ದೇಶದ 77ನೇ ಗಣರಾಜ್ಯೋತ್ಸವದ ಸಂಭ್ರಮಕ್ಕೆ ಕ್ಷಣಗಣನೆ ಆರಂಭವಾಗಿರುವ ಹೊತ್ತಲ್ಲೇ , ನವದೆಹಲಿಯ ಕರ್ತವ್ಯ ಪಥದಲ್ಲಿ ನಡೆಯಲಿರುವ ಪ್ರತಿಷ್ಠಿತ ಗಣರಾಜ್ಯೋತ್ಸವ ಪಥಸಂಚಲನದಲ್ಲಿ ಈ ಬಾರಿ ಕರ್ನಾಟಕದ ಸ್ತಬ್ಧಚಿತ್ರಕ್ಕೆ (Tableau) ಕೇಂದ್ರ ಸರ್ಕಾರ ಅವಕಾಶ ನೀಡಿಲ್ಲ. ಇದರಿಂದ ಬೇಸರಗೊಂಡ ಕಾಂಗ್ರೆಸ್ ಸರ್ಕಾರ ಕೇಂದ್ರ ಸರ್ಕಾರದ ವಿರುದ್ದ ಕಿಡಿಕಾರಿದ್ದಾರೆ.
ಸ್ತಬ್ಧಚಿತ್ರದ ವಿಶೇಷತೆಯೇನಿತ್ತು ?
ಈ ಬಾರಿ ಕರ್ನಾಟಕವು ಮಿಲೆಟ್ಸ್ ಟು ಮೈಕ್ರೋಚಿಪ್ (ಸಿರಿಧಾನ್ಯದಿಂದ ಮೈಕ್ರೋಚಿಪ್‌ವರೆಗೆ) ಎಂಬ ಪರಿಕಲ್ಪನೆಯ ಸ್ತಬ್ಧಚಿತ್ರವನ್ನು ಸಿದ್ಧಪಡಿಸಿತ್ತು. ರಾಜ್ಯದ ಸಾಂಪ್ರದಾಯಿಕ ಬೆಳೆಗಳಾದ ರಾಗಿ, ಜೋಳ, ಸಜ್ಜೆ ಹಾಗೂ ನವಣೆಯಂತಹ ಸಿರಿಧಾನ್ಯಗಳ ಮಹತ್ವ ಸಾರುವ ಹಾಗೂ ಭಾರತದ ಸಿಲಿಕಾನ್ ವ್ಯಾಲಿ ಖ್ಯಾತಿಯ ಬೆಂಗಳೂರಿನ ಮಾಹಿತಿ ತಂತ್ರಜ್ಞಾನ ಮತ್ತು ಮೈಕ್ರೋಚಿಪ್ ತಯಾರಿಕೆಯ ಪ್ರಗತಿ ಸೇರಿದಂತೆ ಆತ್ಮನಿರ್ಭರ ಭಾರತಕ್ಕೆ ಕೃಷಿ ಮತ್ತು ತಂತ್ರಜ್ಞಾನದ ಮೂಲಕ ಕರ್ನಾಟಕ ನೀಡುತ್ತಿರುವ ಸಮಗ್ರ ಕೊಡುಗೆಯನ್ನು ಈ ಸ್ತಬ್ಧಚಿತ್ರ ಬಿಂಬಿಸುತ್ತಿತ್ತು. ಆದರೆ, ಅಂತಿಮ ಹಂತದ ಆಯ್ಕೆ ಪ್ರಕ್ರಿಯೆಯಲ್ಲಿ ಕರ್ನಾಟಕದ ಪ್ರಸ್ತಾವನೆಯನ್ನು ಕೈಬಿಡಲಾಗಿದೆ.
ಸಂಸದ ಯದುವೀರ್ ನೀಡಿದ ಕಾರಣವೇನು ?
ಈ ಬಗ್ಗೆ ಮೈಸೂರು-ಕೊಡಗು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಪ್ರತಿಕ್ರಿಯಿಸಿದ್ದು, ಈ ಬಾರಿ ಗಣರಾಜ್ಯೋತ್ಸವ ಪರೇಡ್‌ನಲ್ಲಿ ರಾಜ್ಯದ ಸ್ತಬ್ಧಚಿತ್ರ ಭಾಗವಹಿಸುತ್ತಿಲ್ಲ. ಆಯ್ಕೆ ಪ್ರಕ್ರಿಯೆಯ ಸಂದರ್ಭದಲ್ಲಿ ಸರಿಯಾದ ಪತ್ರ ವ್ಯವಹಾರ (Communication) ನಡೆಯದ ಕಾರಣ ತಾಂತ್ರಿಕ ಗೊಂದಲ ಉಂಟಾಗಿತ್ತು. ಹೀಗಾಗಿ ಈ ಬಾರಿ ಕರ್ನಾಟಕದ ಟ್ಯಾಬ್ಲೋಗೆ ಅವಕಾಶ ಸಿಕ್ಕಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ಕಾಂಗ್ರೆಸ್ ನಾಯಕರ ತೀವ್ರ ಆಕ್ರೋಶ
ಕರ್ನಾಟಕದ ಸ್ತಬ್ಧಚಿತ್ರಕ್ಕೆ ಅವಕಾಶ ತಪ್ಪಿದ್ದನ್ನು ಕಾಂಗ್ರೆಸ್ ನಾಯಕರು ರಾಜ್ಯಕ್ಕೆ ಮಾಡಿದ ಅವಮಾನ ಎಂದು ಹೇಳಿ, ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ಕೇರಳ, ತಮಿಳುನಾಡು ಮತ್ತು ಪುದುಚೇರಿ ರಾಜ್ಯಗಳಿಗೆ ಅವಕಾಶ ನೀಡಲಾಗಿದೆ, ಏಕೆಂದರೆ ಅಲ್ಲಿ ಚುನಾವಣೆಗಳಿವೆ. ಕರ್ನಾಟಕದಲ್ಲಿ ಚುನಾವಣೆ ಇಲ್ಲ ಎಂಬ ಕಾರಣಕ್ಕೆ ನಮ್ಮನ್ನು ಕಡೆಗಣಿಸಲಾಗಿದೆಯೇ ?” ಎಂದು ಪ್ರಶ್ನಿಸಿದ್ದಾರೆ. ಇದರ ಜೊತೆಗೆ ರಾಜ್ಯದಿಂದ ಆಯ್ಕೆಯಾದ ಬಿಜೆಪಿಯ ಸಂಸದರು ದೆಹಲಿಯಲ್ಲಿ ಏನು ಮಾಡುತ್ತಿದ್ದಾರೆ ? ಕರ್ನಾಟಕದ ಅಸ್ಮಿತೆಯನ್ನು ಕಾಪಾಡಲು ಇವರಿಂದ ಸಾಧ್ಯವಾಗುತ್ತಿಲ್ಲವೇ ? ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಚಿವ ಸೋಮಣ್ಣ, ಬಿಜೆಪಿ ನಾಯಕರಾದ ಆರ್. ಅಶೋಕ್, ಬಸನಗೌಡ ಪಾಟೀಲ್ ಯತ್ನಾಳ್ ಮತ್ತು ಸಂಸದ ತೇಜಸ್ವಿ ಸೂರ್ಯ ಅವರು ಈ ಬಗ್ಗೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಬೇಕಿತ್ತು ಎಂದು ಕಾಂಗ್ರೆಸ್ ವಾಗ್ದಾಳಿ ನಡೆಸಿದೆ. ಒಟ್ಟಾರೆಯಾಗಿ, 77ನೇ ಗಣರಾಜ್ಯೋತ್ಸವದಂದು ದೆಹಲಿಯ ಬೀದಿಗಳಲ್ಲಿ ಕರ್ನಾಟಕದ ಸ್ತಬ್ಧಚಿತ್ರ ಕಾಣಸಿಗದಿರುವುದು ಕನ್ನಡಿಗರ ಪಾಲಿಗೆ ದೊಡ್ಡ ನಿರಾಸೆಯಾಗಿದೆ.





