ರೈತರ ಕೃಷಿ ಸಾಲ ಮನ್ನಾ ಮಾಡಿ: ನಿಖಿಲ್ ಕುಮಾರಸ್ವಾಮಿ ಆಗ್ರಹ!

Untitled design 2026 07 14T180617.714

ಬೆಂಗಳೂರು, ಜುಲೈ (14): ರಾಜ್ಯದಲ್ಲಿ ಮುಂಗಾರು ಮಳೆಯ ತೀವ್ರ ಕೊರತೆಯಿಂದಾಗಿ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು, ಸರ್ಕಾರ ತಕ್ಷಣವೇ ಸಹಕಾರಿ ಮತ್ತು ವಾಣಿಜ್ಯ ಬ್ಯಾಂಕ್‌ಗಳಲ್ಲಿರುವ ರೈತರ ಎಲ್ಲಾ ಕೃಷಿ ಸಾಲಗಳನ್ನು ಸಂಪೂರ್ಣವಾಗಿ ಮನ್ನಾ ಮಾಡಬೇಕು ಎಂದು ಜನತಾದಳ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರು ಬಲವಾಗಿ ಆಗ್ರಹಿಸಿದ್ದಾರೆ.

ಬರ ಪರಿಸ್ಥಿತಿಯ ಗಂಭೀರತೆಯನ್ನು ಅರಿಯಲು ಮಂಗಳವಾರ ಜಿಲ್ಲೆಯ ಇಂಡಿ ಮತ್ತು ಬಸವನ ಬಾಗೇವಾಡಿ ತಾಲ್ಲೂಕುಗಳ ವಿವಿಧ ಗ್ರಾಮಗಳ ರೈತರ ಹೊಲಗಳಿಗೆ ಖುದ್ದಾಗಿ ಭೇಟಿ ನೀಡಿ, ಬರ ಸಮೀಕ್ಷೆ ನಡೆಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ರಾಜ್ಯದ ಸುಮಾರು 135 ತಾಲ್ಲೂಕುಗಳಲ್ಲಿ ಮುಂಗಾರು ಮಳೆ ಸಂಪೂರ್ಣ ಕೈಕೊಟ್ಟಿದ್ದು, ಕೃಷಿ ಚಟುವಟಿಕೆಗಳು ಸಂಪೂರ್ಣ ನಾಶವಾಗಿವೆ. ಹೀಗಾಗಿ ಸರ್ಕಾರ ವಿಳಂಬ ಮಾಡದೆ ತಕ್ಷಣವೇ ಈ ತಾಲ್ಲೂಕುಗಳನ್ನು ಅಧಿಕೃತವಾಗಿ ಬರಪೀಡಿತ ಪ್ರದೇಶಗಳೆಂದು ಘೋಷಿಸಬೇಕು ಎಂದು ಒತ್ತಾಯಿಸಿದರು.

ಎಕರೆಗೆ ₹25 ಸಾವಿರ ಬರ ಪರಿಹಾರಕ್ಕೆ ಡಿಮ್ಯಾಂಡ್:

 ಮಳೆ ಬಾರದೆ ಇರುವುದರಿಂದ ಇಡೀ ರಾಜ್ಯ ಬರಕ್ಕೆ ತುತ್ತಾಗಿದೆ. ಇದರಿಂದಾಗಿ ಕಂಗಾಲಾಗಿರುವ ಸುಮಾರು 70 ಲಕ್ಷ ಸಣ್ಣ ಮತ್ತು ಅತಿ ಸಣ್ಣ ರೈತರ ನೆರವಿಗೆ ಸರ್ಕಾರ ಧಾವಿಸಬೇಕು. ನಷ್ಟ ಅನುಭವಿಸಿ ತುತ್ತು ಅನ್ನಕ್ಕೂ ಪರದಾಡುತ್ತಿರುವ ರೈತರ ಬ್ಯಾಂಕ್ ಖಾತೆಗಳಿಗೆ  ಪ್ರತಿ ಎಕರೆಗೆ ₹25 ಸಾವಿರ ಬರ ಪರಿಹಾರ ಧನವನ್ನು ಬಿಡುಗಡೆ ಮಾಡಿ ಜಮೆ ಮಾಡಬೇಕು ಎಂದು ನಿಖಿಲ್ ಕುಮಾರಸ್ವಾಮಿ ಆಗ್ರಹಿಸಿದರು.

ಉಚಿತ ಮೇವು ಬ್ಯಾಂಕ್ ಸ್ಥಾಪನೆಗೆ ಒತ್ತಾಯ:

 ರಾಜ್ಯದಲ್ಲಿ ಕೇವಲ ಬೆಳೆ ಒಣಗುತ್ತಿರುವುದು ಮಾತ್ರವಲ್ಲದೆ, ತೀವ್ರ ಮೇವಿನ ಅಭಾವ ಕೂಡ ಸೃಷ್ಟಿಯಾಗಿದೆ. ಮೇವು ಸಿಗದೆ ಕಷ್ಟಪಡುತ್ತಿರುವ ರೈತರು ತಮ್ಮ ಜೀವನಾಧಾರವಾಗಿರುವ ದನ-ಕರುಗಳನ್ನು ಅತ್ಯಂತ ಕಡಿಮೆ ಬೆಲೆಗೆ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಿದ್ದಾರೆ. ಈ ಆಘಾತಕಾರಿ ಪರಿಸ್ಥಿತಿಯನ್ನು ತಪ್ಪಿಸಲು ಸರ್ಕಾರ ಪ್ರತಿ ಹೋಬಳಿ ಕೇಂದ್ರದಲ್ಲಿ ತಕ್ಷಣವೇ ಉಚಿತ ಮೇವು ಬ್ಯಾಂಕ್ ಹಾಗೂ ಮೇವು ಸಂಗ್ರಹಣಾ ಕೇಂದ್ರಗಳನ್ನು ಆರಂಭಿಸಬೇಕು. ಆ ಮೂಲಕ ಜಾನುವಾರುಗಳ ರಕ್ಷಣೆ ಮಾಡುವುದರ ಜೊತೆಗೆ ರೈತರಿಗೆ ನೆರವಾಗಬೇಕು ಎಂದು ಹೇಳಿದರು.

ಕುಡಿಯುವ ನೀರು ಮತ್ತು ಕೊಳವೆಬಾವಿಗೆ ವಿಶೇಷ ಅನುದಾನ:

 ಮಳೆಯ ಅಭಾವದಿಂದಾಗಿ ಅಂತರ್ಜಲ ಮಟ್ಟ ಸಂಪೂರ್ಣವಾಗಿ ಬತ್ತಿ ಹೋಗಿದೆ. ಗ್ರಾಮೀಣ ಭಾಗಗಳಲ್ಲಿ ಕುಡಿಯುವ ನೀರಿಗೂ ತೊಂದರೆಯಾಗಿದೆ. ಆದ್ದರಿಂದ ಸಾರ್ವಜನಿಕರಿಗೆ ಟ್ಯಾಂಕರ್ ಮೂಲಕ ನೀರು ಪೂರೈಸಲು ಮತ್ತು ತುರ್ತಾಗಿ ಹೊಸ ಕೊಳವೆಬಾವಿಗಳನ್ನು ಕೊರೆಸಲು ಸರ್ಕಾರ ಮುಂದಾಗಬೇಕು. ಈ ತುರ್ತು ಕಾಮಗಾರಿಗಳಿಗಾಗಿ ಪ್ರತಿ ತಾಲ್ಲೂಕಿಗೆ ಕನಿಷ್ಠ ₹5 ಕೋಟಿ ವಿಶೇಷ ಅನುದಾನವನ್ನು ತಕ್ಷಣವೇ ಬಿಡುಗಡೆ ಮಾಡಬೇಕು ಎಂದು ಅವರು ಸರ್ಕಾರವನ್ನು ಒತ್ತಾಯಿಸಿದರು.

ಈ ಬರ ಸಮೀಕ್ಷೆಯ ಸಂದರ್ಭದಲ್ಲಿ ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಸುರೇಶ್ ಬಾಬು ಸಿ.ಟಿ, ಕೋರ್ ಕಮಿಟಿ ಅಧ್ಯಕ್ಷ ಜೆ.ಕೆ. ಕೃಷ್ಣರೆಡ್ಡಿ ಹಾಗೂ ಜೆಡಿಎಸ್‌ ಹಿರಿಯ ಮುಖಂಡ ಬಿ.ಡಿ. ಪಾಟೀಲ್ ಸೇರಿದಂತೆ ಹಲವು ಪ್ರಮುಖ ನಾಯಕರು ಉಪಸ್ಥಿತರಿದ್ದರು.

Exit mobile version