ಬೆಂಗಳೂರು: ದೇಶದ 77ನೇ ಗಣರಾಜ್ಯೋತ್ಸವ ಸಂಭ್ರಮಕ್ಕೆ ಕ್ಷಣಗಣನೆ ಆರಂಭವಾಗಿದೆ. ಜನವರಿ 26ರಂದು ದೆಹಲಿಯ ಕರ್ತವ್ಯ ಪಥದಲ್ಲಿ ನಡೆಯಲಿರುವ ವೈಭವದ ಪಥಸಂಚಲನದಲ್ಲಿ ಕರ್ನಾಟಕದ ಸ್ತಬ್ಧಚಿತ್ರವು ಮತ್ತೊಮ್ಮೆ ದೇಶದ ಗಮನ ಸೆಳೆಯಲು ಸಜ್ಜಾಗಿದೆ. ಈ ಬಾರಿ ಮಿಲ್ಲೆಟ್ ಟು ಮೈಕ್ರೋಚಿಪ್ (ಸಿರಿಧಾನ್ಯದಿಂದ ಮೈಕ್ರೋಚಿಪ್ ವರೆಗೆ) ಎಂಬ ವಿಶಿಷ್ಟ ಪರಿಕಲ್ಪನೆಯೊಂದಿಗೆ ಕರ್ನಾಟಕವು ತನ್ನ ಸಾಧನೆಯನ್ನು ಜಗತ್ತಿನ ಮುಂದೆ ಅನಾವರಣಗೊಳಿಸಲಿದೆ.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತರಾದ ಹೇಮಂತ್ ಎಂ ನಿಂಬಾಳ್ಕರ್ ಈ ಕುರಿತು ಮಾಹಿತಿ ನೀಡಿದ್ದು, ಕೃಷಿ ಪರಂಪರೆಯಿಂದ ಹಿಡಿದು ಅತ್ಯಾಧುನಿಕ ತಂತ್ರಜ್ಞಾನದವರೆಗೆ ಕರ್ನಾಟಕ ಸಾಧಿಸಿರುವ ಸಮತೋಲಿತ ಅಭಿವೃದ್ಧಿಯನ್ನು ಈ ಸ್ತಬ್ಧಚಿತ್ರ ಪ್ರತಿಬಿಂಬಿಸಲಿದೆ ಎಂದು ತಿಳಿಸಿದ್ದಾರೆ.
ಸ್ತಬ್ಧಚಿತ್ರದ ಪರಿಕಲ್ಪನೆ
ಕರ್ನಾಟಕ ಸರ್ಕಾರವು ಈ ಬಾರಿ ನಾಲ್ಕು ಪ್ರಮುಖ ವಿಷಯಗಳನ್ನು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು. ಅವುಗಳೆಂದರೆ:
-
ಕಿತ್ತೂರು ರಾಣಿ ಚೆನ್ನಮ್ಮ ಮತ್ತು ರಾಣಿ ಅಬ್ಬಕ್ಕದೇವಿ
-
ಕರ್ನಾಟಕ ಪುಷ್ಪ ವೈಭವ
-
ಹಲಗಲಿ ಬೇಡರ ಬಂಡಾಯ
-
ಸಿರಿಧಾನ್ಯದಿಂದ ಮೈಕ್ರೋಚಿಪ್ ವರೆಗೆ
ತಜ್ಞರ ಸಮಿತಿಯು ಮೊದಲ ಸಭೆಯಲ್ಲಿಯೇ ಸಿರಿಧಾನ್ಯದಿಂದ ಮೈಕ್ರೋಚಿಪ್ ವರೆಗೆ ಎಂಬ ವಿಷಯವನ್ನು ಅದರ ಪ್ರಸ್ತುತತೆ ಮತ್ತು ವೈವಿಧ್ಯತೆಯ ಕಾರಣದಿಂದ ಒಮ್ಮತದಿಂದ ಆರಿಸಿದೆ.
ಸ್ತಬ್ಧಚಿತ್ರದಲ್ಲಿ ಏನೆಲ್ಲಾ ಇರಲಿದೆ ?
ಸ್ತಬ್ಧಚಿತ್ರವು ಕೃಷಿ ಮತ್ತು ಕೃತಕ ಬುದ್ಧಿಮತ್ತೆಯ (AI) ಅಪೂರ್ವ ಸಂಗಮವಾಗಿದ್ದು, ಈ ಕೆಳಗಿನ ಚಿತ್ರಣಗಳನ್ನು ಹೊಂದಿರಲಿದೆ:
ಮುಂಭಾಗದಲ್ಲಿ ಉದಯಿಸುತ್ತಿರುವ ಸೂರ್ಯನು ರಾಜ್ಯದ ನಿರಂತರ ಪ್ರಗತಿಯ ಸಂಕೇತವಾಗಿ ಮಿನುಗಲಿದ್ದಾನೆ. ಬೃಹತ್ ಮಡಿಕೆಗಳಲ್ಲಿ ತುಂಬಿದ ವಿವಿಧ ಸಿರಿಧಾನ್ಯಗಳು ರಾಜ್ಯದ ಕೃಷಿ ಸಮೃದ್ಧಿಯನ್ನು ಸಾರಲಿವೆ. ಫಸಲು ಹಿಡಿದು ನಿಂತಿರುವ ರೈತ ಕುಟುಂಬವು ಗ್ರಾಮೀಣ ಶಕ್ತಿಯ ಪ್ರತೀಕವಾಗಿದೆ. ಮಧ್ಯಭಾಗದಲ್ಲಿ ಆಧುನಿಕತೆಯ ಸ್ಪರ್ಶವಾಗಿ ತಿರುಗುತ್ತಿರುವ ಅಣುಗಳ (Atoms) ಮಾದರಿ ಹಾಗೂ ಕಂಪ್ಯೂಟರ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಕೃತಕ ಬುದ್ಧಿಮತ್ತೆಯ (AI) ರೋಬೋಟ್ ಭವಿಷ್ಯದ ಆವಿಷ್ಕಾರಗಳನ್ನು ಸೂಚಿಸುತ್ತದೆ.
ಇನ್ನು ಇಕ್ಕೆಲಗಳುಗಳಲ್ಲಿ ಬಾಹ್ಯಾಕಾಶ ಸಂಶೋಧನೆಯನ್ನು ಪ್ರತಿನಿಧಿಸುವ ರಾಕೆಟ್ ಮತ್ತು ವಿಜ್ಞಾನಿ, ಟೆಲಿಮೆಡಿಸಿನ್ ಮೂಲಕ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯೆ ಹಾಗೂ ಹೊಲದಲ್ಲಿ ಡ್ರೋನ್ ಹಾರಿಸುತ್ತಿರುವ ಮಹಿಳೆಯು ವಿಜ್ಞಾನ ಮತ್ತು ಕೃಷಿಯ ಸಮನ್ವಯವನ್ನು ಸಾರುತ್ತಾರೆ. ಹಿಂಭಾಗದಲ್ಲಿ ಸ್ತಬ್ಧಚಿತ್ರದ ಕೊನೆಯ ಭಾಗದಲ್ಲಿ ಬಂಗಾರದ ಬಣ್ಣದ ಸರ್ಕ್ಯೂಟ್‌ಗಳ ಮಧ್ಯೆ ಬೃಹತ್ ಮೈಕ್ರೋಚಿಪ್ ಮತ್ತು ರೋಬೋಟ್ ಮುಖವನ್ನು ಚಿತ್ರಿಸಲಾಗಿದೆ. ಇದು ಕರ್ನಾಟಕವನ್ನು ಜಾಗತಿಕ ಸೆಮಿಕಂಡಕ್ಟರ್ ಮತ್ತು ಹೈಟೆಕ್ ಕೇಂದ್ರವನ್ನಾಗಿ ಬಿಂಬಿಸುತ್ತದೆ. ಸಿರಿಧಾನ್ಯಗಳ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿರುವ ಕರ್ನಾಟಕವು, ಇಂದು ಬೆಂಗಳೂರಿನ ಮೂಲಕ ಐಟಿ, ಬಿಟಿ ಮತ್ತು ಸೆಮಿಕಂಡಕ್ಟರ್ ವಲಯದಲ್ಲಿ ಜಾಗತಿಕ ಮನ್ನಣೆ ಗಳಿಸಿದೆ.





