ಹಾಸನ: ಇಡೀ ನಾಡು ಹೊಸ ವರ್ಷದ ಸಂಭ್ರಮದಲ್ಲಿರುವಾಗಲೇ ರಾಜ್ಯದ ಹಾಸನ ಮತ್ತು ಧಾರವಾಡ ಜಿಲ್ಲೆಗಳಲ್ಲಿ ಭೀಕರ ರಸ್ತೆ ಅಪಘಾತಗಳು ಸಂಭವಿಸಿದ್ದು, ಒಟ್ಟು ನಾಲ್ವರು ಪ್ರಾಣ ಕಳೆದುಕೊಂಡಿದ್ದಾರೆ. ಹಾಸನದಲ್ಲಿ ಅಡಿಕೆ ಸಾಗಿಸುತ್ತಿದ್ದ ಪಿಕಪ್ ವಾಹನ ಪಲ್ಟಿಯಾಗಿ ಮೂವರು ಮೃತಪಟ್ಟರೆ, ಧಾರವಾಡದಲ್ಲಿ ಫೋಟೋ ಶೂಟ್‌ಗೆ ಹೋಗಿದ್ದ ಯುವಕ ಬೈಕ್ ಸ್ಕಿಡ್ ಆಗಿ ಸಾವನ್ನಪ್ಪಿದ್ದಾನೆ.
ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ಚಿಕ್ಕಾರಹಳ್ಳಿ ಗ್ರಾಮದ ಬಳಿಯ ರಾಷ್ಟ್ರೀಯ ಹೆದ್ದಾರಿ 69ರಲ್ಲಿ ಸಂಭವಿಸಿದ ಭೀಕರ ಅಪಘಾತದಲ್ಲಿ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಕಡೂರು ತಾಲೂಕಿನ ತಂಗ್ಲಿ ಗ್ರಾಮದ ನಿವಾಸಿಗಳಾದ ಶಬ್ಬೀರ್ (55), ತಿಮ್ಮಣ್ಣ (53) ಮತ್ತು ಸಂಜಯ್ (45) ಮೃತಪಟ್ಟ ದುರ್ದೈವಿಗಳು.
ಘಟನೆಯ ವಿವರ:
ಅಡಿಕೆ ಕಟಾವು ಮುಗಿಸಿ ಪಿಕಪ್ ವಾಹನದಲ್ಲಿ ಸಾಗಿಸುತ್ತಿದ್ದಾಗ ಚಲಿಸುತ್ತಿದ್ದ ವಾಹನದ ಟೈರ್ ಏಕಾಏಕಿ ಸ್ಫೋಟಗೊಂಡಿದೆ. ಇದರಿಂದ ನಿಯಂತ್ರಣ ತಪ್ಪಿದ ವಾಹನ ಹೆದ್ದಾರಿಯಲ್ಲೇ ಪಲ್ಟಿಯಾಗಿದೆ. ಘಟನೆಯಲ್ಲಿ ಹಾಸನ ಮೂಲದ ನೌಶದ್ ಎಂಬುವವರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಇತರ ಇಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಕಡೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬಾಣಾವರ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.
ಫೋಟೋ ಶೂಟ್ ಮಾಡಿಸಲು ಹೋಗಿದ್ದ ಯುವಕ ಸಾವು..
ಧಾರವಾಡದ ಕಲಕೇರಿ ಗ್ರಾಮದಲ್ಲಿ ಹೊಸ ವರ್ಷದ ಅಂಗವಾಗಿ ಫೋಟೋ ಶೂಟ್ ಮಾಡಲು ಹೋಗಿದ್ದ ಯುವಕ ಬೈಕ್ ಸ್ಕಿಡ್ ಆಗಿದ್ದರಿಂದ ಯುವಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಜನ್ನತ್ ನಗರದ ನಿವಾಸಿ ಮನೀಶ್ ಗುಡಿಸಲಮನಿ ಎಂಬ ಯುವಕ ಮೃತಪಟ್ಟವರಾಗಿದ್ದಾರೆ.
ನಡೆದಿದ್ದೇನು ?
ಹೊಸ ವರ್ಷದ ಸಂಭ್ರಮಕ್ಕಾಗಿ ಮನೀಶ್ ತನ್ನ ಸ್ನೇಹಿತರೊಂದಿಗೆ ಕಲಕೇರಿ ಗ್ರಾಮದ ವೀವ್ ಪಾಯಿಂಟ್‌ಗೆ ಫೋಟೋ ಶೂಟ್ ಮಾಡಲು ಬೈಕ್‌ನಲ್ಲಿ ತೆರಳಿದ್ದನು. ವಾಪಸ್ ಮನೆಗೆ ಹಿಂದಿರುಗುವಾಗ ಬೈಕ್ ಸ್ಕಿಡ್ ಆಗಿದೆ.ಇದರಿಂದ ಯುವಕ ಕೆಳಗೆ ಬಿದ್ದಿದಡ್ದಾನೆ ಇದರ ಪರಿಣಾಮ ಮನೀಶ್ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಜೊತೆಯಲ್ಲಿದ್ದ ಮತ್ತೊಬ್ಬ ಯುವಕನ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ. ಧಾರವಾಡ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇನ್ನೂ ಯುವಕನ ಕುಂಟುಂಬಸ್ಥರ ಆಕ್ರಂಧನ ಮುಗಿಲು ಮುಟ್ಟಿದ್ದು ಯುವರು ತಮ್ಕ ಮೋಜು ಮಸ್ತಿಗೆ ಜೀವ ಕಳೆದುಕೊಳ್ಳುವ ಸ್ಥಿತಿಗೆ ತಲುಪುವುಸು ಬೇಸರದ ಸಂಗತಿಯಾಗಿದೆ ಇನ್ನಾದರೂ ಯುವಕರು ಈ ಬಗ್ಗೆ ಜಾಗರೂಕರಾಗಿರಬೇಕು.





