ಬೆಂಗಳೂರು, ಅಕ್ಟೋಬರ್ 30: ಧರ್ಮಸ್ಥಳ ತಲೆಬುರುಡೆ ಪ್ರಕರಣದಲ್ಲಿ ಗಿರೀಶ್ ಮಟ್ಟಣ್ಣನವರ್, ಮಹೇಶ್ ಶೆಟ್ಟಿ ತಿಮರೋಡಿ, ಟಿ. ಜಯಂತ್, ಮತ್ತು ವಿಠಲ್ ಗೌಡಗೆ ಕರ್ನಾಟಕ ಹೈಕೋರ್ಟ್ ತಾತ್ಕಾಲಿಕ ರಿಲೀಫ್ ನೀಡಿದೆ. ಧರ್ಮಸ್ಥಳ ಠಾಣೆಯಲ್ಲಿ ದಾಖಲಾಗಿರುವ FIR 39/2025 ರದ್ದು ಕೋರಿ ಸಲ್ಲಿಸಲಾದ ಅರ್ಜಿಯನ್ನು ನ್ಯಾಯಮೂರ್ತಿ ಮೊಹಮ್ಮದ್ ನವಾಜ್ ಅವರ ನೇತೃತ್ವದ ಏಕಸದಸ್ಯ ಪೀಠವು ವಿಚಾರಣೆ ನಡೆಸಿ, ಪ್ರಕರಣದ ತನಿಖೆಗೆ ನವೆಂಬರ್ 12ರವರೆಗೆ ತಡೆಯಾಜ್ಞೆ ನೀಡಿದೆ.
ಅರ್ಜಿದಾರರ ಪರವಾಗಿ ವಕೀಲ ಬಾಲನ್ ವಾದ ಮಂಡಿಸಿದರು. “ಈಗಾಗಲೇ 9 ಬಾರಿ ನೋಟಿಸ್‌ಗಳನ್ನು ಜಾರಿಗೊಳಿಸಿ ವಿಚಾರಣೆ ನಡೆಸಲಾಗಿದೆ. ಆದರೆ, ಎಫ್‌ಐಆರ್‌ನಲ್ಲಿ ಈ ನಾಲ್ವರನ್ನು ಆರೋಪಿಗಳೆಂದು ಉಲ್ಲೇಖಿಸಿಲ್ಲ. ಖುದ್ದಾಗಿ ಸಮನ್ಸ್ ಜಾರಿಗೊಳಿಸದೆ, ವಾಟ್ಸ್‌ಆ್ಯಪ್ ಮತ್ತು ಇಮೇಲ್ ಮೂಲಕ ನೋಟಿಸ್‌ಗಳನ್ನು ಕಳುಹಿಸಲಾಗಿದೆ. ಇದು BNSS ಸೆಕ್ಷನ್ 35(3) ಅಡಿಯ ಕಾನೂನಿನ ಉಲ್ಲಂಘನೆಯಾಗಿದೆ. ರಾಜಕೀಯ, ಧಾರ್ಮಿಕ ಮತ್ತು ಸಂಘಟನಾತ್ಮಕ ವೈರತ್ವದಿಂದಾಗಿ ಈ ನೋಟಿಸ್‌ಗಳನ್ನು ಜಾರಿಗೊಳಿಸಲಾಗಿದೆ. ವಿಚಾರಣೆಯ ಹೆಸರಿನಲ್ಲಿ ಬೆಳಗ್ಗೆಯಿಂದ ಮಧ್ಯರಾತ್ರಿವರೆಗೆ ಅರ್ಜಿದಾರರನ್ನು ಕೂರಿಸಿಕೊಂಡು ಕಿರುಕುಳ ನೀಡಲಾಗುತ್ತಿದೆ. ಈಗಾಗಲೇ 150 ಗಂಟೆಗೂ ಅಧಿಕ ಕಾಲ ವಿಚಾರಣೆ ನಡೆಸಲಾಗಿದೆ,” ಎಂದು ಅವರು ನ್ಯಾಯಾಲಯಕ್ಕೆ ತಿಳಿಸಿದರು. ಮೊದಲಿಗೆ ಸೆಕ್ಷನ್ 211(a) ಅಡಿಯಲ್ಲಿ ಎಫ್‌ಐಆರ್ ದಾಖಲಿಸಿದ್ದು, ನಂತರ ಬೇರೆ ಸೆಕ್ಷನ್‌ಗಳನ್ನು ಸೇರಿಸಲಾಗಿದೆ ಎಂದು ವಕೀಲ ಬಾಲನ್ ವಾದಿಸಿದರು.
ಎದುರಾಳಿಗಳ ಪರವಾಗಿ ವಾದ ಮಂಡಿಸಿದ ವಿಶೇಷ ಸರ್ಕಾರಿ ಅಭಿಯೋಜಕ (ಎಸ್‌ಪಿಪಿ) ಬಿ.ಎನ್. ಜಗದೀಶ್, “ಅರ್ಜಿದಾರರ ಪ್ರಚೋದನೆಯಿಂದಲೇ ಚಿನ್ನಯ್ಯ ಎಂಬಾತ ದೂರು ದಾಖಲಿಸಿದ್ದಾನೆ. ನಂತರ, ಸೆಕ್ಷನ್ 164ರ ಅಡಿಯಲ್ಲಿ ಹೇಳಿಕೆ ನೀಡಿ ಅರ್ಜಿದಾರರ ವಿರುದ್ಧ ಆರೋಪ ಮಾಡಿದ್ದಾನೆ. ಧರ್ಮಸ್ಥಳ ಗ್ರಾಮದ 20 ಕಡೆಗಳಲ್ಲಿ ಅಗೆತವನ್ನು ನಡೆಸಿ ಪರಿಶೀಲನೆ ಮಾಡಲಾಗಿದೆ. ಈಗ ಈ ನಾಲ್ವರನ್ನು ಆರೋಪಿಗಳೆಂದು ಗುರುತಿಸಿ ನೋಟಿಸ್ ಜಾರಿಗೊಳಿಸಲಾಗಿದೆ,” ಎಂದು ನ್ಯಾಯಾಲಯಕ್ಕೆ ವಿವರಿಸಿದರು.
ಈ ಸಂದರ್ಭದಲ್ಲಿ ನ್ಯಾಯಾಲಯವು, “ಇಷ್ಟೊಂದು ಬಾರಿ ನೋಟಿಸ್ ಜಾರಿಗೊಳಿಸಿದ್ದೇಕೆ?” ಎಂದು ಪ್ರಶ್ನಿಸಿತು. “ಪ್ರತ್ಯೇಕ ಎಫ್‌ಐಆರ್ ದಾಖಲಿಸಬಹುದಿತ್ತಲ್ಲವೇ?” ಎಂದು ಅಭಿಪ್ರಾಯ ವ್ಯಕ್ತಪಡಿಸಿತು. ಇದಕ್ಕೆ ಉತ್ತರಿಸಿದ ಎಸ್‌ಪಿಪಿ ಜಗದೀಶ್, “ದಾಖಲಾಗಿರುವ ಎಫ್‌ಐಆರ್‌ನಡಿಯೇ ತನಿಖೆಯನ್ನು ಮುಂದುವರಿಸಬಹುದು ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ. ಸೆಕ್ಷನ್ 35(3) ಅಡಿಯಲ್ಲಿ ಈಗಾಗಲೇ ನೋಟಿಸ್ ಜಾರಿಗೊಳಿಸಲಾಗಿದೆ. ಆದರೆ, ಅರ್ಜಿದಾರರು ವಿಚಾರಣೆಗೆ ಹಾಜರಾಗಿಲ್ಲ. ಈಗ ಹೊಸದಾಗಿ ಮತ್ತೊಮ್ಮೆ ನೋಟಿಸ್ ಜಾರಿಗೊಳಿಸಲಾಗಿದೆ,” ಎಂದು ತಿಳಿಸಿದರು. ನ್ಯಾಯಾಲಯವು ಎರಡೂ ಕಡೆಯ ವಾದಗಳನ್ನು ಆಲಿಸಿ, ತನಿಖೆಗೆ ತಡೆಯಾಜ್ಞೆ ನೀಡಿತು.





