ಕರ್ನಾಟಕದ ನೆಚ್ಚಿನ ಚಾನೆಲ್‌ ಗ್ಯಾರಂಟಿ ನ್ಯೂಸ್‌ಗೆ ವರ್ಷದ ಸಂಭ್ರಮ

ಗ್ಯಾರಂಟಿ ನ್ಯೂಸ್‌ಗೆ ಶುಭ ಹಾರೈಸಿದ ಡಾ. ಜಿ ಪರಮೇಶ್ವರ್‌, ಗಣ್ಯರು

ಕನ್ನಡ ಮಾಧ್ಯಮ ಲೋಕದಲ್ಲಿ ಅತೀ ಕಡಿಮೆ ಅವಧಿಯಲ್ಲಿ ದೊಡ್ಡ ಹೆಸರು ಮಾಡಿರುವ ಗ್ಯಾರಂಟಿ ನ್ಯೂಸ್‌ಗೆ ಇಂದು ಒಂದು ವರ್ಷದ ಸಂಭ್ರಮ. “ಸುದ್ದಿ ಖಚಿತ, ನ್ಯಾಯ ನಿಶ್ಚಿತ” ಎಂಬ ಧ್ಯೇಯ ವಾಕ್ಯದಡಿ ಆರಂಭವಾದ ಈ ಚಾನೆಲ್, ಕೇವಲ ಒಂದು ವರ್ಷದಲ್ಲಿ ರಾಜ್ಯದ ಮನೆಮಾತಾಗಿದೆ. ವಿವಿಧ ಸುದ್ದಿ ವಾಹಿನಿಗಳ ಜೊತೆಗೆ ಒಂದಾಗದೇ ವಿಭಿನ್ನ ಸುದ್ದಿಗಳ ಮೂಲಕ ರಾಜ್ಯದಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿದೆ.

ಗ್ಯಾರಂಟಿ ನ್ಯೂಸ್‌ನ ವಾರ್ಷಿಕೋತ್ಸವ ಕಾರ್ಯಕ್ರಮ ಕಚೇರಿಯಲ್ಲಿ ಅತ್ಯಂತ ಸಂಭ್ರಮ ಸಡಗರದಿಂದ ಇಂದು ಅದ್ದೂರಿಯಾಗಿ ನಡೆಯಿತು. ಈ ಸಂದರ್ಭದಲ್ಲಿ ಕರ್ನಾಟಕದ ಗೃಹ ಸಚಿವರಾದ ಡಾ. ಜಿ. ಪರಮೇಶ್ವರ ಅವರು ಚಾನೆಲ್‌ಗೆ ಭೇಟಿ ನೀಡಿ, ಕೇಕ್ ಕತ್ತರಿಸಿ ಶುಭಾಶಯ ಕೋರಿದರು. ಉತ್ತಮ ಮತ್ತು ನೈಜ ಸುದ್ದಿಗಳನ್ನು ಜನತೆಗೆ ತಲುಪಿಸುವಲ್ಲಿ ಗ್ಯಾರಂಟಿ ನ್ಯೂಸ್ ಮಾಡುತ್ತಿರುವ ಕೆಲಸ ಶ್ಲಾಘನೀಯ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ಇದೇ ವೇಳೆ ಬಿಜಿಎಸ್ ಸಂಸ್ಥೆಯ ಡಾ. ಪ್ರಕಾಶನಾಥ ಸ್ವಾಮೀಜಿ ಅವರು ಕಚೇರಿಗೆ ಭೇಡಿ ನೀಡಿ, ಕಚೇರಿ ಸಿಬ್ಬಂದಿಗಳ ಜೊತೆಗೆ ವಾರ್ಷಿಕೋತ್ಸವದ ನಿಮಿತ್ತವಾಗಿ ಕೇಕ್‌ ಕತ್ತರಿಸುವ ಮೂಲಕ ಸಂಭ್ರಮದಲ್ಲಿ ಭಾಗಿಯಾದ್ರು. ಅಲ್ಲದೇ ಗ್ಯಾರಂಟಿ ನ್ಯೂಸ್‌ ಚಾನೆಲ್‌ ಒಂದು ವರ್ಷ ಪೂರೈಸಿದಕ್ಕೆ ಸಂತಸ ವ್ಯಕ್ತಪಡಿಸಿ ಶುಭ ಹಾರೈಸಿದರು. ಇದೇ ವೇಳೆ ಸ್ಯಾಂಡಲ್‌ವುಡ್‌ನ ಖ್ಯಾತ ನಟ ನೆನಪಿರಲಿ ಪ್ರೇಮ್‌ ಕೂಡ ಗ್ಯಾರಂಟಿ ನ್ಯೂಸ್‌ ಕಚೇರಿಗೆ ಆಗಮಿಸಿ, ಚಾನೆಲ್‌ಗೆ ಶುಭ ಹಾರೈಸಿ, ಮುಂದಿನ ದಿನಗಳಲ್ಲಿ ಇನ್ನಷ್ಟು ಸಾಧನೆ ಮಾಡಲಿ ಎಂದು ಆಶಿಸಿದರು.

ರಾಜ್ಯದ ಪ್ರತಿಷ್ಠಿತ ಮಾಧ್ಯಮ ಸಂಸ್ಥೆಗಳಲ್ಲಿ ದೀರ್ಘ ಅನುಭವ ಹೊಂದಿರುವ ಹಿರಿಯ ಪತ್ರಕರ್ತರು ಸೇರಿ ನಿರ್ಮಿಸಿರುವ ಈ  ಸಂಸ್ಥೆ ಯಾವುದೇ ಒತ್ತಡಗಳಿಗೆ ಒಳಗಾಗದೇ ನೈಜ ಸುದ್ದಿಗಳನ್ನು ಜನತೆಗೆ ತಲುಪಿಸುವ ಧ್ಯೇಯ ಹೊಂದಿದೆ.

ಡಿಜಿಟಲ್ ಮಾಧ್ಯಮದ ಮೂಲಕವೇ ತನ್ನ ಪಾದಾರ್ಪಣೆ ಮಾಡಿದ ಗ್ಯಾರಂಟಿ ನ್ಯೂಸ್, ಫೇಸ್ಬುಕ್, ಯೂಟ್ಯೂಬ್, ಟ್ವಿಟರ್ ಸೇರಿದಂತೆ ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಗಳನ್ನು ವಿಸ್ತರಿಸಿತು. ರಾಜ್ಯ, ದೇಶ ಹಾಗೂ ಅಂತರರಾಷ್ಟ್ರೀಯ ಮಟ್ಟದ ಸುದ್ದಿಗಳನ್ನು ಸಂಕ್ಷಿಪ್ತವಾಗಿ, ಸ್ಪಷ್ಟವಾಗಿ ಜನತೆಗೆ ತಲುಪಿಸುವಲ್ಲಿ ಇದು ಯಶಸ್ವಿಯಾಯಿತು.

Exit mobile version