ಬೆಳಗಾವಿ: ರಾಜ್ಯ ಸರ್ಕಾರದ ಆದಾಯದ ಪ್ರಮುಖ ಮೂಲವಾದ ಮದ್ಯದ ಮಾರಾಟ ಮತ್ತು ಅದರಿಂದ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿರುವ ಮದ್ಯಪ್ರಿಯರ ಕುರಿತು ವಿಧಾನ ಪರಿಷತ್‌ನಲ್ಲಿ ಗಂಭೀರ ಚರ್ಚೆ ನಡೆಯಿತು. ನಿಯಮ 330ರ ಅಡಿ ಬಿಜೆಪಿ ಸದಸ್ಯ ರವಿಕುಮಾರ್ ಅವರು ಈ ವಿಷಯವನ್ನು ಪ್ರಸ್ತಾಪಿಸಿ, ಮದ್ಯಸೇವಕರ ಚಿಕಿತ್ಸೆಗಾಗಿ ಸರ್ಕಾರವು ಆದಾಯದ ಒಂದು ಭಾಗವನ್ನು ಮೀಸಲಿಡಬೇಕು ಎಂದು ಒತ್ತಾಯಿಸಿದರು.
ಸದಸ್ಯ ರವಿಕುಮಾರ್ ಅವರು ಮದ್ಯಪಾನದಿಂದ ಉಂಟಾಗುತ್ತಿರುವ ಆರೋಗ್ಯ ಸಮಸ್ಯೆಗಳ ಬಗ್ಗೆ ಅಂಕಿ-ಅಂಶಗಳ ಸಮೇತ ಮಾಹಿತಿ ನೀಡಿದರು. ಮದ್ಯ ಸೇವಿಸುವವರಲ್ಲಿ ಶೇ. 3ರಷ್ಟು ಜನ ಗಂಭೀರ ರೋಗಗಳಿಗೆ ತುತ್ತಾಗುತ್ತಿದ್ದಾರೆ. ಇವರಲ್ಲಿ ಲಿವರ್ ಡ್ಯಾಮೇಜ್ (ಯಕೃತ್ತಿನ ಹಾನಿ) ಮತ್ತು ಜಾಂಡಿಸ್ (ಕಾಮಾಲೆ) ಕಾಯಿಲೆಗಳು ಪ್ರಮುಖವಾಗಿದ್ದು, ಇದರಿಂದ ಮದ್ಯಪ್ರಿಯರು ಬೇಗನೆ ಸಾವನ್ನಪ್ಪುತ್ತಿದ್ದಾರೆ ಎಂದು ರವಿಕುಮಾರ್ ಗಮನ ಸೆಳೆದರು. ದೇಶದಲ್ಲಿ ಸುಮಾರು 15 ಲಕ್ಷ ಜನ ಮದ್ಯಪಾನ ಸಂಬಂಧಿತ ಕಾಯಿಲೆಗಳಿಂದ ಸಾವನ್ನಪ್ಪುತ್ತಿದ್ದಾರೆ. ಐವರು ಮದ್ಯಪ್ರಿಯರ ಪೈಕಿ ಒಬ್ಬರು ಜಾಂಡಿಸ್‌ನಿಂದ ಸಾಯುತ್ತಿದ್ದಾರೆ ಎಂದಿರುವ ಅವರು, ಇದು ಆತಂಕಕಾರಿ ವಿಷಯ ಎಂದರು.
ಮದ್ಯಪ್ರಿಯರು ಹೆಚ್ಚು ದಿನ ಬದುಕಿದ್ದರೆ, ಅವರು ಸರ್ಕಾರಕ್ಕೆ ಆದಾಯವನ್ನು ನೀಡಲು ಸಾಧ್ಯವಾಗುತ್ತದೆ ಎಂದು ಹೇಳಿದ ರವಿಕುಮಾರ್, ಅವರ ಚಿಕಿತ್ಸೆಗೆ ಸರ್ಕಾರ ನೆರವಾಗಬೇಕು ಎಂದು ಒತ್ತಾಯಿಸಿದರು. ಬಿಜೆಪಿ ಸದಸ್ಯರ ಪ್ರಶ್ನೆಗೆ ಅಬಕಾರಿ ಸಚಿವ ಆರ್.ಬಿ. ತಿಮ್ಮಾಪೂರ ಅವರು ಉತ್ತರಿಸಿ, ಈ ಸಂದರ್ಭದಲ್ಲಿ ಅವರು ರಾಜ್ಯದಲ್ಲಿ ಬಿಯರ್ ಮಾರಾಟದ ಇತ್ತೀಚಿನ ಅಂಕಿ-ಅಂಶಗಳನ್ನು ಪ್ರಸ್ತುತಪಡಿಸಿದರು.
ಪ್ರಸಕ್ತ ಹಣಕಾಸು ವರ್ಷದ ಏಪ್ರಿಲ್‌ನಿಂದ ಸೆಪ್ಟೆಂಬರ್ ಅವಧಿಯಲ್ಲಿ 195 ಲಕ್ಷ ಪೆಟ್ಟಿಗೆ ಬಿಯರ್ ಮಾರಾಟವಾಗಿದೆ.ಕಳೆದ ವರ್ಷ ಇದೇ ಅವಧಿಗೆ ಹೋಲಿಸಿದಲ್ಲಿ, ಈ ವರ್ಷ ಬಿಯರ್ ಮಾರಾಟದಲ್ಲಿ ಇಳಿಕೆಯಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 46 ರಿಂದ 47 ಲಕ್ಷ ಬಾಕ್ಸ್ ಬಿಯರ್ ಮಾರಾಟವಾಗಿತ್ತು. ಇದರಿಂದ ಶೇಕಡ 19.55 ರಷ್ಟು ಬಿಯರ್ ಮಾರಾಟದ ಬೆಳವಣಿಗೆ ಕುಂಠಿತವಾಗಿದೆ ಎಂದು ಹೇಳಿದ್ದಾರೆ.
ಬಿಯರ್ ಮಾರಾಟದಲ್ಲಿನ ಈ ಕುಸಿತಕ್ಕೆ ಕಾರಣವನ್ನೂ ವಿವರಿಸಿದ ಸಚಿವ, ರಾಜ್ಯದಲ್ಲಿ ಈ ವರ್ಷ ಹೆಚ್ಚಿನ ಮಳೆಯಿಂದಾಗಿ ಶೀತದ ವಾತಾವರಣ ಇದೆ. ಈ ಶೀತ ವಾತಾವರಣದ ಕಾರಣದಿಂದಾಗಿ ಬಿಯರ್ ಮಾರಾಟದಲ್ಲಿ ಕುಸಿತವಾಗಿದೆ ಎಂದು ಅವರು ಹೇಳಿದ್ದಾರೆ.
ಇದೇ ವೇಳೆ, ಮದ್ಯಪ್ರಿಯರ ಚಿಕಿತ್ಸೆಗೆ ಆದಾಯ ಮೀಸಲಿಡುವ ಬಗ್ಗೆ ನೇರ ಉತ್ತರ ನೀಡದ ಸಚಿವರು, ಅಬಕಾರಿ ಆದಾಯದಿಂದ ಬರುವ ಹಣವನ್ನು ರಾಜ್ಯದ ಬಜೆಟ್ ಕಾರ್ಯಕ್ರಮಗಳು, ಅಭಿವೃದ್ಧಿ ಯೋಜನೆಗಳು ಮತ್ತು ಸಾಮಾಜಿಕ ಕಾರ್ಯಕ್ರಮಗಳಿಗೆ ನೀಡುತ್ತಿದ್ದೇವೆ ಎಂದು ಸ್ಪಷ್ಟಪಡಿಸಿದರು.
ಒಟ್ಟಿನಲ್ಲಿ, ಮದ್ಯದಿಂದ ಸರ್ಕಾರಕ್ಕೆ ಆದಾಯ ನೀಡುತ್ತಿರುವವರ ಆರೋಗ್ಯಕ್ಕೆ ಸರ್ಕಾರ ಎಷ್ಟು ಜವಾಬ್ದಾರಿಯುತವಾಗಿ ಸ್ಪಂದಿಸಬೇಕು ಎಂಬ ವಿಚಾರವು ವಿಧಾನ ಪರಿಷತ್‌ನಲ್ಲಿ ಚರ್ಚೆಗೆ ಗ್ರಾಸವಾಯಿತು.





