ಚೆನ್ನಮ್ಮ ದೇವೇಗೌಡ ಆರೋಗ್ಯ ಸ್ಥಿತಿ ಗಂಭೀರ: ಆಸ್ಪತ್ರೆಗೆ ಧಾವಿಸಿದ ಕುಮಾರಸ್ವಾಮಿ, ರೇವಣ್ಣ

ಕೃಷ್ಣ (11)

ಬೆಂಗಳೂರು, ಜುಲೈ 17: ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಅವರ ಪತ್ನಿ ಚೆನ್ನಮ್ಮ ದೇವೇಗೌಡ ಅವರ ಆರೋಗ್ಯದಲ್ಲಿ ಏರುಪೇರಾಗಿದ್ದು, ಬೆಂಗಳೂರಿನ ಹೆಚ್‌ಎಎಲ್ ರಸ್ತೆಯಲ್ಲಿರುವ ಮಣಿಪಾಲ್ ಆಸ್ಪತ್ರೆಯ ತೀವ್ರ ನಿಗಾ ಘಟಕ (ICU)ದಲ್ಲಿ ಚಿಕಿತ್ಸೆ ಮುಂದುವರಿದಿದೆ. ಆರೋಗ್ಯ ಸ್ಥಿತಿ ಗಂಭೀರವಾಗಿರುವ ಹಿನ್ನೆಲೆಯಲ್ಲಿ ದೇವೇಗೌಡ ಕುಟುಂಬದ ಸದಸ್ಯರು ಆಸ್ಪತ್ರೆಗೆ ಆಗಮಿಸುತ್ತಿದ್ದಾರೆ.

ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಪಲಮನೇರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವೇಳೆ ತಾಯಿಯ ಆರೋಗ್ಯ ಹದಗೆಟ್ಟಿರುವ ಮಾಹಿತಿ ತಿಳಿದ ತಕ್ಷಣ ಕಾರ್ಯಕ್ರಮ ಮುಗಿಸಿ ನೇರವಾಗಿ ಬೆಂಗಳೂರಿಗೆ ಆಗಮಿಸಿ ಮಣಿಪಾಲ್ ಆಸ್ಪತ್ರೆಗೆ ತೆರಳಿದರು.

ಇನ್ನೊಂದೆಡೆ, ಹೆಚ್.ಡಿ. ರೇವಣ್ಣ ಅವರು ವಿಧಾನಸೌಧದಿಂದ ನೇರವಾಗಿ ಆಸ್ಪತ್ರೆಗೆ ತೆರಳಿ ವೈದ್ಯರಿಂದ ತಾಯಿಯ ಆರೋಗ್ಯದ ಬಗ್ಗೆ ಮಾಹಿತಿ ಪಡೆದರು.

ಕುಮಾರಸ್ವಾಮಿ ಅವರ ಪತ್ನಿ ಅನಿತಾ ಕುಮಾರಸ್ವಾಮಿ ಸೇರಿದಂತೆ ದೇವೇಗೌಡ ಕುಟುಂಬದ ಇತರೆ ಸದಸ್ಯರು ಸಹ ಆಸ್ಪತ್ರೆಗೆ ಆಗಮಿಸಿ ಚೆನ್ನಮ್ಮ ಅವರ ಆರೋಗ್ಯ ವಿಚಾರಿಸಿದರು.

ಮೂಲಗಳ ಪ್ರಕಾರ, ಕಳೆದ ಮೂರು ದಿನಗಳಿಂದ ಚೆನ್ನಮ್ಮ ದೇವೇಗೌಡ ಅವರಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇಂದು ಶುಕ್ರವಾರ ಬೆಳಗ್ಗೆಯಿಂದ ಅವರ ಆರೋಗ್ಯದಲ್ಲಿ ಮತ್ತಷ್ಟು ಏರುಪೇರಾಗಿರುವ ಕಾರಣ ವೈದ್ಯರು ತೀವ್ರ ನಿಗಾ ವಹಿಸಿದ್ದಾರೆ.

ಆಸ್ಪತ್ರೆಯಲ್ಲಿ ತಜ್ಞ ವೈದ್ಯರ ತಂಡ ಚಿಕಿತ್ಸೆ ನೀಡುತ್ತಿದ್ದು, ಅವರ ಆರೋಗ್ಯ ಸ್ಥಿತಿಯನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡಲಾಗುತ್ತಿದೆ.

ಮಾಹಿತಿಯ ಪ್ರಕಾರ, ಕಳೆದ ಎರಡು ದಿನಗಳಿಂದ ಚೆನ್ನಮ್ಮ ದೇವೇಗೌಡ ಅವರು ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದರು. ಈ ಕಾರಣದಿಂದ ಮನೆಯಲ್ಲೇ ವಿಶ್ರಾಂತಿ ಪಡೆಯುತ್ತಿದ್ದರು. ಆದರೆ ರಾತ್ರಿ ವೇಳೆ ಆರೋಗ್ಯದಲ್ಲಿ ಹಠಾತ್ ಏರುಪೇರಾದ ಹಿನ್ನೆಲೆಯಲ್ಲಿ ಕುಟುಂಬ ಸದಸ್ಯರು ತಕ್ಷಣವೇ ಆಸ್ಪತ್ರೆಗೆ ದಾಖಲಿಸಿದ್ದರು.

ಚೆನ್ನಮ್ಮ ದೇವೇಗೌಡ ಅವರ ಆರೋಗ್ಯ ಸ್ಥಿರವಾಗಿದೆ ಎಂದು ನಿನ್ನೆ ವೈದ್ಯರು ತಿಳಿಸಿದ್ದರು. ಆದರೆ ಇಂದು ಮತ್ತೊಮ್ಮೆ ಅವರ ಆರೋಗ್ಯ ತೀವ್ರವಾಗಿ ಹದಗೆಟ್ಟಿದೆ ಎಂದು ತಿಳಿದುಬಂದಿದೆ.

Exit mobile version