ಬೆಂಗಳೂರು, ಜನವರಿ 08: ವರದಕ್ಷಿಣೆ ಕಿರುಕುಳ ಪ್ರಕರಣಗಳ ದುರುಪಯೋಗದ ಕುರಿತಾಗಿ ಕರ್ನಾಟಕ ಹೈಕೋರ್ಟ್ ಮಹತ್ವದ ಸಂದೇಶ ನೀಡಿದೆ. ಭಾರತೀಯ ದಂಡ ಸಂಹಿತೆಯ (IPC) ಸೆಕ್ಷನ್ 498ಎ ಅಡಿಯಲ್ಲಿ ಪತಿ ಅಥವಾ ಆತನ ಕುಟುಂಬ ಸದಸ್ಯರ ವಿರುದ್ಧ ಮಾತ್ರ ದೂರು ದಾಖಲಿಸಬಹುದೇ ಹೊರತು, ಪಕ್ಕದ ಮನೆಯವರು ಅಥವಾ ನೆರೆಹೊರೆಯವರ ಮೇಲೆ ಪ್ರಕರಣ ದಾಖಲಿಸಲು ಅವಕಾಶವಿಲ್ಲ ಎಂದು ಹೈಕೋರ್ಟ್ ತೀರ್ಪು ನೀಡಿದೆ.
ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಪೀಠ, ತಮ್ಮ ವಿರುದ್ಧ ದಾಖಲಾಗಿದ್ದ ಕ್ರಿಮಿನಲ್ ಪ್ರಕರಣವನ್ನು ರದ್ದುಪಡಿಸುವಂತೆ ಮಹಿಳೆಯೊಬ್ಬರು ಸಲ್ಲಿಸಿದ್ದ ಅರ್ಜಿಯನ್ನು ಮಾನ್ಯಗೊಳಿಸಿ, 498ಎ ಅಡಿಯ ದೂರನ್ನು ರದ್ದುಗೊಳಿಸಿದೆ.
ಪ್ರಕರಣದ ಹಿನ್ನೆಲೆ
ಮುನಿರತ್ನಮ್ಮ ಎಂಬ ಮಹಿಳೆ, ತನ್ನ ಪತಿ ಹಾಗೂ ಆತನ ಕುಟುಂಬ ಸದಸ್ಯರ ವಿರುದ್ಧ ವರದಕ್ಷಿಣೆ ಕಿರುಕುಳ ನೀಡಿದ ಆರೋಪ ಮಾಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೂರುದಲ್ಲಿ ಪತಿ, ಅತ್ತೆ, ಮಾವ, ನಾದಿನಿ ಮಾತ್ರವಲ್ಲದೆ ಪಕ್ಕದ ಮನೆಯ ಮಹಿಳೆ ಆಶಾ ಅವರನ್ನೂ ಆರೋಪಿಗಳ ಪಟ್ಟಿಗೆ ಸೇರಿಸಲಾಗಿತ್ತು. ಆಶಾ ಅವರು ವೈವಾಹಿಕ ಜೀವನದಲ್ಲಿ ಕಿರುಕುಳ ನೀಡಲು ಸಹಕರಿಸಿದ್ದಾರೆ ಎಂಬ ಆರೋಪ ಮಾಡಲಾಗಿತ್ತು.
ಈ ಹಿನ್ನೆಲೆಯಲ್ಲಿ ಆಶಾ ಅವರು ತಮ್ಮ ವಿರುದ್ಧ ದಾಖಲಾದ ಪ್ರಕರಣವನ್ನು ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ್ದರು. ತಾವು ಕುಟುಂಬದ ಸದಸ್ಯರಲ್ಲ, ಕೇವಲ ನೆರೆಹೊರೆಯವರು ಎಂಬ ಕಾರಣ ನೀಡಿ, ತಮ್ಮ ವಿರುದ್ಧ 498ಎ ಅಡಿಯಲ್ಲಿ ಕೇಸ್ ದಾಖಲಿಸುವುದು ಕಾನೂನುಬಾಹಿರ ಎಂದು ವಾದಿಸಿದ್ದರು.
ಹೈಕೋರ್ಟ್ ಅಭಿಪ್ರಾಯ
ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್, IPC ಸೆಕ್ಷನ್ 498ಎ ಕೇವಲ ಪತಿ ಅಥವಾ ಪತಿಯ ಸಂಬಂಧಿಕರಿಗೆ ಮಾತ್ರ ಅನ್ವಯಿಸುತ್ತದೆ ಎಂಬುದನ್ನು ಸ್ಪಷ್ಟಪಡಿಸಿದೆ. ವೈವಾಹಿಕ ವಿವಾದವು ಪತಿ–ಪತ್ನಿ ಅಥವಾ ಅವರ ಕುಟುಂಬದ ಒಳಗಿನ ವಿಷಯವಾಗಿದ್ದು, ಪರಿಚಯವಿಲ್ಲದ ವ್ಯಕ್ತಿಗಳು, ಸ್ನೇಹಿತರು ಅಥವಾ ನೆರೆಹೊರೆಯವರನ್ನು ಆರೋಪಿಗಳನ್ನಾಗಿ ಮಾಡುವಂತಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ಈ ಹಿನ್ನೆಲೆಯಲ್ಲಿ, ಆಶಾ ಅವರ ವಿರುದ್ಧ ದಾಖಲಾಗಿದ್ದ IPC ಸೆಕ್ಷನ್ 498ಎ ಅಡಿಯ ಆರೋಪಗಳನ್ನೂ ನ್ಯಾಯಾಲಯ ರದ್ದುಗೊಳಿಸಿದೆ.
ಕಾನೂನಿನ ದುರುಪಯೋಗಕ್ಕೆ ಎಚ್ಚರಿಕೆ
498ಎ ಕಾಯ್ದೆ ಮಹಿಳೆಯರನ್ನು ವರದಕ್ಷಿಣೆ ಕಿರುಕುಳದಿಂದ ರಕ್ಷಿಸಲು ರೂಪಿಸಲಾದ ಮಹತ್ವದ ಕಾನೂನು. ಆದರೆ ಇತ್ತೀಚಿನ ವರ್ಷಗಳಲ್ಲಿ ಈ ವಿಧಾನದ ದುರುಪಯೋಗದ ಆರೋಪಗಳು ಹೆಚ್ಚುತ್ತಿರುವ ಹಿನ್ನೆಲೆ, ಸುಪ್ರೀಂ ಕೋರ್ಟ್ ಹಾಗೂ ವಿವಿಧ ಹೈಕೋರ್ಟ್‌ಗಳು ಎಚ್ಚರಿಕೆ ನೀಡುತ್ತಲೇ ಬಂದಿವೆ.
ನ್ಯಾಯಾಲಯ, ಕಾನೂನಿನ ಉದ್ದೇಶ ರಕ್ಷಣೆ ಆಗಬೇಕೇ ಹೊರತು ಪ್ರತೀಕಾರವಾಗಬಾರದು ಎಂಬ ಸಂದೇಶವನ್ನು ಪರೋಕ್ಷವಾಗಿ ನೀಡಿದೆ ಎಂದು ಕಾನೂನು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಮತ್ತೊಂದು ಪ್ರಕರಣ
ಇದೇ ವೇಳೆ, ಕರ್ನಾಟಕ ಹೈಕೋರ್ಟ್‌ನಲ್ಲಿ ಕೆಲಸ ಕೊಡಿಸುವುದಾಗಿ ಹೇಳಿ ಜನರನ್ನು ನಂಬಿಸಿ ಹಣ ಪಡೆದು ವಂಚಿಸಿದ ಪ್ರಕರಣವೂ ಬೆಳಕಿಗೆ ಬಂದಿದೆ. ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ಅವರ ಸಹಿ ಹಾಗೂ ದಾಖಲೆಗಳನ್ನು ನಕಲಿ ಮಾಡಿ ಉದ್ಯೋಗ ನೀಡುವ ಭರವಸೆ ನೀಡಿ ವಂಚನೆ ನಡೆಸಿದ ಆರೋಪದ ಮೇಲೆ ಏಳು ಮಂದಿಯ ವಿರುದ್ಧ ಪ್ರಕರಣ ದಾಖಲಾಗಿದೆ. ಈ ಪ್ರಕರಣದ ತನಿಖೆ ಮುಂದುವರಿದಿದೆ.





