ಇಂದು ಕರ್ನಾಟಕದ ವಿವಿಧ ಭಾಗಗಳಲ್ಲಿ ಸಂಭವಿಸಿದ ಪ್ರತ್ಯೇಕ ರಸ್ತೆ ಅಪಘಾತಗಳು ರಾಜ್ಯವನ್ನೇ ಬೆಚ್ಚಿಬೀಳಿಸಿವೆ. ಬೀದರ್, ವಿಜಯನಗರ, ಶಿವಮೊಗ್ಗ, ಮತ್ತು ಬೆಂಗಳೂರಿನಲ್ಲಿ ನಡೆದ ಈ ಭೀಕರ ಅಪಘಾತಗಳಲ್ಲಿ ಐವರು ಸಾವನ್ನಪ್ಪಿದ್ದರೆ ಹಲವರು ಗಾಯಗೊಂಡಿದ್ದಾರೆ.
ಬೀದರ್‌ನಲ್ಲಿ ಪಾದಚಾರಿ ಮಹಿಳೆ ಖಾಸಗಿ ಬಸ್ ಡಿಕ್ಕಿ: ಮಹಿಳೆ ಸ್ಥಳದಲ್ಲೇ ಸಾವು
ಬೀದರ್: ನಗರದ ಅಂಬೇಡ್ಕರ್ ವೃತ್ತದಲ್ಲಿ ಬೆಳಿಗ್ಗೆ ಸಂಭವಿಸಿದ ಭೀಕರ ಅಪಘಾತದಲ್ಲಿ ಭೀಮವ್ವ ಎಂಬ ಮಹಿಳೆ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸಾಯಿ ಕೆಮಿಕಲ್ಸ್ ಕಂಪನಿಗೆ ಸೇರಿದ ಬಸ್ ಡಿಕ್ಕಿಯ ರಭಸಕ್ಕೆ ಈ ದುರ್ಘಟನೆ ಸಂಭವಿಸಿದೆ.
ಜಂಬಗಿ ಪ್ರಾಥಮಿಕ ಆಸ್ಪತ್ರೆಯ ಸಿಬ್ಬಂದಿಯಾಗಿ ಕೆಲಸಕ್ಕೆ ತೆರಳುತ್ತಿದ್ದ ಭೀಮವ್ವ, ದಿನನಿತ್ಯದಂತೆ ತಮ್ಮ ಕೆಲಸಕ್ಕೆ ಹೋಗುವಾಗ ಈ ದುರಂತ ಸಂಭವಿಸಿದೆ. ಅಪಘಾತದ ಬಳಿಕ ಬಸ್ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ. ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
KSRTC ಬಸ್-ಟಿಪ್ಪರ್ ಲಾರಿಯ ನಡುವೆ ಭೀಕರ ಅಪಘಾತ: ಕಂಡಕ್ಟರ್ ಸಾವು
ವಿಜಯನಗರ: ಜಿಲ್ಲೆಯ ಹೊಸಪೇಟೆ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 50ರ ಹಾರುವನಹಳ್ಳಿ ಗ್ರಾಮದ ಬಳಿ ಕೆಎಸ್‌ಆರ್‌ಟಿಸಿ ಬಸ್ ಮತ್ತು ಟಿಪ್ಪರ್ ಲಾರಿಯ ನಡುವೆ ಸಂಭವಿಸಿದ ಅಪಘಾತದಲ್ಲಿ ಕಂಡಕ್ಟರ್ ಉಮೇಶ್ (42) ಸಾವನ್ನಪ್ಪಿದ್ದಾರೆ.
ಹೊಸಪೇಟೆಯಿಂದ ಬೆಂಗಳೂರಿಗೆ ತೆರಳುತ್ತಿದ್ದ ಕೊಪ್ಪಳದ ಕುಕನೂರು ಡಿಪೋಗೆ ಸೇರಿದ ಬಸ್, ಯು-ಟರ್ನ್ ಮಾಡುವಾಗ ಟಿಪ್ಪರ್ ಲಾರಿಯು ಏಕಾಏಕಿ ಬ್ರೇಕ್ ಹಾಕಿದ್ದರಿಂದ ಹಿಂಬದಿಯಿಂದ ಡಿಕ್ಕಿಯಾಗಿದೆ. ಈ ಘಟನೆಯಲ್ಲಿ ಬಸ್ ಚಾಲಕನಿಗೆ ಗಂಭೀರ ಗಾಯಗಳಾಗಿದ್ದು, ಪ್ರಯಾಣಿಕರಿಗೆ ಯಾವುದೇ ಹಾನಿಯಾಗಿಲ್ಲ. ಮರಿಯಮ್ಮನಹಳ್ಳಿ ಪೊಲೀಸರು ಮತ್ತು ಹೊಸಪೇಟೆ ಬಸ್ ಡಿಪೋ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ನಂದಿನಿ ಹಾಲಿನ ವಾಹನ-ಬೈಕ್ ಮುಖಾಮುಖಿ ಡಿಕ್ಕಿ: ಇಬ್ಬರು ಮೆಡಿಕಲ್ ವಿದ್ಯಾರ್ಥಿಗಳ ಸಾವು
ಶಿವಮೊಗ್ಗ: ನಗರದ ಸರ್ಕ್ಯೂಟ್ ಹೌಸ್ ಸರ್ಕಲ್‌ನಲ್ಲಿ ಬೆಳ್ಳಂಬೆಳಿಗ್ಗೆ ನಡೆದ ಭೀಕರ ಅಪಘಾತದಲ್ಲಿ ಇಬ್ಬರು ಮೆಡಿಕಲ್ ವಿದ್ಯಾರ್ಥಿಗಳಾದ ಆದಿತ್ಯ ಮತ್ತು ಸಂದೀಪ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ನಂದಿನಿ ಹಾಲಿನ ವಾಹನ ಮತ್ತು ಬೈಕ್‌ನ ನಡುವೆ ಮುಖಾಮುಖಿ ಡಿಕ್ಕಿಯಿಂದ ಈ ದುರ್ಘಟನೆ ಸಂಭವಿಸಿದೆ.
ಆದಿತ್ಯ (ಉಡುಪಿ ಮೂಲದ) ಮತ್ತು ಸಂದೀಪ್ (ಹೊನ್ನಾಳಿ ಮೂಲದ) ಮೂರನೇ ವರ್ಷದ ಎಂ.ಬಿ.ಬಿ.ಎಸ್. ವಿದ್ಯಾರ್ಥಿಗಳಾಗಿದ್ದರು. ಹೆಲ್ಮೆಟ್ ಧರಿಸದಿರುವುದರಿಂದ ತಲೆಗೆ ಗಂಭೀರ ಗಾಯಗಳಾಗಿ ಸಾವನ್ನಪ್ಪಿದ್ದಾರೆ.
ಅಪಘಾತದ ರಭಸಕ್ಕೆ ಹಾಲಿನ ಪಾಕೆಟ್‌ಗಳು ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿ, ರಕ್ತ ಮತ್ತು ಹಾಲು ಹರಿದು ಭಯಾನಕ ದೃಶ್ಯ ಸೃಷ್ಟಿಯಾಯಿತು. ಮೃತದೇಹಗಳನ್ನು ಮೆಗ್ಗಾನ್ ಶವಾಗಾರಕ್ಕೆ ಸ್ಥಳಾಂತರಿಸಲಾಗಿದೆ. ಶಿವಮೊಗ್ಗದ ಪಶ್ಚಿಮ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಚಕ್ರದಡಿ ಸಿಲುಕಿದ ಪ್ರಯಾಣಿಕನ ಮೇಲೆ ಹರಿದ BMTC ಬಸ್: ವ್ಯಕ್ತಿ ಸಾವು
ಬೆಂಗಳೂರು: ಬೆಂಗಳೂರಿನ ಜಯನಗರದ ಬಸ್ ನಿಲ್ದಾಣದ ಬಿಎಂಟಿಸಿ ಬಸ್‌ನಲ್ಲಿ ಸಂಭವಿಸಿದ ದುರ್ಘಟನೆಯಲ್ಲಿ ಸಂಪಂಗಿ ಎಂಬ ವ್ಯಕ್ತಿ ಸಾವನ್ನಪ್ಪಿದ್ದಾರೆ. ಬಸ್‌ಗೆ ಏರಲು ಪ್ರಯತ್ನಿಸುವಾಗ ಚಾಲಕ ಡೋರ್ ಮುಚ್ಚಿದ್ದರಿಂದ ಸಂಪಂಗಿಯ ಕೈ ಒಳಗೊತ್ತಿಕೊಂಡು, ದೇಹ ಹೊರಗಿರುವಾಗ ಬಸ್ ಮುಂದಕ್ಕೆ ಸಾಗಿದೆ.
ಈ ವೇಳೆ ಚಕ್ರದಡಿ ಬಿದ್ದು ಸಂಪಂಗಿ ಮೃತಪಟ್ಟಿದ್ದಾರೆ. ಮೃತರ ಸೊಸೆ ಮಧುಬಾಲ ಅವರ ಹೇಳಿಕೆಯ ಪ್ರಕಾರ, ಸಂಪಂಗಿ ದಿನ ಮಾರ್ಕೆಟ್‌ಗೆ ಕೆಲಸಕ್ಕೆ ತೆರಳುತ್ತಿದ್ದರು ಮತ್ತು ಕುಟುಂಬದ ಆಧಾರವಾಗಿದ್ದರು. ಅವರಿಗೆ ನಾಲ್ಕು ಮಕ್ಕಳಿದ್ದು, ಕುಟುಂಬಕ್ಕೆ ಸಾಲದ ಭಾರವಿದೆ. ಚಾಲಕನ ನಿರ್ಲಕ್ಷ್ಯದಿಂದ ಈ ದುರ್ಘಟನೆ ಸಂಭವಿಸಿದೆ ಎಂದು ಆರೋಪಿಸಿದ್ದಾರೆ.