ಬೆಂಗಳೂರು: ಕರ್ನಾಟಕ ರಾಜಕೀಯದಲ್ಲಿ ಸಂಕ್ರಾಂತಿ ಹಬ್ಬದ ಸಂಭ್ರಮದ ನಡುವೆಯೇ ಅಧಿಕಾರ ಹಂಚಿಕೆಯ ಚರ್ಚೆ ಆರಂಭವಾಗುವ ಲಕ್ಷಣಗಳು ದಟ್ಟವಾಗಿದ್ದವು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಎರಡೂವರೆ ವರ್ಷದ ಅವಧಿ ಪೂರ್ಣಗೊಳ್ಳುತ್ತಿರುವ ಬೆನ್ನಲ್ಲೇ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸಿಎಂ ಪಟ್ಟದ ಮೇಲೆ ಕಣ್ಣಿಟ್ಟಿದ್ದರು. ಆದರೆ, ದೆಹಲಿಯ ಕಾಂಗ್ರೆಸ್ ಹೈಕಮಾಂಡ್ ಈಗ ಹೊಸ ದಾಳ ಉರುಳಿಸಿದ್ದು, ಕೆಪಿಸಿಸಿ ಅಧ್ಯಕ್ಷರ ಲೆಕ್ಕಾಚಾರವನ್ನು ಬುಡಮೇಲು ಮಾಡಿದಂತಿದೆ.
ರಾಜ್ಯ ಕಾಂಗ್ರೆಸ್‌ನಲ್ಲಿ ನಾಯಕತ್ವ ಬದಲಾವಣೆಯ ಗಾಳಿ ಬೀಸಲಿದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಹೈಕಮಾಂಡ್, ಡಿಕೆಶಿ ಅಸ್ಸಾಂನ ವಿಧಾನಸಭಾ ಚುನಾವಣಾ ವೀಕ್ಷಕರ ಜವಾಬ್ದಾರಿಯನ್ನು ಹೊರಿಸಿದೆ. ಏಪ್ರಿಲ್ ಅಥವಾ ಮೇ ತಿಂಗಳಲ್ಲಿ ಅಸ್ಸಾಂ ಚುನಾವಣೆ ನಡೆಯಲಿದ್ದು, ಅಲ್ಲಿಯವರೆಗೆ ಡಿಕೆಶಿ ತಮ್ಮ ಪೂರ್ಣ ಗಮನವನ್ನು ಅಸ್ಸಾಂನತ್ತ ಹರಿಸಬೇಕಿದೆ.
ಇದು ಪರೋಕ್ಷವಾಗಿ ಕರ್ನಾಟಕದಲ್ಲಿ ಸದ್ಯಕ್ಕೆ ಸಿಎಂ ಬದಲಾವಣೆ ಇಲ್ಲ ಎಂಬ ಸಂದೇಶವನ್ನು ರವಾನಿಸಿದಂತಿದೆ. ಹೈಕಮಾಂಡ್ ಈ ನಡೆಯ ಮೂಲಕ ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆಯಲು ಮುಂದಾಗಿದೆ, ಮೊದಲನೆಯದಾಗಿ ನಾಯಕತ್ವ ಬದಲಾವಣೆಗೆ ಬ್ರೇಕ್ ಬೀಳಲಿದ್ದು, ಮುಂದಿನ 3-4 ತಿಂಗಳು ಡಿಕೆಶಿ ಅಸ್ಸಾಂನಲ್ಲಿ ಕಾರ್ಯ ನಿರತರಾಗಿರುವುದರಿಂದ ರಾಜ್ಯದಲ್ಲಿ ಸಿಎಂ ಪಟ್ಟದ ಚರ್ಚೆಗೆ ತೆರೆ ಬೀಳಲಿದೆ. ಇದರ ಜೊತೆಗೆ ಈ ಹಿಂದೆ ಮಹಾರಾಷ್ಟ್ರ, ಗೋವಾ ಮತ್ತು ತೆಲಂಗಾಣಗಳಲ್ಲಿ ಡಿಕೆಶಿ ಬೆನ್ನಿಗೆ ಮಿಶ್ರ ಫಲ ಸಿಕ್ಕಿತ್ತು. ಈಗ ಈಶಾನ್ಯ ರಾಜ್ಯದ ಜವಾಬ್ದಾರಿ ನೀಡುವ ಮೂಲಕ ಅವರ ಸಂಘಟನಾ ಶಕ್ತಿಯನ್ನು ಹೈಕಮಾಂಡ್ ಮತ್ತೊಮ್ಮೆ ಪರೀಕ್ಷಿಸುತ್ತಿದೆ.
ಅಸ್ಸಾಂ ಅಭ್ಯರ್ಥಿಗಳ ಸ್ಕ್ರೀನಿಂಗ್ ಕಮಿಟಿಯಲ್ಲಿ ಪ್ರಿಯಾಂಕಾ ಗಾಂಧಿ ವಾದ್ರಾ ಇದ್ದಾರೆ. ಈಗ ಡಿಕೆಶಿ ಅವರು ಪ್ರಿಯಾಂಕಾ ಅವರೊಂದಿಗೆ ಕೆಲಸ ಮಾಡಬೇಕಿದೆ. ಅಸ್ಸಾಂನಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಅಥವಾ ಉತ್ತಮ ಸಾಧನೆ ಮಾಡಿದರೆ ಮಾತ್ರ ಡಿಕೆಶಿ ಅವರಿಗೆ ಕರ್ನಾಟಕದ ಸಿಎಂ ಸ್ಥಾನಕ್ಕೆ ಹಾದಿ ಸುಗಮವಾಗಲಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಇದರಿಂದಾಗಿ ಡಿಕೆಶಿ ಫುಲ್ ಅಪ್‌ಸೆಟ್ ಆಗಿದ್ದರೂ, ಹೈಕಮಾಂಡ್ ಆದೇಶಕ್ಕೆ ತಲೆಬಾಗಿ ಅಸ್ಸಾಂನತ್ತ ಮುಖ ಮಾಡಿದ್ದಾರೆ.
ಡಿಕೆಶಿ ಅವರಿಗೆ ಅಸ್ಸಾಂ ಜವಾಬ್ದಾರಿ ಸಿಗುತ್ತಿದ್ದಂತೆ ಇತ್ತ ಮುಖ್ಯಮಂತ್ರಿ ಸಿದ್ದರಾಮಯ್ಯ ಬಣ ಕೂಡ ಎಚ್ಚೆತ್ತುಕೊಂಡಿದೆ. ಸಿದ್ದರಾಮಯ್ಯ ಅವರ ಉತ್ತರಾಧಿಕಾರಿಯಾಗಿ ಸತೀಶ್ ಜಾರಕಿಹೊಳಿ ಅವರನ್ನು ಬಿಂಬಿಸಲು ಅವರ ಬೆಂಬಲಿಗರು ಪ್ರಯತ್ನಿಸುತ್ತಿದ್ದಾರೆ. ಇದರ ಭಾಗವಾಗಿಯೇ ಸತೀಶ್ ಜಾರಕಿಹೊಳಿ ಅವರು ದೆಹಲಿಗೆ ತೆರಳಲು ಸಿದ್ಧತೆ ನಡೆಸುತ್ತಿದ್ದಾರೆ. ಇತ್ತೀಚೆಗೆ ಅವರು ಮಾಜಿ ಸಚಿವ ಕೆ.ಎನ್. ರಾಜಣ್ಣ ಅವರೊಂದಿಗೆ 40 ನಿಮಿಷಗಳ ಕಾಲ ನಡೆಸಿದ ಮೀಟಿಂಗ್ ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿದೆ.
ಸಂಕ್ರಾಂತಿಯ ಹೊತ್ತಿಗೆ ಸಿಎಂ ಬದಲಾವಣೆಯ ಸಿಹಿ ಸುದ್ದಿಯ ನಿರೀಕ್ಷೆಯಲ್ಲಿದ್ದ ಡಿಕೆಶಿ ಬೆಂಬಲಿಗರಿಗೆ ಹೈಕಮಾಂಡ್ ಭಾರಿ ಟ್ವಿಸ್ಟ್ ನೀಡಿದೆ. ಸಿದ್ದರಾಮಯ್ಯ ಅವರು ತಮ್ಮ ಸ್ಥಾನವನ್ನು ಭದ್ರಪಡಿಸಿಕೊಳ್ಳುವಲ್ಲಿ ಸದ್ಯಕ್ಕೆ ಯಶಸ್ವಿಯಾಗಿದ್ದಾರೆ. ಅತ್ತ ಅಸ್ಸಾಂ ನಲ್ಲಿ ಡಿಕೆಶಿ ಯಾವ ರೀತಿ ಕಮಾಲ್ ಮಾಡುತ್ತಾರೆ ಎಂಬುದನ್ನ ಕಾದು ನೋಡಬೇಕಿದೆ.





