ಕಲಬುರಗಿ : ಇತ್ತೀಚಿಗೆ ನಡೆದ ಸಿಇಟಿ (CET) ಪರೀಕ್ಷೆಯಲ್ಲಿ ಅಧಿಕಾರಿಗಳು ಬ್ರಾಹ್ಮಣ ವಿದ್ಯಾರ್ಥಿಗಳ ಜನಿವಾರ ತೆಗೆಸಿದ್ದರು. ಇದೀಗ ಕಲಬುರಗಿಯ ಸೇಂಟ್ ಮೇರಿ ಶಾಲೆಯಲ್ಲಿ ನಡೆದ ನೀಟ್ (NEET) ಪರೀಕ್ಷೆಯಲ್ಲೂ ಇದೇ ರೀತಿಯ ಕ್ರಮ ಕೈಗೊಂಡಿದ್ದಾರೆ. ಈ ಘಟನೆಯಲ್ಲಿ ವಿದ್ಯಾರ್ಥಿ ಶ್ರೀಪಾದ್ ಪಾಟೀಲ್ ಅವರ ಜನಿವಾರವನ್ನು ತೆಗೆಯುವಂತೆ ಅಧಿಕಾರಿಗಳು ಸೂಚಿಸಿದ್ದು, ಈ ಕ್ರಮವನ್ನು ಖಂಡಿಸಿ ಬ್ರಾಹ್ಮಣ ಸಮಾಜವು ಪರೀಕ್ಷಾ ಕೇಂದ್ರದ ಮುಂದೆ ಪ್ರತಿಭಟನೆ ನಡೆಸಲಾಯಿತು.
ನೀಟ್ ಪರೀಕ್ಷೆಗೆ ಹಾಜರಾಗಲು ಬಂದಿದ್ದ ಶ್ರೀಪಾದ್ ಪಾಟೀಲ್ ಅವರಿಗೆ ಪರೀಕ್ಷಾ ಕೇಂದ್ರದ ಒಳಗೆ ಪ್ರವೇಶಿಸುವ ಮುನ್ನ ಜನಿವಾರ ತೆಗೆಯುವಂತೆ ಅಧಿಕಾರಿಗಳು ಒತ್ತಾಯಿಸಿದರು. ಸೂಚನೆಯನ್ನು ಪಾಲಿಸಿದ ಶ್ರೀಪಾದ್ ಜನಿವಾರ ತೆಗೆದು ಪರೀಕ್ಷೆ ಬರೆದಿದ್ದಾರೆ. ಆದರೆ, ಈ ಘಟನೆಯು ಧಾರ್ಮಿಕ ಸಂವೇದನೆಗಳಿಗೆ ಧಕ್ಕೆ ತಂದಿದೆ ಎಂದು ಆರೋಪಿಸಿ ಬ್ರಾಹ್ಮಣ ಸಮುದಾಯವು ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಜನಿವಾರ ತೆಗೆಸಿದ ಅಧಿಕಾರಿಯನ್ನು ಅಮಾನತುಗೊಳಿಸುವಂತೆ ಸಮುದಾಯವು ಒತ್ತಾಯಿಸಿದೆ.
ಈ ಘಟನೆಗೂ ಮುನ್ನ ಸಿಇಟಿ ಪರೀಕ್ಷೆಯಲ್ಲಿ ಇದೇ ರೀತಿಯ ಘಟನೆಗಳು ಶಿವಮೊಗ್ಗ, ಬೀದರ್, ಮತ್ತು ಧಾರವಾಡದ ಪರೀಕ್ಷಾ ಕೇಂದ್ರಗಳಲ್ಲಿ ನಡೆದಿದ್ದವು. ಶಿವಮೊಗ್ಗದಲ್ಲಿ ಒಬ್ಬ ವಿದ್ಯಾರ್ಥಿಯ ಜನಿವಾರ ಮತ್ತು ಕೈಗೆ ಕಟ್ಟಿದ್ದ ಕಾಶಿ ದಾರವನ್ನು ತೆಗೆಸಿ, ಅವುಗಳನ್ನು ಕಸದ ಬುಟ್ಟಿಗೆ ಎಸೆಯಲಾಗಿತ್ತು. ಬೀದರ್‌ನಲ್ಲಿ ಜನಿವಾರ ಧರಿಸಿದ್ದ ವಿದ್ಯಾರ್ಥಿಗೆ ಪರೀಕ್ಷೆ ಬರೆಯಲು ಅವಕಾಶ ನಿರಾಕರಿಸಲಾಗಿತ್ತು. ಈ ಘಟನೆಗಳು ರಾಜ್ಯಾದ್ಯಂತ ಭಾರೀ ಚರ್ಚೆಗೆ ಕಾರಣವಾಗಿದ್ದವು. ಬ್ರಾಹ್ಮಣ ಮಹಾಸಭಾ ಸೇರಿದಂತೆ ಹಲವು ಸಂಘಟನೆಗಳು ಈ ಕ್ರಮಗಳನ್ನು ತೀವ್ರವಾಗಿ ಖಂಡಿಸಿದ್ದವು.
ಈ ಘಟನೆಗಳಿಗೆ ಸಂಬಂಧಿಸಿದಂತೆ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿದೆ. ಬೀದರ್‌ನ ಖಾಸಗಿ ಕಾಲೇಜಿನಲ್ಲಿ ನಡೆದ ಘಟನೆಗೆ ಸಂಬಂಧಿಸಿದಂತೆ ತನಿಖೆ ಆರಂಭಿಸಲಾಗಿದೆ. ಈ ಘಟನೆಗಳು ವಿದ್ಯಾರ್ಥಿಗಳ ಭವಿಷ್ಯದ ಮೇಲೆ ಪರಿಣಾಮ ಬೀರುವ ಜೊತೆಗೆ ಧಾರ್ಮಿಕ ಸಂವೇದನೆಗಳಿಗೆ ಸಂಬಂಧಿಸಿದ ವಿವಾದಗಳನ್ನು ಉಂಟುಮಾಡಿವೆ.