ಕರ್ನಾಟಕ ಸಿಎಂ ಕುರ್ಚಿ ವಿವಾದ: ಮುಂಬೈಗೆ ಹಾರಿದ ಡಿಸಿಎಂ ಡಿ.ಕೆ ಶಿವಕುಮಾರ್‌

Untitled design 2025 11 27T232517.425

ಬೆಂಗಳೂರು (ನ.27): ಕರ್ನಾಟಕ ಕಾಂಗ್ರೆಸ್‌ನಲ್ಲಿ ಸಿಎಂ ಸ್ಥಾನದ ‘ಪವರ್ ಶೇರಿಂಗ್’ ವಿಚಾರ ರಾಜ್ಯ ರಾಜಕಾರಣದ ಬಿಸಿ ಚರ್ಚೆಯಾಗಿದೆ. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಕುರ್ಚಿಯನ್ನ ಡಿಕೆ ಶಿವಕುಮಾರ್‌ಗೆ ಬಿಟ್ಟುಕೊಡುತ್ತಾರಾ ? ಅಥವಾ ಉಳಿದ ವರ್ಷಗಳಲ್ಲಿ ಸಿಎಂ ಸಿದ್ದರಾಮಯ್ಯವರೇ ಸಿಎಂ ಆಗಿ ಮುಂದುವರೆಯುತ್ತಾರಾ..? ಎಂಬ ಪ್ರಶ್ನೆಗಳು ತಾರಕಕ್ಕೇರಿವೆ. ಈ ಬೆನ್ನಲ್ಲೇ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಗುರುವಾರ ಮುಂಬೈಗೆ ತೆರಳಿದ್ದು, ರಾಜಕೀಯ ವಲಯದಲ್ಲಿ ಹೊಸ ಊಹಾಪೋಹಗಳಿಗೆ ಕಾರಣವಾಗಿದೆ.

ಡಿಕೆಶಿ ಅವರು ವಿಶೇಷ ವಿಮಾನದಲ್ಲಿ ಬೆಂಗಳೂರಿನ ಹೆಚ್‌ಎಎಲ್ ವಿಮಾನ ನಿಲ್ದಾಣದಿಂದ ಮುಂಬೈಗೆ ತೆರಳಿದ್ದಾರೆ. ಅಲ್ಲಿನ ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸುವುದಾಗಿ ತಿಳಿಸಿದ್ದಾರೆ. ನನ್ನನ್ನು ಯಾರೂ ದೆಹಲಿಗೆ ಕರೆದಿಲ್ಲ. ಇಂದಿರಾಗಾಂಧಿ ಆರಂಭಿಸಿದ ಅಂಗನವಾಡಿ ಯೋಜನೆಗೆ 50 ವರ್ಷ ತುಂಬುತ್ತಿರುವ ಸಂದರ್ಭದಲ್ಲಿ ಮುಂಬೈನಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಹೋಗುತ್ತಿದ್ದೇನೆ ಎಂದು ಸ್ಪಷ್ಟಪಡಿಸಿದ್ದಾರೆ.

ಆದರೆ ಮೂಲಗಳ ಪ್ರಕಾರ, ಡಿಕೆಶಿ ಶನಿವಾರ (ನ.29) ದೆಹಲಿಗೆ ತೆರಳಲಿದ್ದಾರೆ. ಇದೇ ದಿನ ಸಿಎಂ ಸಿದ್ದರಾಮಯ್ಯ ಅವರನ್ನೂ ದೆಹಲಿಗೆ ಕರೆಯಲಾಗಿದೆ. ಕಾಂಗ್ರೆಸ್ ಹೈಕಮಾಂಡ್ – ಸೋನಿಯಾ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್ ಗಾಂಧಿ ಅವರ ಸಮ್ಮುಖದಲ್ಲಿ ರಾಜ್ಯದ ರಾಜಕೀಯ ಭವಿಷ್ಯದ ಬಗ್ಗೆ ನಿರ್ಣಾಯಕ ಸಭೆ ನಡೆಯಲಿದೆ. ಈ ಸಭೆಯಲ್ಲಿ ಸಿಎಂ ಸ್ಥಾನದ ವಿವಾದಕ್ಕೆ ತೆರೆ ಎಳೆಯುವ ಸಾಧ್ಯತೆ ಹೆಚ್ಚಾಗಿದೆ.

ಸಿಎಂ ಸಿದ್ದರಾಮಯ್ಯ ಅವರು ಈಗಾಗ್ಲೇ ಹೈಕಮಾಂಡ್ ಕರೆದರೆ ದೆಹಲಿಗೆ ಹೋಗುತ್ತೇನೆ. ಹೈಕಮಾಂಡ್ ತೀರ್ಮಾನಕ್ಕೆ ಬದ್ಧನಾಗಿರುತ್ತೇನೆ ಎಂದು ಹೇಳಿದ್ದಾರೆ. ಇತ್ತ ಡಿಕೆಶಿ ಕೂಡ ಹೈಕಮಾಂಡ್ ನನ್ನ ಹಿತವನ್ನು ಕಾಪಾಡುತ್ತದೆ ಎಂದು ಬಹಿರಂಗವಾಗಿ ಹೇಳಿಕೊಂಡಿದ್ದಾರೆ.

2023ರ ವಿಧಾನಸಭಾ ಚುನಾವಣೆಗೂ ಮುನ್ನ ಸಿದ್ದರಾಮಯ್ಯ ಮತ್ತು ಡಿಕೆಶಿ ನಡುವೆ ಪವರ್ ಶೇರಿಂಗ್ ಒಪ್ಪಂದವಾಗಿದ್ದ ಕುರಿತು ಆಗಿಂದಾಗ್ಗೆ ಚರ್ಚೆಗಳು ನಡೆಯುತ್ತಿವೆ. ಡಿಕೆಶಿ ಪರ ಗುಂಪು 2.5 ವರ್ಷಗಳ ನಂತರ ಸಿಎಂ ಸ್ಥಾನ ಬದಲಾವಣೆ ಆಗಬೇಕೆಂದು ಒತ್ತಾಯಿಸುತ್ತಿದೆ. ಆದರೆ ಸಿದ್ದರಾಮಯ್ಯ ಬಣದವರು ಅಂತಹ ಯಾವುದೇ ಒಪ್ಪಂದವಿಲ್ಲ, ಚುನಾವಣೆಯಲ್ಲಿ ನನ್ನ ಮುಖ ಗೆದ್ದಿದೆ ಎಂದು ವಾದಿಸುತ್ತಿದ್ದಾರೆ.

ಈ ಎಲ್ಲಾ ಗೊಂದಲಗಳ ನಡುವೆ ಕಾಂಗ್ರೆಸ್ ಹೈಕಮಾಂಡ್ ತಲೆದೂರಿದೆ. ನವೆಂಬರ್ 29ರ ಶನಿವಾರ ದೆಹಲಿಯಲ್ಲಿ ನಡೆಯುವ ಸಭೆಯಲ್ಲಿ ರಾಹುಲ್ ಗಾಂಧಿ ಮುಖ್ಯ ಪಾತ್ರ ವಹಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಸಭೆಯಲ್ಲಿ ಸಿಎಂ ಸ್ಥಾನದ ಭವಿಷ್ಯ, ಮಂತ್ರಿ ಮಂಡಲ ವಿಸ್ತರಣೆ/ಪುನರ್‌ರಚನೆ, ಪಕ್ಷ ಸಂಘಟನೆ ಸೇರಿದಂತೆ ಎಲ್ಲ ವಿಚಾರಗಳ ಬಗ್ಗೆ ಚರ್ಚೆ ನಡೆಯುವ ಸಾಧ್ಯತೆ ಇದೆ.

ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು 18 ತಿಂಗಳು ಕಳೆದಿದೆ. ಆದರೆ ಈಗಲೂ ಪಕ್ಷದ ಒಳಗಿನ ಗುಂಪುಗಳು ರಾಜಕಾರಣ ಮುಂದುವರಿದಿದೆ. ಡಿಕೆಶಿ ಬೆಂಬಲಿಗರು ಸಿಎಂ ಬದಲಾವಣೆಗೆ ಒತ್ತಡ ಹೇರಿದರೆ, ಸಿದ್ದರಾಮಯ್ಯ ಬೆಂಬಲಿಗರು ಪ್ರಸ್ತುತ ಸ್ಥಿತಿ ಮುಂದುವರಿಯಲಿ ಎಂದು ವಾದಿಸುತ್ತಿದ್ದಾರೆ. ಇದರಿಂದ ಸರ್ಕಾರದ ಕೆಲಸಕಾರ್ಯಗಳ ಮೇಲೂ ಪರೋಕ್ಷ ಪ್ರಭಾವ ಬೀಳುತ್ತಿದೆ ಎಂಬ ಟೀಕೆಗಳೂ ಕೇಳಿಬರುತ್ತಿವೆ.

ಹೈಕಮಾಂಡ್ ಈ ಬಾರಿ ಯಾವ ನಿರ್ಧಾರ ಕೈಗೊಳ್ಳುತ್ತದೆ ಎಂಬ ಕುತೂಹಲ ರಾಜ್ಯದಾದ್ಯಂತ ಇದೆ. ಸಿದ್ದರಾಮಯ್ಯ ಮುಂದುವರಿಯುತ್ತಾರಾ? ಡಿಕೆಶಿ ಸಿಎಂ ಆಗುತ್ತಾರಾ? ಅಥವಾ ಇನ್ನೊಂದು ರೀತಿಯ ರಾಜಿ ಸೂತ್ರ ಹೊರಬರುತ್ತದಾ? ಎಂಬ ಪ್ರಶ್ನೆಗಳಿಗೆ ನವೆಂಬರ್ 29ರ ನಂತರವಷ್ಟೇ ಉತ್ತರ ಸಿಗಲಿದೆ.

Exit mobile version