ಜಾತಿಗಣತಿ ಸಮೀಕ್ಷೆಗೆ ಹೋದ ಶಿಕ್ಷಕಿಯನ್ನೇ ಲಾಕ್ ಮಾಡಿದ ವ್ಯಕ್ತಿ: ಆರೋಪಿ ಪೊಲೀಸ್ ವಶಕ್ಕೆ

Untitled design 2025 10 09t123600.389

ಬೆಂಗಳೂರು: ಜಾತಿಗಣತಿ ಕರ್ತವ್ಯಕ್ಕೆ ತೆರಳಿದ್ದ ಶಿಕ್ಷಕಿಯನ್ನು ವ್ಯಕ್ತಿಯೊಬ್ಬ ಕಾಂಪೌಂಡ್‌ನಲ್ಲಿ ಕೂಡಿಹಾಕಿರುವ ಘಟನೆ  ಬೆಂಗಳೂರಿನ ಕೋತಿ ಹೊಸಹಳ್ಳಿಯಲ್ಲಿ ನಿನ್ನೆ ಸಂಜೆ ನಡೆದಿದೆ. ನಂತರ ಆ ಆರೋಪಿಯನ್ನು ಪೊಲೀಸರು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಶಿಕ್ಷಕಿ ಸುಶೀಲಮ್ಮ, ಸರ್ಕಾರಿ ಜಾತಿಗಣತಿಯ ಭಾಗವಾಗಿ ಕೋತಿ ಹೊಸಹಳ್ಳಿಯ ಒಂದು ಮನೆಗೆ ಭೇಟಿ ನೀಡಿದ್ದರು. ಅವರು ಆರೋಪಿ ಸಂದೀಪ್‌ನ ಮನೆಗೆ ತೆರಳಿ, “ನಾವು ಜಾತಿಗಣತಿಗೆ ಬಂದಿದ್ದೇವೆ, ದಯವಿಟ್ಟು ಐಡಿ ಕಾರ್ಡ್ ಮತ್ತು ಆಧಾರ್ ಕಾರ್ಡ್ ತೋರಿಸಿ” ಎಂದು ಕೇಳಿದ್ದಾರೆ. ಸಂದೀಪ್ ಈ ಸಂದರ್ಭದಲ್ಲಿ ಟೀ ಶಾಪ್ ನಡೆಸುತ್ತಿದ್ದು, ಶಿಕ್ಷಕಿಯ ಮಾತಿಗೆ ಕೋಪಗೊಂಡಿದ್ದಾನೆ. ಶಿಕ್ಷಕಿಯ ಕರ್ತವ್ಯಕ್ಕೆ ಅಡ್ಡಿಪಡಿಸುವ ಉದ್ದೇಶದಿಂದ, ಅವನು ಸುಶೀಲಮ್ಮನವರನ್ನು ತನ್ನ ಮನೆಯ ಕಾಂಪೌಂಡ್‌ನಲ್ಲಿ ಕೂಡಿಹಾಕಿದ್ದಾನೆ.

ಈ ಘಟನೆಯಿಂದ ಆತಂಕಗೊಂಡ ಸುಶೀಲಮ್ಮ, ತಕ್ಷಣವೇ ಪೊಲೀಸ್ ಕಂಟ್ರೋಲ್ ರೂಮ್‌ಗೆ 112 ಸಂಖ್ಯೆಗೆ ಕರೆ ಮಾಡಿದ್ದಾರೆ. ಕರೆಯನ್ನು ಸ್ವೀಕರಿಸಿದ ಕೊಡಗೇಹಳ್ಳಿ ಪೊಲೀಸರು ಸ್ಥಳಕ್ಕೆ ತಕ್ಷಣವೇ ಧಾವಿಸಿ, ಸುಶೀಲಮ್ಮನವರನ್ನು ಕಾಂಪೌಂಡ್‌ನಿಂದ ಸುರಕ್ಷಿತವಾಗಿ ಹೊರತಂದಿದ್ದಾರೆ. ಶಿಕ್ಷಕಿಯ ದೂರಿನ ಆಧಾರದ ಮೇಲೆ, ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಡಿಯಲ್ಲಿ ಸಂದೀಪ್‌ನ ವಿರುದ್ಧ ಕೊಡಗೇಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಆರೋಪಿಯನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

Exit mobile version