ್ರ ಬರೆದು, MSP ಅಡಿಯಲ್ಲಿ ನಡೆಯುವ ತೊಗರಿ ಖರೀದಿಯ ಅವಧಿಯನ್ನು ಬದಲಿಸಿ ಶೀಘ್ರ ಖರೀದಿ ಆರಂಭಿಸುವಂತೆ ವಿನಂತಿಸಿದ್ದರು. ಇದೇ ವೇಳೆ, ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಕೂಡ ಡಿಸೆಂಬರ್ 4ರಂದು ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌವ್ಹಾಣ್ ಅವರಿಗೆ ತುರ್ತು ಮನವಿ ಮಾಡಿಕೊಂಡಿದ್ದರು. ಇಬ್ಬರ ಮನವಿಗೆ ಸ್ಪಂದಿಸಿದ ಕೇಂದ್ರ ಕೃಷಿ ಸಚಿವರು ಕೆಲವೇ ದಿನಗಳಲ್ಲಿ ಅನುಮೋದನೆ ನೀಡಿದ್ದಾರೆ.
ಕರ್ನಾಟಕವು ದೇಶದ ಪ್ರಮುಖ ತೊಗರಿ ಉತ್ಪಾದಕ ರಾಜ್ಯವಾಗಿದ್ದು, 2025-26ರ ಖಾರಿಫ್ ಋತುವಿನಲ್ಲಿ ಸುಮಾರು 12.60 ಲಕ್ಷ ಮೆಟ್ರಿಕ್ ಟನ್ ಉತ್ಪಾದನೆಯ ನಿರೀಕ್ಷೆಯಿದೆ. ಆದರೆ ಮಾರುಕಟ್ಟೆಯಲ್ಲಿ ತೊಗರಿ ಬೇಳೆಗೆ ಕ್ವಿಂಟಾಲ್‌ಗೆ ₹ 5,830 ರಿಂದ ₹ 6,700ರ ನಡುವೆ ಮಾತ್ರ ಬೆಲೆ ದೊರೆಯುತ್ತಿತ್ತು. ಇದಕ್ಕೆ ವಿರುದ್ಧವಾಗಿ, ಕೇಂದ್ರ ಸರ್ಕಾರ 2025-26ರ MSP ಅನ್ನು ₹ 8,000 ಎಂದು ಘೋಷಿಸಿತ್ತು. MSPಗಿಂತ ₹ 2,000ಕ್ಕೂ ಹೆಚ್ಚು ಕಡಿಮೆ ದರ ಸಿಗುತ್ತಿರುವುದು ರಾಜ್ಯದ ರೈತರಲ್ಲಿ ಭಾರೀ ಆತಂಕ ಹುಟ್ಟಿಸಿತ್ತು.
ಈ ಪರಿಸ್ಥಿತಿಯನ್ನು ಮನಗಂಡ ಸಚಿವ ಪ್ರಲ್ಹಾದ ಜೋಶಿ, ತುರ್ತು ಖರೀದಿಗೆ ನಫೆಡ್ ಮತ್ತು NCCF ಗೆ ಆದ್ಯತೆ ನೀಡುವಂತೆ ಸಲಹೆ ನೀಡಿದ್ದರು. ರೈತರಿಗೆ ನ್ಯಾಯಯುತ ಬೆಲೆ ದೊರಕುವಂತೆ ತೊಗರಿ ತಕ್ಷಣ ಖರೀದಿಸಲು ಕ್ರಮ ಕೈಗೊಳ್ಳಬೇಕೆಂದು ಅವರು ಪತ್ರದ ಮೂಲಕ ಬೇಡಿಕೆ ಇಟ್ಟಿದ್ದರು.
ಕೇಂದ್ರ ಕೃಷಿ ಸಚಿವ ಚೌವ್ಹಾಣ್ ಡಿಸೆಂಬರ್ 10ರಂದು ರಾಜ್ಯ ಸರ್ಕಾರಕ್ಕೆ ಪತ್ರ ಬರೆದು, ತೊಗರಿ ಖರೀದಿ ಕಾರ್ಯಾಚರಣೆಗೆ ಅಧಿಕೃತ ಅನುಮೋದನೆ ನೀಡಿರುವುದಾಗಿ ತಿಳಿಸಿದರು. ಖರೀದಿ ಪ್ರಾರಂಭವಾದ ಮೇಲೆ 90 ದಿನಗಳವರೆಗೆ ಬೆಂಬಲ ಬೆಲೆಯಲ್ಲಿ PSS (Price Support Scheme) ಅಡಿಯಲ್ಲಿ ಖರೀದಿ ನಡೆಯಲಿದೆ.
“ಕೇಂದ್ರ ಸರ್ಕಾರ ರೈತಪರ”; ಪ್ರಲ್ಹಾದ ಜೋಶಿ ಪ್ರಶಂಸೆ
ಕೇಂದ್ರ ಸರ್ಕಾರದಿಂದ ಬಂದ ತ್ವರಿತ ನಿರ್ಧಾರಕ್ಕೆ ಸಂತೋಷ ವ್ಯಕ್ತಪಡಿಸಿದ ಸಚಿವ ಪ್ರಲ್ಹಾದ ಜೋಶಿ, “ಕರ್ನಾಟಕದ ತೊಗರಿ ರೈತರ ಹಿತಸಾಕ್ಷಾತ್ಕಾರಕ್ಕಾಗಿ ನಾವು ಕೇಳಿದ ಮನವಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಕೃಷಿ ಸಚಿವ ಚೌವ್ಹಾಣ್ ತ್ವರಿತ ಸ್ಪಂದಿಸಿದ್ದಾರೆ. ರೈತರಿಗೆ ಕನಿಷ್ಠ ಬೆಂಬಲ ಬೆಲೆಯಲ್ಲಿ ರಕ್ಷಣೆ ನೀಡಿರುವುದು ಶ್ಲಾಘನೀಯ” ಎಂದು ಹೇಳಿದ್ದಾರೆ.





