ಮೈಸೂರು: ದೆಹಲಿಯ ಕೆಂಪುಕೋಟೆ ಸಮೀಪ ನಡೆದ ಭೀಕರ ಸ್ಫೋಟದ ಹಿನ್ನೆಲೆ, ಕರ್ನಾಟಕ ರಾಜ್ಯಾದ್ಯಂತ ಭದ್ರತೆ ಬಿಗಿಗೊಳಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ ಅವರು, “ದೆಹಲಿ ಸ್ಫೋಟ ಘಟನೆ ಅತ್ಯಂತ ದುಃಖದ ಸಂಗತಿ. ಈ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳು, ಬೆಂಗಳೂರು ವಿಮಾನ ನಿಲ್ದಾಣ, ಬಸ್ ನಿಲ್ದಾಣಗಳು, ರೈಲು ನಿಲ್ದಾಣಗಳು ಹಾಗೂ ಜನನಿಬಿಡ ಪ್ರದೇಶಗಳಲ್ಲಿ ಪೊಲೀಸ್ ಭದ್ರತೆಯನ್ನು ಹೆಚ್ಚಿಸುವಂತೆ ನಿರ್ದೇಶನ ನೀಡಿದ್ದೇನೆ,” ಎಂದು ತಿಳಿಸಿದ್ದಾರೆ.
“ಮೈಸೂರು ಪೊಲೀಸ್ ಅಧಿಕಾರಿಗಳೊಂದಿಗೆ ಈಗಾಗಲೇ ಮಾತನಾಡಿದ್ದೇನೆ. ರಾಜ್ಯದ ಐಜಿಪಿ ಹಾಗೂ ಡಿಜಿಪಿಯವರೊಂದಿಗೆ ಕೂಡ ಸಮಾಲೋಚನೆ ನಡೆಸುತ್ತಿದ್ದೇನೆ. ಯಾವುದೇ ರೀತಿಯ ಅಶಾಂತಿ ಅಥವಾ ಭದ್ರತಾ ಲೋಪ ಸಂಭವಿಸದಂತೆ ಕಠಿಣ ಕ್ರಮ ಕೈಗೊಳ್ಳಲಾಗುವುದು,” ಎಂದು ಹೇಳಿದರು.
ದೆಹಲಿಯ ಘಟನೆಯ ಕುರಿತು ಮಾತನಾಡಿದ ಸಿಎಂ ಸಿದ್ದರಾಮಯ್ಯ, “ಈ ಕ್ಷಣಕ್ಕೆ ನನಗೆ ಸಂಪೂರ್ಣ ಮಾಹಿತಿ ಬಂದಿಲ್ಲ. ತನಿಖಾ ಸಂಸ್ಥೆಗಳು ವಿವರ ನೀಡಿದ ನಂತರ ಮಾತ್ರ ಸ್ಪಷ್ಟ ಪ್ರತಿಕ್ರಿಯೆ ನೀಡುತ್ತೇನೆ,” ಎಂದರು.
ದೆಹಲಿಯ ಕೆಂಪುಕೋಟೆ ಮೆಟ್ರೋ ನಿಲ್ದಾಣದ ಬಳಿ ಕಾರುಗಳಲ್ಲಿ ಸಂಭವಿಸಿದ ಈ ಭೀಕರ ಸ್ಫೋಟದಲ್ಲಿ 9ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ. ಸ್ಫೋಟದಲ್ಲಿ ಕಾರುಗಳು, ಆಟೋಗಳು ಸೇರಿದಂತೆ ಹತ್ತಕ್ಕೂ ಹೆಚ್ಚು ವಾಹನಗಳು ಸುಟ್ಟು ಕರಕಲಾಗಿವೆ.
ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸುವ ಕಾರ್ಯಾಚರಣೆಯಲ್ಲಿ ತೊಡಗಿದ್ದರು. ಸ್ಫೋಟದ ಸ್ಥಳವನ್ನು ಬಾಂಬ್ ನಿಷ್ಕ್ರಿಯ ದಳ ಹಾಗೂ ಎನ್‌ಐಎ ತಂಡಗಳು ವಶಕ್ಕೆ ಪಡೆದು ಪರಿಶೀಲನೆ ನಡೆಸುತ್ತಿವೆ. ಈ ಕೃತ್ಯದ ಹಿಂದೆ ಉಗ್ರರ ಕೈವಾಡ ಇರಬಹುದೆಂಬ ಶಂಕೆ ವ್ಯಕ್ತವಾಗಿದೆ.
ಸ್ಫೋಟ ಸಂಭವಿಸಿದ ಪ್ರದೇಶದಲ್ಲಿ ಭಾರೀ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ದೆಹಲಿಯ ಎಲ್ಲಾ ಪ್ರಮುಖ ಸ್ಥಳಗಳಲ್ಲಿ ಭದ್ರತೆ ಬಿಗಿಗೊಳಿಸಲಾಗಿದೆ. ರಾಷ್ಟ್ರ ರಾಜಧಾನಿಯ ಮೆಟ್ರೋ ನಿಲ್ದಾಣಗಳು, ರೈಲು ಮಾರ್ಗಗಳು, ಮತ್ತು ಪ್ರವಾಸಿ ಸ್ಥಳಗಳ ಬಳಿ ತಪಾಸಣೆ ತೀವ್ರಗೊಳಿಸಲಾಗಿದೆ.
ಮೃತರ ಕುಟುಂಬದವರಿಗೆ ಸಂತಾಪ ಸೂಚಿಸಿದ ಸಿಎಂ
ಸ್ಫೋಟದಲ್ಲಿ ಪ್ರಾಣ ಕಳೆದುಕೊಂಡವರ ಕುಟುಂಬದವರಿಗೆ ಸಿಎಂ ಸಿದ್ದರಾಮಯ್ಯ ಸಂತಾಪ ಸೂಚಿಸಿದ್ದು, “ಇಂತಹ ಭೀಕರ ಘಟನೆಗಳು ರಾಷ್ಟ್ರದ ಶಾಂತಿಗೆ ಧಕ್ಕೆ ತರುತ್ತವೆ. ಸಂತ್ರಸ್ತರಿಗೆ ಸರ್ಕಾರದ ಪರವಾಗಿ ಸಹಾನುಭೂತಿ ವ್ಯಕ್ತಪಡಿಸುತ್ತೇನೆ,” ಎಂದು ಹೇಳಿದರು.
ದೆಹಲಿಯ ಈ ಘಟನೆ ಬಳಿಕ ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ಕ್ರಮ ಕೈಗೊಳ್ಳಲಾಗಿದೆ. ಬಸ್ ನಿಲ್ದಾಣಗಳು ಹಾಗೂ ವಿಮಾನ ನಿಲ್ದಾಣಗಳಲ್ಲಿ ತಪಾಸಣೆ ಕಡ್ಡಾಯಗೊಳಿಸಲಾಗಿದೆ. ಅನುಮಾನಸ್ಪದ ಚಟುವಟಿಕೆಗಳ ಬಗ್ಗೆ ತಕ್ಷಣ ಪೊಲೀಸರಿಗೆ ಮಾಹಿತಿ ನೀಡುವಂತೆ ಸಾರ್ವಜನಿಕರಿಗೆ ಮನವಿ ಮಾಡಲಾಗಿದೆ. ರಾಜ್ಯ, ರಾಷ್ಟ್ರ ಮಟ್ಟದ ಭದ್ರತಾ ಸಂಸ್ಥೆಗಳು ಸಜ್ಜಾಗಿದ್ದು, ದೇಶದಾದ್ಯಂತ ಹೈಅಲರ್ಟ್ ಘೋಷಿಸಲಾಗಿದೆ.





