ಭಾರತದಲ್ಲಿ ಕೌಟುಂಬಿಕ ಮೌಲ್ಯಗಳು ಬದಲಾಗುತ್ತಿವೆಯೇ ಎಂಬ ಪ್ರಶ್ನೆ ಈಗ ಮೂಡುತ್ತಿದೆ. ಇದಕ್ಕೆ ಕಾರಣ ‘ಗ್ಲೀಡೆನ್’ (Gleeden) ನಂತಹ ವಿವಾಹೇತರ ಡೇಟಿಂಗ್ ಅಪ್ಲಿಕೇಶನ್‌ಗಳ ಬಳಕೆದಾರರ ಸಂಖ್ಯೆಯಲ್ಲಿ ಉಂಟಾಗಿರುವ ಭಾರಿ ಏರಿಕೆ. ಸದ್ಯದ ಅಂಕಿಅಂಶಗಳ ಪ್ರಕಾರ, ಸುಮಾರು 40 ಲಕ್ಷಕ್ಕೂ ಹೆಚ್ಚು ಭಾರತೀಯರು ಸಂಗಾತಿಗೆ ತಿಳಿಯದಂತೆ ಖಾಸಗಿ ಸಂಬಂಧಗಳನ್ನು ಹುಡುಕಲು ಈ ಆ್ಯಪ್ ಬಳಸುತ್ತಿದ್ದಾರೆ. ಈ ಪಟ್ಟಿಯಲ್ಲಿ ಕರ್ನಾಟಕದ ರಾಜಧಾನಿ ಬೆಂಗಳೂರು ಮೊದಲ ಸ್ಥಾನದಲ್ಲಿದೆ ಎಂಬುದು ಆಘಾತಕಾರಿ ವಿಷಯ.
ನಗರವಾರು ಬಳಕೆದಾರರ ಪಟ್ಟಿ
ಡಿಜಿಟಲ್ ಜಗತ್ತಿನಲ್ಲಿ ಸಂಬಂಧಗಳನ್ನು ಹುಡುಕುವ ಈ ಓಟದಲ್ಲಿ ಮೆಟ್ರೋ ನಗರಗಳು ಮುಂಚೂಣಿಯಲ್ಲಿವೆ. ಆ್ಯಪ್ ಬಳಕೆಯ ಒಟ್ಟು ಬಳಕೆದಾರರಲ್ಲಿ ನಗರವಾರು ಪಾಲು ನೋಡುವುದಾದರೆ, ಬೆಂಗಳೂರು ಶೇ. 18% (ಅಗ್ರ ಸ್ಥಾನ), ಹೈದರಾಬಾದ್ ಶೇ. 17%,ದೆಹಲಿ ಶೇ. 11%,ಮುಂಬೈ ಶೇ. 9%, ಪುಣೆ ಶೇ. 7% ಇಷ್ಟೇ ಅಲ್ಲದೆ ಲಕ್ನೋ, ಚಂಡೀಗಢ, ಸೂರತ್ ಮತ್ತು ಪಾಟ್ನಾದಂತಹ ಬೆಳೆಯುತ್ತಿರುವ ನಗರಗಳಲ್ಲೂ ಈ ಟ್ರೆಂಡ್ ವೇಗವಾಗಿ ಹರಡುತ್ತಿದೆ.
ಮಹಿಳಾ ಬಳಕೆದಾರರ ಸಂಖ್ಯೆಯಲ್ಲಿ ಭಾರಿ ಏರಿಕೆ
ಈ ವೇದಿಕೆಯಲ್ಲಿ ಶೇ. 65 ರಷ್ಟು ಪುರುಷರಿದ್ದರೆ, ಶೇ. 35 ರಷ್ಟು ಮಹಿಳೆಯರಿದ್ದಾರೆ. ಆದರೆ, ಕಳೆದ ಎರಡು ವರ್ಷಗಳಲ್ಲಿ ಮಹಿಳಾ ಬಳಕೆದಾರರ ಸಂಖ್ಯೆಯಲ್ಲಿ ಶೇ. 148 ರಷ್ಟು ಏರಿಕೆ ಕಂಡುಬಂದಿದೆ. ಇದು ಮಹಿಳೆಯರಲ್ಲಿ ಹೆಚ್ಚುತ್ತಿರುವ ಡಿಜಿಟಲ್ ಸ್ವಾತಂತ್ರ್ಯ ಮತ್ತು ಆಧುನಿಕ ಸಂಬಂಧಗಳ ಬಗ್ಗೆ ಬದಲಾಗುತ್ತಿರುವ ದೃಷ್ಟಿಕೋನವನ್ನು ಪ್ರತಿಬಿಂಬಿಸುತ್ತದೆ ಎಂದು ಗ್ಲೀಡೆನ್ ಇಂಡಿಯಾದ ಕಂಟ್ರಿ ಮ್ಯಾನೇಜರ್ ಸಿಬಿಲ್ ಶಿಡೆಲ್ ತಿಳಿಸಿದ್ದಾರೆ.
ಅಂಕಿಅಂಶಗಳ ಪ್ರಕಾರ, ಈ ಆ್ಯಪ್‌ನಲ್ಲಿರುವ ಹೆಚ್ಚಿನ ಪುರುಷರು 25 ರಿಂದ 30 ವರ್ಷ ವಯಸ್ಸಿನ ಮಹಿಳೆಯರೊಂದಿಗೆ ಚಾಟ್ ಮಾಡಲು ಬಯಸುತ್ತಾರೆ. ಇತ್ತ ಮಹಿಳೆಯರು ಸಾಮಾನ್ಯವಾಗಿ 30 ರಿಂದ 40 ವರ್ಷ ವಯಸ್ಸಿನ, ಆರ್ಥಿಕವಾಗಿ ಸ್ಥಿರವಾಗಿರುವ ಪುರುಷರನ್ನು ಹುಡುಕುತ್ತಾರೆ. ಅದರಲ್ಲೂ ವೈದ್ಯರು, ಚಾರ್ಟರ್ಡ್ ಅಕೌಂಟೆಂಟ್‌ಗಳು ಮತ್ತು ಹಿರಿಯ ಎಕ್ಸಿಕ್ಯೂಟಿವ್‌ಗಳಂತಹ ವೃತ್ತಿಪರರಿಗೆ ಮಹಿಳಾ ಬಳಕೆದಾರರಿಂದ ಹೆಚ್ಚಿನ ಬೇಡಿಕೆ ಇದೆ.
ಬಳಕೆಯ ಸಮಯ ಮತ್ತು ಶೈಲಿ
ಬಳಕೆದಾರರು ದಿನಕ್ಕೆ ಸರಾಸರಿ ಒಂದೂವರೆ ಗಂಟೆಗಳ ಕಾಲ ಈ ಆ್ಯಪ್‌ನಲ್ಲಿ ಕಳೆಯುತ್ತಾರೆ. ವಿಶೇಷವಾಗಿ ಮಧ್ಯಾಹ್ನ 12 ರಿಂದ 3 ಗಂಟೆಯ ನಡುವೆ (ಕಚೇರಿ ಬಿಡುವಿನ ವೇಳೆ) ಮತ್ತು ರಾತ್ರಿ 10 ರಿಂದ 12 ಗಂಟೆಯ ನಡುವೆ (ಮನೆಯವರು ನಿದ್ರಿಸಿದ ನಂತರ) ಆ್ಯಪ್ ಬಳಕೆ ಗರಿಷ್ಠ ಮಟ್ಟದಲ್ಲಿರುತ್ತದೆ.
ಭಾರತೀಯ ಸಾಂಸ್ಕೃತಿಕ ಚೌಕಟ್ಟಿನಲ್ಲಿ ಈ ಬದಲಾವಣೆಗಳು ದೊಡ್ಡ ಮಟ್ಟದ ಚರ್ಚೆಯನ್ನು ಹುಟ್ಟುಹಾಕಿವೆ. ಸಂಬಂಧಗಳಲ್ಲಿನ ಅತೃಪ್ತಿ ಅಥವಾ ಕೇವಲ ಒಂಟಿತನ ಜನರನ್ನು ಇಂತಹ ವೇದಿಕೆಗಳತ್ತ ಸೆಳೆಯುತ್ತಿದೆಯೇ ಎಂಬ ಅನುಮಾನ ಮೂಡುತ್ತಿದೆ.
