ಬೆಂಗಳೂರು: ಕಳೆದ ಕೆಲವು ದಿನಗಳಿಂದ ತೀವ್ರ ಬಿಸಿಲಿನ ಬೇಗೆಗೆ ಬಳಲುತ್ತಿದ್ದ ರಾಜ್ಯದ ಹಲವು ಜಿಲ್ಲೆಗಳಿಗೆ ಮಳೆರಾಯ ತಂಪೆರೆದಿದ್ದಾನೆ. ಭಾನುವಾರ ಸಂಜೆ ಹಾಗೂ ರಾತ್ರಿ ರಾಜ್ಯದ ಅನೇಕ ಭಾಗಗಳಲ್ಲಿ ಗುಡುಗು, ಸಿಡಿಲು, ಬಿರುಗಾಳಿ ಸಹಿತ ಭಾರೀ ಮಳೆಯಾಗಿದ್ದು, ಕೆಲವೆಡೆ ಆಲಿಕಲ್ಲು ಮಳೆಯೂ ಸುರಿದಿದೆ.
ಬೆಂಗಳೂರು ನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲೂ ಏಕಾಏಕಿ ಮಳೆ ಸುರಿದಿದೆ. ನೆಲಮಂಗಲ ಸೇರಿದಂತೆ ಪೀಣ್ಯ, ದಾಸರಹಳ್ಳಿ, ಬಾಗಲಗುಂಟೆ ಹಾಗೂ ಹೆಸರಘಟ್ಟ ಭಾಗಗಳಲ್ಲಿ ಜೋರಾಗಿ ಮಳೆಯಾಗಿದೆ. ಭಾರೀ ಮಳೆಯ ಕಾರಣದಿಂದ ಹೆದ್ದಾರಿಗಳಲ್ಲಿ ವಾಹನ ಸಂಚಾರ ನಿಧಾನಗೊಂಡಿದ್ದು, ಚಾಲಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಗುಡುಗು, ಮಿಂಚು ಹಾಗೂ ಬಿರುಗಾಳಿ ನಡುವೆ ಮಳೆ ಸುರಿದ ಪರಿಣಾಮ ಕೆಲವೆಡೆ ರಸ್ತೆಗಳಲ್ಲಿ ನೀರು ನಿಂತಿರುವ ದೃಶ್ಯ ಕಂಡುಬಂದಿದೆ. ಇದೇ ವೇಳೆ ಕೊಡಗು ಜಿಲ್ಲೆಯಲ್ಲಿ ಹಲವೆಡೆ ಧಾರಾಕಾರ ಮಳೆ ಸುರಿದಿದೆ. ಗುಡುಗು ಸಹಿತ ಸುರಿದ ಮಳೆಯಾಗಿದ್ದು, ದಿಢೀರ್ ಮಳೆಯಿಂದ ವಾಹನ ಸವಾರರು ಪರದಾಡುವಂತಾಯಿತು.
ಹಾಸನ ಜಿಲ್ಲೆಯಲ್ಲಿ ಕೂಡ ಹಲವೆಡೆ ಆಲಿಕಲ್ಲು ಮಳೆಯಾಗಿದೆ. ಬಿರುಗಾಳಿ, ಗುಡುಗು, ಮಿಂಚು ಸಹಿತ ಸುರಿದ ಮಳೆಯಿಂದ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.. ಭಾರೀ ಮಳೆಯಿಂದ ವಾಹನ ಸವಾರರು ಕೂಡ ರಸ್ತೆಗಳ ಮೇಲೆ ಸಿಲುಕಿಕೊಂಡರು. ಬಿಸಿಲಿನಿಂದ ಕಂಗಾಲಾಗಿದ್ದ ಭೂಮಿಗೆ ಮಳೆ ತಂಪು ತಂದಿದ್ದು, ಮೊದಲ ಮಳೆಯಲ್ಲೇ ಕೆಲವು ಕಡೆ ಅವಾಂತರಗಳು ಉಂಟಾಗಿವೆ.
ಕೋಟೆನಾಡು ಚಿತ್ರದುರ್ಗ ಜಿಲ್ಲೆಯಲ್ಲಿ ಕೂಡ ಗುಡುಗು ಸಹಿತ ಧಾರಾಕಾರ ಮಳೆಯಾಗಿದೆ. ಜಿಲ್ಲೆಯ ಹೊಸದುರ್ಗ ಪಟ್ಟಣದಲ್ಲಿ ಸುರಿದ ಮಳೆಯಿಂದ ಬಿಸಿಲಿನ ತಾಪಮಾನ ಕಡಿಮೆಯಾಗಿ ವಾತಾವರಣ ತಂಪಾಗಿದೆ. ಇದೇ ರೀತಿ ದಾವಣಗೆರೆ ಜಿಲ್ಲೆಯಲ್ಲೂ ಆಲಿಕಲ್ಲು ಮಳೆ ಸುರಿದಿದ್ದು, ಹರಿಹರ ಸೇರಿದಂತೆ ಹಲವು ಪ್ರದೇಶಗಳಲ್ಲಿ ಮಳೆ ಆರ್ಭಟಿಸಿದೆ.
ದಾವಣಗೆರೆಯಲ್ಲಿ ಸತತ ಒಂದು ಗಂಟೆ ಸುರಿದ ಭಾರೀ ಮಳೆಯಿಂದ ನಗರದಲ್ಲಿ ಹಲವು ಕಡೆ ರಸ್ತೆಗಳಲ್ಲಿ ನೀರು ತುಂಬಿಕೊಂಡಿದೆ. ಎಪಿಎಂಸಿ ರೈಲ್ವೇ ಬ್ರಿಡ್ಜ್ ಅಂಡರ್ ಪಾಸ್ ಬಳಿ ಸುಮಾರು ಮೂರರಿಂದ ನಾಲ್ಕು ಅಡಿ ನೀರು ನಿಂತಿದ್ದು, ಬೈಕ್ ಸವಾರರು ನೀರಿನ ಮಧ್ಯೆ ಸಿಲುಕಿಕೊಂಡಿದ್ದರು.
ಇನ್ನೊಂದೆಡೆ ಕೊಪ್ಪಳ ಜಿಲ್ಲೆಯಲ್ಲಿ ಮಳೆಯಿಂದ ದುರ್ಘಟನೆ ಸಂಭವಿಸಿದೆ. ಸಿಡಿಲು ಬಡಿದ ಪರಿಣಾಮ 15 ವರ್ಷದ ಬಾಲಕ ಮಂಜುನಾಥ್ ಮೃತಪಟ್ಟಿದ್ದಾನೆ. ಜಮೀನಿನಲ್ಲಿ ಕೆಲಸ ಮಾಡುತ್ತಿದ್ದಾಗ ಸಿಡಿಲು ಬಡಿದಿದ್ದು, ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನಲ್ಲಿಈ ಘಟನೆ ನಡೆದಿದೆ. ಸ್ಥಳಕ್ಕೆ ಕಂದಾಯ ಹಾಗೂ ಪೊಲೀಸ್ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನಲ್ಲಿ ಕೂಡ ಭಾರೀ ಮಳೆಯಾಗಿದೆ. ಸುಮಾರು ಎರಡು ಗಂಟೆಗಳ ಕಾಲ ಸತತ ಮಳೆ ಸುರಿದ ಪರಿಣಾಮ ಜನಜೀವನ ಅಸ್ತವ್ಯಸ್ತಗೊಂಡಿದೆ. ಹಾವೇರಿ ಜಿಲ್ಲೆಯಲ್ಲಿಯೂ ಹಲವೆಡೆ ಆಲಿಕಲ್ಲು ಮಳೆಯಾಗಿದೆ. ರಾಣೇಬೆನ್ನೂರು ತಾಲೂಕಿನಲ್ಲಿ ಅರ್ಧ ಗಂಟೆ ಕಾಲ ಬಿರುಗಾಳಿ ಸಹಿತ ಆಲಿಕಲ್ಲು ಮಳೆ ಸುರಿದಿದೆ..





