ರೀಲ್ಸ್ ಹುಚ್ಚಿಗೆ ಮೂವರು ಬಾಲಕಿಯರು ಬಲಿ: ಜಲಪಾತದಲ್ಲಿ ಮುಳುಗಿ ಸಾ*ವು

Untitled design 2026 04 10T160024.910

ಹುಕುಂಪೇಟೆ/ಅಲ್ಲೂರಿ ಸೀತಾರಾಮರಾಜು ಜಿಲ್ಲೆ, ಏಪ್ರಿಲ್ 10: ಬೇಸಿಗೆ ರಜೆಯಲ್ಲಿ ಸ್ನೇಹಿತೆಯರೊಂದಿಗೆ ಪ್ರವಾಸಕ್ಕೆ ತೆರಳಿದ್ದ ಹದಿಹರೆಯದ ಹುಡುಗಿಯರಿಗೆ ರೀಲ್ಸ್ ಮಾಡುವ ಹುಚ್ಚು ಮತ್ತು ಸೆಲ್ಫಿ ವ್ಯಾಮೋಹವು ಪ್ರಾಣವನ್ನೇ ಕಸಿದುಕೊಂಡಿದೆ. ಅಲ್ಲೂರಿ ಸೀತಾರಾಮರಾಜು ಜಿಲ್ಲೆಯ ಅನಂತಗಿರಿ ಮಂಡಲದ ಮಲುಂಗುಮ್ಮಿ ಜಲಪಾತದಲ್ಲಿ ನಾಲ್ವರು ಸ್ನೇಹಿತೆಯರ ಪೈಕಿ ಮೂವರು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಗುರುವಾರ ಸಂಜೆ ಸಂಭವಿಸಿದೆ. ಈ ದುರಂತದ ಆಘಾತಕಾರಿ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಘಟನೆಯ ವಿವರ
ಹುಕುಂಪೇಟೆ ಮಂಡಲದ ಜಂಬುವಲಸ ಗ್ರಾಮದ ಸಾಲೇಪು ತ್ರಿಷಾ (17), ಸಾಲೇಪು ಪವಿತ್ರಾ (16), ಸಾಲೇಪು ರತ್ನಕುಮಾರಿ (16) ಮತ್ತು ಅಂಜಲಿ ಎಂಬ ನಾಲ್ವರು ಹುಡುಗಿಯರು ಗುರುವಾರ ಸಂಜೆ ಅನಂತಗಿರಿ ಮಂಡಲದ ಮಲುಂಗುಮ್ಮಿ ಜಲಪಾತಕ್ಕೆ ಪ್ರವಾಸಕ್ಕೆ ತೆರಳಿದ್ದರು. ಬಂಡೆಗಳ ಮೇಲೆ ನಿಂತು ಸೆಲ್ಫಿ ಹಾಗೂ ಇನ್ಸ್ಟಾಗ್ರಾಮ್ ರೀಲ್ಸ್ ಚಿತ್ರೀಕರಣ ನಡೆಸುತ್ತಿದ್ದರು. ದಡದಲ್ಲಿದ್ದ ಸ್ನೇಹಿತೆಯೊಬ್ಬರು ಅವರ ಫೋಟೋ ಕ್ಲಿಕ್ಕಿಸುತ್ತಿದ್ದಾಗ ಈ ಭೀಕರ ಅವಘಡ ಸಂಭವಿಸಿದೆ.

ರಕ್ಷಿಸಲು ಹೋಗಿ ಪ್ರಾಣ ಕಳೆದುಕೊಂಡರು
ಸೆಲ್ಫಿ ಮತ್ತು ವಿಡಿಯೋ ತೆಗೆಯುವ ಭರದಲ್ಲಿ ತ್ರಿಷಾ ಆಯತಪ್ಪಿ ಜಲಪಾತದ ಆಳವಾದ ನೀರಿನ ಸೆಳೆತಕ್ಕೆ ಬಿದ್ದಳು. ಅವಳನ್ನು ರಕ್ಷಿಸಲು ಪವಿತ್ರಾ, ರತ್ನಕುಮಾರಿ ಮತ್ತು ಅಂಜಲಿ ಕೂಡ ಒಬ್ಬರ ಹಿಂದೆ ಒಬ್ಬರಂತೆ ನೀರಿಗೆ ಧುಮುಕಿದರು. ಆದರೆ ನೀರಿನ ಪ್ರಬಲ ಸೆಳೆತ ಮತ್ತು ಆಳದಿಂದಾಗಿ ಅವರಿಗೆ ಈಜಲು ಸಾಧ್ಯವಾಗಲಿಲ್ಲ. ಸ್ಥಳೀಯರು ತಕ್ಷಣ ಅವರನ್ನು ಹೊರತೆಗೆದರೂ, ಅಷ್ಟರಲ್ಲೇ ತ್ರಿಷಾ, ರತ್ನಕುಮಾರಿ ಮತ್ತು ಪವಿತ್ರಾ ಉಸಿರುಗಟ್ಟಿ ಮೃತಪಟ್ಟಿದ್ದರು. ಅದೃಷ್ಟವಶಾತ್ ಅಂಜಲಿ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾಳೆ. ಆಕೆಗೆ ಸ್ಥಳೀಯ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಲಾಗಿದೆ.

ಒಂದೇ ಕುಟುಂಬದ ಮೂರು ಕಿರಣಗಳು ನಂದಿದವು
ಮೃತರಾದ ತ್ರಿಷಾ, ಪವಿತ್ರಾ ಮತ್ತು ರತ್ನಕುಮಾರಿ ಮೂವರೂ ಒಂದೇ ಕುಟುಂಬದ ಸಹೋದರರ ಮಕ್ಕಳಾಗಿದ್ದರು. ತ್ರಿಷಾ ಇತ್ತೀಚೆಗಷ್ಟೇ ಇಂಟರ್ಮೀಡಿಯಟ್ (ದ್ವಿತೀಯ ಪಿಯುಸಿ) ಪರೀಕ್ಷೆ ಮುಗಿಸಿ ಮನೆಗೆ ಬಂದಿದ್ದಳು. ಪವಿತ್ರಾ ಮತ್ತು ರತ್ನಕುಮಾರಿ ಹತ್ತನೇ ತರಗತಿವರೆಗೆ ಓದಿದ್ದು, ಮನೆಯಲ್ಲಿದ್ದರು. 

ಆಘಾತಕಾರಿ ವಿಡಿಯೋ ವೈರಲ್
ಈ ದುರಂತದ ಕೆಲವು ದೃಶ್ಯಗಳನ್ನು ಸ್ಥಳೀಯರು ಮೊಬೈಲ್ನಲ್ಲಿ ಸೆರೆಹಿಡಿದಿದ್ದು, ಅದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಡಿದೆ.

Exit mobile version