ಬೆಂಗಳೂರು: ಬಂಗಾಳಕೊಲ್ಲಿಯ ಉತ್ತರ ಭಾಗದಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಹಿನ್ನೆಲೆಯಲ್ಲಿ ಕರ್ನಾಟಕದ ಕೆಲವು ಭಾಗಗಳಲ್ಲಿ ಮುಂದಿನ ಐದು ದಿನಗಳ ಕಾಲ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಮುನ್ಸೂಚನೆ ನೀಡಿದೆ.
ಈ ವಾಯುಭಾರ ಕುಸಿತದಿಂದಾಗಿ ಕರಾವಳಿ ಜಿಲ್ಲೆಗಳಾದ ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡದಲ್ಲಿ ಭಾರಿ ಮಳೆಯಾಗುವ ಸಂಭವ ಇದೆ. ಸೆಪ್ಟೆಂಬರ್ 1 ರಿಂದ 6 ರವರೆಗೆ ಕರಾವಳಿ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದ್ದು, ಸೆಪ್ಟೆಂಬರ್ 2 ಮತ್ತು 3 ರಂದು ಆರೆಂಜ್ ಅಲರ್ಟ್ ಜಾರಿಯಲ್ಲಿರುವುದರಿಂದ ಜನರು ಎಚ್ಚರಿಕೆಯಿಂದಿರಬೇಕೆಂದು ಇಲಾಖೆ ತಿಳಿಸಿದೆ.
ಕರಾವಳಿ ಜಿಲ್ಲೆಗಳಲ್ಲಿ ಭಾರಿ ಮಳೆ ಜೊತೆಗೆ ಗಾಳಿಯ ವೇಗವೂ 40-50 ಕಿ.ಮೀ. ಪ್ರತಿ ಗಂಟೆಗೆ ಇರಲಿದೆ ಎಂದು ಎಚ್ಚರಿಕೆ ನೀಡಲಾಗಿದೆ. ದಕ್ಷಿಣ ಒಳನಾಡಿನ ಜಿಲ್ಲೆಗಳಾದ ಬೆಂಗಳೂರು, ಮೈಸೂರು, ಕೊಡಗು ಮತ್ತು ಚಿಕ್ಕಮಗಳೂರು ಸೇರಿದಂತೆ ಕೆಲವು ಕಡೆ ಹಗುರವಾಗಿ ಮಳೆಯಾಗುವ ಸಾಧ್ಯತೆ ಇದೆ. ಉತ್ತರ ಒಳನಾಡಿನ ಬಾಗಲಕೋಟೆ, ಬೆಳಗಾವಿ, ಗದಗ ಮತ್ತು ಇತರ ಜಿಲ್ಲೆಗಳಲ್ಲಿ ಸಾಧಾರಣ ಮಳೆ ನಿರೀಕ್ಷಿಸಲಾಗಿದೆ.
ಸೆಪ್ಟೆಂಬರ್ ತಿಂಗಳು ಮುಂಗಾರಿನ ಕೊನೆಯ ತಿಂಗಳಾಗಿದ್ದು, ಈ ವರ್ಷ ರಾಜ್ಯದಲ್ಲಿ ವಾಡಿಕೆಗಿಂತ ಹೆಚ್ಚಿನ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಜೂನ್ 1 ರಿಂದ ಆಗಸ್ಟ್ 31 ರವರೆಗಿನ ಅವಧಿಯಲ್ಲಿ ಭಾರತದಾದ್ಯಂತ 743.1 ಮಿ.ಮೀ. ಮಳೆಯಾಗಿದ್ದು, ಇದು ಸಾಮಾನ್ಯವಾದ 700 ಮಿ.ಮೀ.ಗಿಂತ ಹೆಚ್ಚಾಗಿದೆ. ಸೆಪ್ಟೆಂಬರ್‌ನಲ್ಲಿ ದೀರ್ಘಕಾಲಿನ ಸರಾಸರಿಯಾದ 167.9 ಮಿ.ಮೀ. ಮಳೆಯ ಬದಲು ಶೇಕಡ 109 ರಷ್ಟು ಹೆಚ್ಚು ಮಳೆಯಾಗುವ ನಿರೀಕ್ಷೆ ಇದೆ. ಈ ಅಧಿಕ ಮಳೆಯಿಂದ ಕೆಲವು ರಾಜ್ಯಗಳಲ್ಲಿ ಪ್ರವಾಹದ ಸಂಭವಿಸುವ ಆತಂಕವಿದ್ದು, ಕರ್ನಾಟಕದ ಕರಾವಳಿ ಮತ್ತು ಒಳನಾಡಿನ ಕೆಲವು ಭಾಗಗಳಲ್ಲಿ ಜನರು ಎಚ್ಚರಿಕೆಯಿಂದಿರಬೇಕು.
ಈಗಾಗಲೇ ದೇಶಾದ್ಯಂತ ಭಾರಿ ಮಳೆಯಿಂದಾಗಿ ಹಲವಾರು ಕಡೆ ಅವಾಂತರ ಸೃಷ್ಟಿಯಾಗಿದೆ. ಕೃಷಿ ಭೂಮಿಗಳು ಜಲಾವೃತವಾಗಿದ್ದು, ರಸ್ತೆ ಸಂಪರ್ಕ ಕಡಿತಗೊಂಡಿದೆ. ಕರಾವಳಿ ಜಿಲ್ಲೆಗಳಲ್ಲಿ ಮೀನುಗಾರರಿಗೆ ಸಮುದ್ರಕ್ಕಿಳಿಯದಂತೆ ಎಚ್ಚರಿಕೆ ನೀಡಲಾಗಿದೆ. ಸ್ಥಳೀಯ ಆಡಳಿತವು ತಗ್ಗು ಪ್ರದೇಶಗಳಲ್ಲಿ ವಾಸಿಸುವ ಜನರಿಗೆ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸೂಚಿಸಿದೆ.