ಬೆಳಗಾವಿ: ರಾಜ್ಯ ರಾಜಕೀಯದಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ಸಂಬಂಧಿಸಿದಂತೆ ಭಾರೀ ಚರ್ಚೆ ನಡೆಯುತ್ತಿರುವ ನಡುವೆಯೇ, ಕೋಡಿಮಠದ ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿಗಳು ನೀಡಿದ ಸ್ಫೋಟಕ ಭವಿಷ್ಯ ನುಡಿದಿದ್ದಾರೆ. “ಸಿದ್ದರಾಮಯ್ಯ ಅವರು ತಾವಾಗಿಯೇ ಅಧಿಕಾರ ಬಿಟ್ಟು ಕೊಟ್ಟರೆ ಮಾತ್ರ ಡಿಕೆ ಶಿವಕುಮಾರ್‌ಗೆ ಸಿಎಂ ಭಾಗ್ಯ ಸಾಧ್ಯ. ಇಲ್ಲದಿದ್ದರೆ ಅದೊಂದು ಅಸಾಧ್ಯ ಕನಸು” ಎಂದು ಕೋಡಿ ಶ್ರೀಗಳು ಸ್ಪಷ್ಟವಾಗಿ ಹೇಳಿದ್ದಾರೆ.
ಬೆಳಗಾವಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಕೋಡಿ ಶ್ರೀಗಳು, ಹಾಲುಮತ ಸಮಾಜದಿಂದ ಅಧಿಕಾರ ಕಿತ್ತುಕೊಳ್ಳುವುದು ಅಷ್ಟೇನು ಸುಲಭವಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ. “ಸಿದ್ದರಾಮಯ್ಯ ಅವರ ಹಿಂದೆ ಬಲಿಷ್ಠ ಸಾಮಾಜಿಕ ಬೆಂಬಲವಿದೆ. ಆ ಶಕ್ತಿಯಿಂದ ಅಧಿಕಾರ ಕಿತ್ತುಕೊಳ್ಳಲು ಪ್ರಯತ್ನಿಸಿದರೆ ರಾಜಕೀಯವಾಗಿ ಕಷ್ಟ ಎದುರಾಗುತ್ತದೆ” ಎಂದು ಹೇಳಿದ್ದಾರೆ.
ಅರಸನ ಅರಮನೆಗೆ ಕಾರ್ಮೋಡ?
ರಾಜಕೀಯ ಭವಿಷ್ಯವನ್ನು ವಿವರಿಸಿದ ಕೋಡಿ ಶ್ರೀಗಳು, “ಅರಸನ ಅರಮನೆಗೆ ಕಾರ್ಮೋಡ ಕವಿದಿದೆ. ಅರಸನ ಬಂಡಾರವೇ ಬಜೆಟ್” ಎಂದು ಹೇಳಿದ್ದಾರೆ. ಇದರರ್ಥ, ವರ್ಷದ ಬಜೆಟ್ ಪ್ರಕ್ರಿಯೆ ಮುಗಿದ ನಂತರವೇ ಅಧಿಕಾರ ಬದಲಾವಣೆ ಸಾಧ್ಯತೆಗಳ ಬಗ್ಗೆ ಯೋಚನೆ ಆಗಬಹುದು ಎಂಬುದಾಗಿದೆ. “ಬಜೆಟ್ ಮುಗಿದ ಬಳಿಕ ಸಿದ್ದರಾಮಯ್ಯ ಅವರಾಗಿ ಸ್ಥಾನ ಬಿಟ್ಟು ಕೊಟ್ಟರೆ ಮಾತ್ರ ಬೇರೆಯವರಿಗೆ ಅವಕಾಶ ಸಿಗಬಹುದು. ಇಲ್ಲದಿದ್ದರೆ ಕಷ್ಟವೇ” ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಕೇಂದ್ರ ರಾಜಕೀಯದ ಬಗ್ಗೆಯೂ ಭವಿಷ್ಯ ನುಡಿದ ಸ್ವಾಮೀಜಿ, “ಕೇಂದ್ರದಲ್ಲಿಯೂ ತಕ್ಷಣದ ಬದಲಾವಣೆ ಸಾಧ್ಯತೆ ಕಡಿಮೆ” ಎಂದು ಹೇಳಿದ್ದಾರೆ.
ಹೈಕಮಾಂಡ್ ಶಾಕ್, ಡಿಕೆಶಿಗೆ ನಿರಾಸೆ?
ಇತ್ತ ಕಾಂಗ್ರೆಸ್ ಹೈಕಮಾಂಡ್‌ನ ನಡೆ ಕೂಡ ಡಿಕೆ ಶಿವಕುಮಾರ್‌ಗೆ ನಿರಾಸೆ ತಂದಿದೆ. ಕಾಂಗ್ರೆಸ್ ಕಾರ್ಯಕಾರಿ ಸಮಿತಿ (CWC) ಸಭೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮಾತ್ರ ಆಹ್ವಾನ ನೀಡಿದ್ದು, ಡಿಸಿಎಂ ಡಿಕೆ ಶಿವಕುಮಾರ್‌ಗೆ ಆಹ್ವಾನ ಇಲ್ಲದಿರುವುದು ಹಲವು ಪ್ರಶ್ನೆಗಳಿಗೆ ಕಾರಣವಾಗಿದೆ. ಈ ಸಭೆಯಲ್ಲಿ ಸಿದ್ದರಾಮಯ್ಯ ಅವರು ಭರ್ಜರಿ ಬ್ಯಾಟ್ ಬೀಸಿದ್ದಾರೆ ಎನ್ನಲಾಗಿದ್ದು, ಹೈಕಮಾಂಡ್‌ನ ವಿಶ್ವಾಸ ಇನ್ನೂ ತಮ್ಮ ಪರವಿದೆ ಎಂಬ ಸಂದೇಶ ರವಾನಿಸಿದ್ದಾರೆ.
ಒಟ್ಟಾರೆ, ಕೋಡಿಮಠದ ಭವಿಷ್ಯ, ಹೈಕಮಾಂಡ್‌ನ ಮೌನ ಹಾಗೂ ಸಿದ್ದರಾಮಯ್ಯ ಅವರ ನಡೆ ಈ ಮೂರು ಅಂಶಗಳು ಡಿಕೆ ಶಿವಕುಮಾರ್ ಅವರ ಸಿಎಂ ಕನಸಿಗೆ ತಾತ್ಕಾಲಿಕ ಬ್ರೇಕ್ ಬಿದ್ದಿದೆ ಎಂಬ ಸಂದೇಶವನ್ನು ನೀಡಿವೆ.





