ಬೆಂಗಳೂರು, ಅಕ್ಟೋಬರ್ 30: ಕರ್ನಾಟಕ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ತೀವ್ರ ಜ್ವರದಿಂದ ಬಳಲುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಕಳೆದ ಎರಡು ದಿನಗಳಿಂದ ಅವರು ವೈರಲ್ ಜ್ವರದಿಂದಾಗಿ ಅಸ್ವಸ್ಥರಾಗಿದ್ದು, ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ. ಅಧಿಕೃತ ಮೂಲಗಳ ಪ್ರಕಾರ, ರಾಜ್ಯಪಾಲರ ಆರೋಗ್ಯದಲ್ಲಿ ಸುಧಾರಣೆ ಕಂಡುಬಂದಿದ್ದು, ಅವರು ಇಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗುವ ಸಾಧ್ಯತೆ ಇದೆ.
ರಾಜ್ಯಪಾಲರ ಅಸ್ವಸ್ಥತೆಯ ಸುದ್ದಿ ತಿಳಿದ ಕೂಡಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಣಿಪಾಲ್ ಆಸ್ಪತ್ರೆಗೆ ಭೇಟಿ ನೀಡಿ ಅವರ ಆರೋಗ್ಯ ವಿಚಾರಿಸಿದರು. ಸಿಎಂ ಅವರು ವೈದ್ಯರಿಂದ ಚಿಕಿತ್ಸೆ ಕುರಿತು ಮಾಹಿತಿ ಪಡೆದು, ರಾಜ್ಯಪಾಲರು ಬೇಗ ಗುಣಮುಖರಾಗಲೆಂದು ಹಾರೈಸಿದರು.
ಟ್ವೀಟ್ ಮೂಲಕ ತಮ್ಮ ಭೇಟಿಯ ಕುರಿತು ಮಾಹಿತಿ ನೀಡಿರುವ ಸಿಎಂ ಸಿದ್ದರಾಮಯ್ಯ, “ಇಂದು ಮಣಿಪಾಲ್ ಆಸ್ಪತ್ರೆಗೆ ಭೇಟಿ ನೀಡಿ, ಚಿಕಿತ್ಸೆ ಪಡೆಯುತ್ತಿರುವ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರ ಆರೋಗ್ಯ ವಿಚಾರಿಸಿ ಬೇಗ ಗುಣಮುಖರಾಗುವಂತೆ ಹಾರೈಸಿದೆ” ಎಂದು ಹೇಳಿದ್ದಾರೆ.
ಇಂದು ಮಣಿಪಾಲ್ ಆಸ್ಪತ್ರೆಗೆ ಭೇಟಿ ನೀಡಿ, ಚಿಕಿತ್ಸೆ ಪಡೆಯುತ್ತಿರುವ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರ ಆರೋಗ್ಯ ವಿಚಾರಿಸಿ, ಬೇಗ ಗುಣಮುಖರಾಗುವಂತೆ ಹಾರೈಸಿದೆ. pic.twitter.com/oQlSIcMqEm
— Siddaramaiah (@siddaramaiah) October 30, 2025
ಮೂಲಗಳ ಪ್ರಕಾರ, ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಇತ್ತೀಚೆಗೆ ಮಧ್ಯಪ್ರದೇಶಕ್ಕೆ ಅಧಿಕೃತ ಪ್ರವಾಸ ಕೈಗೊಂಡಿದ್ದರು. ಅವರು ಅಲ್ಲಿ ಹಲವು ಸಾರ್ವಜನಿಕ ಹಾಗೂ ಅಧಿಕೃತ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು. ಸತತ ಪ್ರಯಾಣ ಹಾಗೂ ಅಧಿಕೃತ ಸಭೆಗಳ ಕಾರಣದಿಂದ ಆಯಾಸ ಮತ್ತು ಹವಾಮಾನ ಬದಲಾವಣೆ ಹಿನ್ನೆಲೆ ಜ್ವರ ತಗುಲಿರಬಹುದು ಎಂದು ವೈದ್ಯರು ತಿಳಿಸಿದ್ದಾರೆ.
ಮೊದಲಿಗೆ ರಾಜ್ಯಪಾಲರನ್ನು ಬೆಂಗಳೂರಿನ ಏರ್‌ಪೋರ್ಟ್ ರಸ್ತೆಯಲ್ಲಿರುವ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ, ಹೆಚ್ಚಿನ ವೈದ್ಯಕೀಯ ತಪಾಸಣೆ ಮತ್ತು ನಿಗಾ ಚಿಕಿತ್ಸೆಗೆ ಅವರನ್ನು ಮಣಿಪಾಲ್ ಆಸ್ಪತ್ರೆಗೆ ವರ್ಗಾಯಿಸಲಾಯಿತು.
ಮಣಿಪಾಲ್ ಆಸ್ಪತ್ರೆಯ ವೈದ್ಯರು, “ರಾಜ್ಯಪಾಲರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ. ಅವರಿಗೆ ವೈರಲ್ ಇನ್ಫೆಕ್ಷನ್ ಕಾರಣದಿಂದ ಜ್ವರ ಬಂದಿದೆ. ಪ್ರಸ್ತುತ ವೈದ್ಯಕೀಯ ತಂಡದಿಂದ ಅಗತ್ಯ ಚಿಕಿತ್ಸೆ ನೀಡಲಾಗುತ್ತಿದೆ ಮತ್ತು ಅವರು ಚೇತರಿಸಿಕೊಳ್ಳುತ್ತಿದ್ದಾರೆ. ನಾಳೆ ಮುಂಜಾನೆ ಅವರನ್ನು ಡಿಸ್ಚಾರ್ಜ್ ಮಾಡುವ ಸಾಧ್ಯತೆ ಇದೆ” ಎಂದು ತಿಳಿಸಿದ್ದಾರೆ.
ರಾಜ್ಯಪಾಲರ ಅಸ್ವಸ್ಥತೆಯ ಸುದ್ದಿ ಹೊರಬಂದ ನಂತರ, ರಾಜ್ಯದ ಹಲವು ರಾಜಕೀಯ ನಾಯಕರು ಹಾಗೂ ಗಣ್ಯರು ಅವರ ಆರೋಗ್ಯದ ಬಗ್ಗೆ ಕಾಳಜಿ ವ್ಯಕ್ತಪಡಿಸಿದ್ದಾರೆ. ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಹಲವರು ಸಾಮಾಜಿಕ ಜಾಲತಾಣಗಳ ಮೂಲಕ “ಗೆಹ್ಲೋಟ್ ಅವರು ಬೇಗ ಚೇತರಿಸಿಕೊಳ್ಳಲಿ” ಎಂದು ಟ್ವೀಟ್ ಮಾಡಿದ್ದಾರೆ.





