ಬಂಗಾಳ ಕೊಲ್ಲಿಯಲ್ಲಿ ಮತ್ತೆ ವಾಯುಭಾರ ಕುಸಿತವಾಗಿದ್ದು, ಕರ್ನಾಟಕ ರಾಜ್ಯದ ವಿವಿಧ ಭಾಗಗಳಲ್ಲಿ ಮಳೆ ಆರ್ಭಟ ಮತ್ತೆ ಶುರುವಾಗಿದೆ. ಕಳೆದ ಒಂದು ವಾರ ಮಳೆ ಕೊಂಚ ಕಡಿಮೆಯಾಗಿದ್ದ ಮಳೆ, ಈಗ ಸೋಮವಾರ (ಆಗಸ್ಟ್ 26)ರಿಂದ ಮತ್ತೆ ರಾಜ್ಯದಾದ್ಯಂತ ಧಾರಾಕಾರ ಮಳೆ ಪ್ರಾರಂಭವಾಗಿದೆ. ಈ ಹಿನ್ನೆಲೆಯಲ್ಲಿ, ಭಾರತೀಯ ಹವಾಮಾನ ಇಲಾಖೆ ರಾಜ್ಯದ 10 ಪ್ರಮುಖ ಜಿಲ್ಲೆಗಳಿಗೆ ‘ಯೆಲ್ಲೋ ಅಲರ್ಟ್’ ಘೋಷಿಸಿದೆ.
ಯಾವ ಜಿಲ್ಲೆಗಳಲ್ಲಿ ಭಾರೀ ಮಳೆ?
ಕರಾವಳಿ ಕರ್ನಾಟಕದ ಉಡುಪಿ, ಉತ್ತರ ಕನ್ನಡ, ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಧಾರಾಕಾರ ಮಳೆಯ ಆರ್ಭಟವು ತೀವ್ರವಾಗಿದೆ. ಇದೇ ರೀತಿ ಮಲೆನಾಡು ಮತ್ತು ಒಳನಾಡಿನ ಚಿಕ್ಕಮಗಳೂರು, ಕೊಡಗು, ಶಿವಮೊಗ್ಗ, ಬೆಳಗಾವಿ, ಬೀದರ್, ಕಲಬುರಗಿ, ಮತ್ತು ಯಾದಗಿರಿ ಜಿಲ್ಲೆಗಳಲ್ಲೂ ಭಾರೀ ಮಳೆ ಮುಂದುವರಿದಿದೆ. ಈ ಜಿಲ್ಲೆಗಳಲ್ಲಿ ಐಎಂಡಿ ಯೆಲ್ಲೋ ಅಲರ್ಟ್ ಜಾರಿಗೊಳಿಸಿದ್ದು, ಜನರಿಗೆ ಎಚ್ಚರಿಕೆಯಿಂದ ಇರಲು ಸೂಚಿಸಲಾಗಿದೆ. ಈ ಭಾಗಗಳಲ್ಲಿ ಮುಂದಿನ ಐದು ದಿನಗಳವರೆಗೆ ಭಾರೀ ಮಳೆಯ ಸಾಧ್ಯತೆ ಇದೆ ಎಂದು ವರದಿಯಾಗಿದೆ.
ವಾಯುಭಾರ ಕುಸಿತ
ಒಡಿಶಾ ಕರಾವಳಿಯ ವಾಯುವ್ಯ ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಕಂಡುಬಂದಿದೆ. ಈ ವಾಯುಭಾರ ಕುಸಿತದ ಚಂಡಮಾರುತದ ಪರಿಚಲನೆಯು ಸಮುದ್ರ ಮಟ್ಟದಿಂದ 7.6 ಕಿ.ಮೀ. ಎತ್ತರದವರೆಗೆ ವಿಸ್ತರಿಸಿದೆ. ಮುಂದಿನ ಎರಡು ದಿನಗಳಲ್ಲಿ ಇದು ಪಶ್ಚಿಮ-ವಾಯುವ್ಯ ದಿಕ್ಕಿನಲ್ಲಿ ಸಾಗುವ ಸಾಧ್ಯತೆ ಇದೆ. ಈ ವಾತಾವರಣದ ಪರಿಣಾಮದಿಂದಾಗಿ ಕರ್ನಾಟಕದಲ್ಲಿ ಮುಂದಿನ ಐದು ದಿನಗಳ ಕಾಲ ಧಾರಾಕಾರ ಮಳೆ ಮುಂದುವರಿಯಲಿದೆ ಎಂದು ಐಎಂಡಿ ತಿಳಿಸಿದೆ.
ಮೀನುಗಾರರಿಗೆ ಎಚ್ಚರಿಕೆ
ಭಾರೀ ಮಳೆಯ ಹಿನ್ನೆಲೆಯಲ್ಲಿ ಕರಾವಳಿ ಭಾಗದಲ್ಲಿ ಮೀನುಗಾರರಿಗೆ ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ. ಆಗಸ್ಟ್ 26 ರಿಂದ 28, 2025 ರವರೆಗೆ ಕರ್ನಾಟಕದ ಕರಾವಳಿಯಲ್ಲಿ ಗಂಟೆಗೆ 40-50 ಕಿ.ಮೀ. ವೇಗದಿಂದ 60 ಕಿ.ಮೀ. ವೇಗದವರೆಗೆ ಬಿರುಗಾಳಿ ಬೀಸುವ ಸಾಧ್ಯತೆ ಇದೆ. ಈ ಅವಧಿಯಲ್ಲಿ ಮೀನುಗಾರರು ಸಮುದ್ರಕ್ಕೆ ತೆರಳದಂತೆ ಐಎಂಡಿ ಸೂಚನೆ ನೀಡಿದೆ.
ಮುಂದಿನ ಎರಡು ದಿನಗಳಲ್ಲಿ ಭಾರೀ ಮಳೆ
ಬುಧವಾರ ಮತ್ತು ಗುರುವಾರ ರಾಜ್ಯದ ಹಲವೆಡೆ ಧಾರಾಕಾರ ಮಳೆ ಮುಂದುವರಿಯಲಿದೆ. ಈ ಎರಡು ದಿನಗಳಲ್ಲಿ ಕರಾವಳಿ ಮತ್ತು ಮಲೆನಾಡು ಭಾಗಗಳಲ್ಲಿ ಭಾರೀ ಮಳೆಯ ಸಾಧ್ಯತೆ ಇದ್ದು, ಜನರಿಗೆ ಅಗತ್ಯ ಮುಂಜಾಗ್ರತೆ ವಹಿಸಲು ಸೂಚಿಸಲಾಗಿದೆ. ರಸ್ತೆಗಳಲ್ಲಿ ನೀರು ನಿಲ್ಲುವ ಸಾಧ್ಯತೆ ಇದೆ, ಭೂಕುಸಿತದ ಆತಂಕ ಮತ್ತು ನದಿಗಳಲ್ಲಿ ನೀರಿನ ಮಟ್ಟ ಏರಿಕೆಯಾಗುವ ಸಂಭವವಿದೆ.
ಭಾರೀ ಮಳೆಯಿಂದಾಗಿ ಕಡಿಮೆ ಗೋಚರತೆ, ರಸ್ತೆಗಳಲ್ಲಿ ಜಲಾವೃತಗೊಳ್ಳುವ ಸಾಧ್ಯತೆ ಮತ್ತು ಭೂಕುಸಿತದ ಆತಂಕವಿರುವುದರಿಂದ ಜನರು ಎಚ್ಚರಿಕೆಯಿಂದ ಇರಬೇಕು.