ರಾಜ್ಯದಲ್ಲಿ ಮಳೆ-ಬರದ ವೈಪರೀತ್ಯ: 5 ಜಿಲ್ಲೆಗಳಿಗೆ ಆರೆಂಜ್ ಅಲರ್ಟ್,

Untitled design 2026 07 17T172418.329

ಬೆಂಗಳೂರು,(ಜುಲೈ.17) : ಕರ್ನಾಟಕದಲ್ಲಿ ಒಂದೆಡೆ ಮಳೆಯ ಅಬ್ಬರ ಮುಂದುವರಿದಿದ್ದರೆ, ಮತ್ತೊಂದೆಡೆ ಉತ್ತರ ಕರ್ನಾಟಕದ ಹಲವು ಜಿಲ್ಲೆಗಳು ಇನ್ನೂ ಬರದ ಸಂಕಷ್ಟದಿಂದ ಬಳಲುತ್ತಿದೆ. ಮಳೆಗಾಗಿ ರೈತರು ಆಕಾಶದತ್ತ ಮುಖಮಾಡಿ ಕಾಯುತ್ತಿರುವ ಸಂದರ್ಭದಲ್ಲೇ ಭಾರತೀಯ ಹವಾಮಾನ ಇಲಾಖೆ ರಾಜ್ಯದ ಜನರಿಗೆ ಸಿಹಿ ಸುದ್ಧಿನೀಡಿದೆ. ಮುಂದಿನ ಎರಡು ದಿನಗಳ ಕಾಲ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ಇಲಾಖೆ ಮುನ್ಸೂಚನೆ ನೀಡಿದೆ.

ಹವಾಮಾನ ಇಲಾಖೆಯ ಪ್ರಕಾರ ಉತ್ತರ ಕನ್ನಡ, ಶಿವಮೊಗ್ಗ, ಉಡುಪಿ, ದಕ್ಷಿಣ ಕನ್ನಡ ಹಾಗೂ ಚಿಕ್ಕಮಗಳೂರು ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದ್ದು, ಈ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಉಳಿದ 26 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ನೀಡಲಾಗಿದ್ದು, ಸಾಧಾರಣವಾಗಿ ಮಳೆಯಾಗುವ ನಿರೀಕ್ಷೆಯಿದೆ.

ಕರಾವಳಿ ಭಾಗದಲ್ಲಿ ಜುಲೈ ಮೊದಲ ವಾರದಲ್ಲಿ ಅಬ್ಬರಿಸಿದ್ದ ಮಳೆ ಕೆಲ ದಿನಗಳ ವಿರಾಮದ ಬಳಿಕ ಮತ್ತೆ ಚುರುಕುಗೊಂಡಿದೆ. ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನಲ್ಲಿ ಭಾರೀ ಮಳೆಯಾಗುತ್ತಿದ್ದು, ಗಂಭೀರ ಪರಿಸ್ಥಿತಿ ಎದುರಾಗಿದ್ದು, ಮಳೆಯ ಹಿನ್ನೆಲೆಯಲ್ಲಿ ಅಂಕೋಲಾ ತಾಲೂಕಿನ ಶಾಲೆಗಳು ಮತ್ತು ಅಂಗನವಾಡಿಗಳಿಗೆ ರಜೆ ಘೋಷಿಸಲಾಗಿದೆ.

ಇದೇ ವೇಳೆ ಕುಮಟಾ ತಾಲೂಕಿನ ತದಡಿ ರಸ್ತೆಯಲ್ಲಿ ಗುಡ್ಡ ಕುಸಿತ ಸಂಭವಿಸಿದ್ದು, ಗೋಕರ್ಣ-ತದಡಿ ಸಂಪರ್ಕ ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ. ರಸ್ತೆ ಸಂಚಾರಕ್ಕೆ ಅಡಚಣೆ ಉಂಟಾಗಿದ್ದು, ಕಂದಾಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮಣ್ಣು ತೆರವು ಕಾರ್ಯಾಚರಣೆ ಪ್ರಗತಿಯಲ್ಲಿದೆ.

ಮಳೆಯ ಆರ್ಭಟದಿಂದ ಕುಮಟಾ-ಸಿದ್ದಾಪುರ ರಾಜ್ಯ ಹೆದ್ದಾರಿಯ ವಾಲ್ಗಳ್ಳಿ ಭಾಗ ಜಲಾವೃತಗೊಂಡಿದ್ದು, ರಸ್ತೆ ಮೇಲೆ ಮೊಣಕಾಲು ಮಟ್ಟದ ನೀರು ನಿಂತ ಪರಿಣಾಮ ವಾಹನ ಸವಾರರು ಪರದಾಡುವಂತಾಗಿದೆ. ಕೆಲವು ವಾಹನಗಳು ರಸ್ತೆಯ ಮಧ್ಯೆ ಸಿಲುಕಿ ಸಂಚಾರ ಅಸ್ತವ್ಯಸ್ತಗೊಂಡಿದೆ.

ಶಿವಮೊಗ್ಗ ಜಿಲ್ಲೆಯ ಸಾಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲೂ ವಾರದ ಬಳಿಕ ಮತ್ತೆ ಮಳೆಯಾಗಿದೆ. ಕುಗ್ವೆ, ತಾಳಗುಪ್ಪ, ಉಳ್ಳೂರು, ಕಾಸ್ಪಾಡಿ, ಕರ್ಕಿಕೊಪ್ಪ, ತುಂಬೆ ಮತ್ತು ವರದಹಳ್ಳಿ ಭಾಗಗಳಲ್ಲಿ ಉತ್ತಮ ಮಳೆಯಾಗಿದ್ದು, ರೈತರು ನಿರಾಳರಾಗಿದ್ದಾರೆ. ಕೃಷಿ ಚಟುವಟಿಕೆಗಳಿಗೆ ಈ ಮಳೆ ಅನುಕೂಲವಾಗಲಿದೆ ಎಂದು ಹೇಳಲಾಗುತ್ತಿದೆ.

ಆದರೆ ಉತ್ತರ ಕರ್ನಾಟಕ,  ರಾಯಚೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಮಳೆ ಕೊರತೆ ಮುಂದುವರಿದಿದ್ದು, ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೆರೆ, ಕಟ್ಟೆಗಳು ಮತ್ತು ಕಾಲುವೆಗಳು ನೀರಿಲ್ಲದೆ ಬರಿದಾಗುತ್ತಿದ್ದು, ಬೆಳೆಗಳು ಒಣಗುವ ಭೀತಿ ಎದುರಾಗಿದೆ. ಜಿಲ್ಲೆಯಲ್ಲಿ 5 ಲಕ್ಷ ಹೆಕ್ಟೇರ್ ಬಿತ್ತನೆ ಗುರಿ ಇದ್ದರೂ, ಕೇವಲ 2 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಬಿತ್ತನೆ ಸಾಧ್ಯವಾಗಿದೆ. ಸಾಲ ಮಾಡಿ ಕೃಷಿ ಆರಂಭಿಸಿದ ರೈತರು ಮಳೆಯ ನಿರೀಕ್ಷೆಯಲ್ಲಿದ್ದಾರೆ.

Exit mobile version