ಬೆಂಗಳೂರು: ಕರ್ನಾಟಕದಲ್ಲಿ ಅಧಿಕ ರಕ್ತದೊತ್ತಡ (ಹೈಪರ್‌ಟೆನ್ಷನ್) ಒಂದು ಗಂಭೀರ ಸಾರ್ವಜನಿಕ ಆರೋಗ್ಯ ಸಮಸ್ಯೆಯಾಗಿ ರೂಪುಗೊಂಡಿದೆ ಎಂದು ರಾಜ್ಯದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ. ದಿನೇಶ್ ಗುಂಡುರಾವ್ ಎಚ್ಚರಿಕೆ ನೀಡಿದ್ದಾರೆ.
ಕರ್ನಾಟಕದಲ್ಲಿ ಅಧಿಕ ರಕ್ತದೊತ್ತಡದಿಂದ ಜನ ಸಾಮಾನ್ಯರು ಎದುರಿಸುತ್ತಿರುವ ಆರೋಗ್ಯ ಸಮಸ್ಯೆ ( Hypertension Burden in Karnataka) ಕುರಿತು ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಋಷಿಕೇಶ್ ಬೆಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ಸೆ. 3 ರಂದು ಕಾರ್ಯಗಾರ ಆಯೋಜಿಸಿತ್ತು. ಕರ್ನಾಟಕ ರಾಜ್ಯ ಆರೋಗ್ಯ ಸಚಿವರಾದ ಶ್ರೀ ದಿನೇಶ್ ಅರ್. ಗುಂಡುರಾವ್ ಅವರು ಈ ಕಾರ್ಯಗಾರವನ್ನು ಉದ್ಘಾಟಿಸಿದರು.
ಈ ಕಾರ್ಯಗಾರ ಉದ್ಘಾಟಿಸಿ ಮಾತನಾಡಿದ ಆರೋಗ್ಯ ಸಚಿವರಾದ ಶ್ರೀ ದಿನೇಶ್ ಅರ್. ಗುಂಡುರಾವ್ ಅವರು, ರಾಷ್ಟ್ರೀಯ ಕುಟುಂಬ ಕಲ್ಯಾಣ ಸಮೀಕ್ಷೆ -5 ರ ಪ್ರಕಾರ ಕರ್ನಾಟಕ ರಾಜ್ಯದಲ್ಲಿ ಅಧಿಕ ರಕ್ತದೊತ್ತಡ ಒಂದು ಅತಿ ಗಂಭೀರವಾದ ಆರೋಗ್ಯ ಸಮಸ್ಯೆಯಾಗಿದೆ. ಅಧಿಕ ರಕ್ತದೊತ್ತಡದಿಂದ, ಹೃದಯಾಘಾತ, ಸ್ಟ್ರೋಕ್, ಕಿಡ್ನಿ ವೈಫಲ್ಯದಂತಹ ಜೀವಹಾನಿ ಕಾಯಿಲೆಗಳಿಗೆ ಸದ್ದಿಲ್ಲದೇ ತುತ್ತಾಗಿ ಜೀವ ಕಳೆದುಕೊಳ್ಳುತ್ತಿದ್ದಾರೆ ಎಂದರು.
ಕರ್ನಾಟಕ ರಾಜ್ಯದಲ್ಲಿ ಒಟ್ಟಾರೆ ಮಹಿಳೆಯರಲ್ಲಿ ಹದಿನೈದು ವರ್ಷ ಹಾಗೂ ಮೇಲ್ಪಟ್ಟವರ ಪೈಕಿ ಶೇ. 16. 3 ರಷ್ಟು ಮಂದಿ ಅಲ್ಪ ಪ್ರಮಾಣದ ಅಧಿಕ ರಕ್ತದೊತ್ತಡ ( Mild) ಕ್ಕೆ ( BP Range 140-159/90/-99 mmHg) ಒಳಗಾಗಿದ್ದಾರೆ. ಶೇ. 6.1 ರಷ್ಟು ಮಂದಿ ಮಹಿಳೆಯರು ಮಧ್ಯಮ ( Moderately) ಪ್ರಮಾಣ ( BP Range 160/100 mmHg ) ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದಾರೆ. ಒಟ್ಟಾರೆಯಾಗಿ ಶೇ. 25 ರಷ್ಟು ಮಹಿಳೆಯರು ಅಂದರೆ ನಾಲ್ಕು ಮಂದಿ ಮಹಿಳೆಯರಲ್ಲಿ ಒಬ್ಬರು ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅರೋಗ್ಯ ಸಚಿವರು ತಿಳಿಸಿದ್ದಾರೆ.
ಕರ್ನಾಟಕ ರಾಜ್ಯದ ಒಟ್ಟಾರೆ ಪುರುಷರ ಪೈಕಿ, ಹದಿನೈದು ವರ್ಷ ಮತ್ತು ಮೇಲ್ಪಟ್ಟವರ ಪೈಕಿ ಶೇ. 18.5 ರಷ್ಟು ಮಂದಿ ಸಣ್ಣ ಪ್ರಮಾಣದ ( Mild) ರಕ್ತದೊತ್ತಡ ( BP Range 140-159/90/-99 mmHg)ದಿಂದ ಬಳಲುತ್ತಿದ್ದಾರೆ. ಶೇ. 6.8 ರಷ್ಟು ಮಂದಿ ಮಧ್ಯಮ ( Moderately) ಪ್ರಮಾಣದ ಅಧಿಕ ರಕ್ತದೊತ್ತಡಕ್ಕೆ( BP Range 160/100 mmHg ) ಒಳಗಾಗಿದ್ದು, ಒಟ್ಟಾರೆಯಾಗಿ ಪುರುಷರ ಪೈಕಿ ಶೇ. 26.9 ರಷ್ಟು ಮಂದಿ ಅಧಿಕ ರಕ್ತದೊತ್ತಡಕ್ಕೆ ಒಳಗಾಗಿದ್ದಾರೆ ಎಂಬುದನ್ನು ರಾಷ್ಟ್ರೀಯ ಕುಟುಂಬ ಕಲ್ಯಾಣ ಸಮೀಕ್ಷೆ – 5 ದೃಢಪಡಿಸಿದೆ. ಒಟ್ಟರೆಯಾಗಿ ಕರ್ನಾಟಕ ರಾಜ್ಯದಲ್ಲಿ ನಾಲ್ವರಲ್ಲಿ ಒಬ್ಬರು ಅಧಿಕ ರಕ್ತದೊತ್ತಡಕ್ಕೆ ಒಳಗಾಗಿದ್ದಾರೆ.
ಅಧಿಕ ರಕ್ತದೊತ್ತಡವನ್ನು ಸೈಲೆಂಟ್ ಕಿಲ್ಲರ್ ಎಂದೇ ಕರೆಯುತ್ತೇವೆ. ರಕ್ತದೊತ್ತಡದ ಬಗ್ಗೆ ಕಾಲ ಕಾಲಕ್ಕೆ ತಪಾಸಣೆಗೆ ಒಳಗಾಗದೇ ಹೋದರೆ, ಸ್ಟ್ರೋಕ್, ಹೃದಯಘಾತ, ಕಿಡ್ನಿ ವೈಫಲ್ಯದಂತಹ ಜೀವಹಾನಿ ಕಾಯಿಲೆಗಳಿಗೆ ತುತ್ತಾಗಿ ಅಲ್ಪಾಯುಷ್ಯಕ್ಕೆ ಸಾವನ್ನಪ್ಪುತ್ತಿದ್ದಾರೆ. NFHS-5 ಪ್ರಕಾರ, ರಾಜ್ಯದ ಪ್ರತಿ ನಾಲ್ಕು ಮಂದಿಯಲ್ಲಿ ಒಬ್ಬರು ಹೈಪರ್ ಟೆನ್ಷನ್ ಗೆ ಒಳಗಾಗಿದ್ದಾರೆ. ಇದರ ಅರ್ಥ, ರಾಜ್ಯದ ಲಕ್ಷಾಂತರ ಮಂದಿ ತುರ್ತು ವೈದ್ಯಕೀಯ ಚಿಕಿತ್ಸೆಗೆ ಒಳಗಾಗುವಂತಹ ಕಾಯಿಲೆಗಳ ಭಯದಲ್ಲಿ ಬದುಕುವಂತಾಗಿದೆ. ಇದರಲ್ಲದೇ ಇದರ ಅರ್ಥಿಕ ಹೊರೆಯೂ ಊಹಿಸಲಿಕ್ಕೆ ಅಸಾಧ್ಯ. ಆಸ್ಪತ್ರೆಗಳಿಗೆ ದಾಖಲು, ಕುಟುಂಬಗಳ ಅದಾಯ ಮೂಲಕ್ಕೆ ಪೆಟ್ಟು ಬೀಳುತ್ತದೆ, ಅರ್ಥಿಕ ಸಂಕಷ್ಟಕ್ಕೆ ಕುಟುಂಬಗಳು ಒಳಗಾಗಲಿವೆ. ಹೀಗಾಗಿ ಅರಂಭದಲ್ಲಿಯೇ ಅಧಿಕ ರಕ್ತದೊತ್ತಡ ಪರೀಕ್ಷೆಗೆ ಒಳಪಟ್ಟು ಅದನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬೇಕಾಗಿದೆ. ಜೀವನ ಶೈಲಿ ಬದಲಾವಣೆಯೊಂದಿಗೆ ಸೂಕ್ತ ಚಿಕಿತ್ಸೆ ಪಡೆಯಬೇಕಿದೆ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಮತ್ತು ಅರೋಗ್ಯ ಇಲಾಖೆ ಪ್ರಾಥಮಿಕ ಚಿಕಿತ್ಸೆ ಕೇಂದ್ರಗಳಲ್ಲಿ ಅಧಿಕ ರಕ್ತದೊತ್ತಡ ತಪಾಸಣೆ ಮಾಡುವ ಹಾಗೂ ಚಿಕಿತ್ಸೆ ನೀಡುವ ಸೌಲಭ್ಯವನ್ನು ಮತ್ತಷ್ಟು ವಿಸ್ತರಣೆ ಮಾಡುತ್ತಿದೆ. ಅಲ್ಲದೇ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನು ನಡೆಸುತ್ತಿದ್ದು, ಇದರ ನಿಯಂತ್ರಣಕ್ಕೆ ಅರೊಗ್ಯ ಇಲಾಖೆ ಬದ್ಧವಾಗಿದೆ.
ಸರ್ಕಾರದ ಮುಂದಿನ ಕ್ರಮ
1. NPCDS ಅಡಿಯಲ್ಲಿ ಸಮುದಾಯ ಹಂತದಲ್ಲಿ ಅಧಿಕ ರಕ್ತದೊತ್ತಡ ತಪಾಸಣೆ ಮಾಡವುದು.
2. ಜನರಲ್ಲಿ ವ್ಯಾಯಾಮ, ಮಿತ ಆಹಾರ ಸೇವನೆ, ಚಟುವಟಿಕೆ ಆಧಾರಿತ ಜೀವನ ಶೈಲಿ ರೂಪಿಸಿಕೊಳ್ಳವ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು.
3. ಸರ್ಕಾರದ ಪ್ರಾಥಮಿಕ ಅರೋಗ್ಯ ಕೇಂದ್ರ ಮತ್ತು ಆಸ್ಪತ್ರೆಗಳಲ್ಲಿ ಅಧಿಕ ರಕ್ತದೊತ್ತಡ ನಿಯಂತ್ರಣಕ್ಕೆ ಔಷಧ ಲಭ್ಯ ಮತ್ತು ಚಿಕಿತ್ಸಾ ವ್ಯವಸ್ಥೆ ಕಲ್ಪಿಸುವುದು.
ಮಾಧ್ಯಮ ಸಹಕಾರದಿಂದ ಜಾಗೃತಿ ಅಭಿಯಾನ, ಅರೋಗ್ಯ ವಿಶ್ವ ವಿದ್ಯಾಲಯಗಳು, ನಾಗರಿಕ ಸಮುದಾಯದ ಜತೆ ಸಹಭಾಗಿತ್ವ ವಹಿಸಿ ಅಧಿಕ ರಕ್ತದೊತ್ತಡ ನಿಯಂತ್ರಣಕ್ಕೆ ಕ್ರಮ ವಹಿಸುವುದು. ಹೈಪರ್ ಟೆನ್ಷನ್ ಸೇರಿದಂತೆ ಆರೋಗ್ಯದ ಬಗ್ಗೆ ಮಕ್ಕಳಲ್ಲಿ ಅರಿವು ಮೂಡಿಸಲು ಪಠ್ಯಕ್ರಮ ಅಳವಡಿಸಲು ಶಿಕ್ಷಣ ಇಲಾಖೆ ಜತೆ ಚರ್ಚಿಸಲಾಗುವುದು ದಿನೇಶ ಗುಂಡುರಾವ್ ಕಾರ್ಯಕ್ರಮದಲ್ಲಿ ಡಾ. ಯು.ಎಸ್ ವಿಶಾಲ್ ರಾವ್, ಡಾ.ಪ್ರದೀಪ್ ಅಗರ್ ವಾಲ್ , ಡಾ. ಓಂ ಪ್ರಕಾಶ ಬೆರ, ಡಾ. ರಿಯಾಜ್ ಪಾಷಾ, ಹಾಜರಿದ್ದರು