ನವದೆಹಲಿ: ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಅಂಬಾರಗೋಡು-ಕಳಸವಳ್ಳಿ ಸಿಗಂದೂರು ಸೇತುವೆಯ ಉದ್ಘಾಟನೆ ಕಾರ್ಯಕ್ರಮದ ಸಂದರ್ಭದಲ್ಲಿ ಕೇಂದ್ರ ಸರ್ಕಾರದಿಂದ ಶಿಷ್ಟಾಚಾರ ಉಲ್ಲಂಘನೆಯಾಗಿದೆ ಎಂಬ ಆರೋಪಕ್ಕೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಸ್ಪಷ್ಟನೆ ನೀಡಿದ್ದಾರೆ. ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಲು ಔಪಚಾರಿಕ ಆಹ್ವಾನವನ್ನು ಕಳುಹಿಸಲಾಗಿತ್ತು ಎಂದು ಗಡ್ಕರಿ ತಿಳಿಸಿದ್ದಾರೆ.
ಗಡ್ಕರಿಯ ಸ್ಪಷ್ಟನೆ
ನಿತಿನ್ ಗಡ್ಕರಿ ಅವರು ಎಕ್ಸ್‌ನಲ್ಲಿ ಬರೆದ ಪತ್ರದಲ್ಲಿ, ಸೇತುವೆ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವಂತೆ ಕೋರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಜುಲೈ 11ರಂದು ಅಧಿಕೃತ ಆಹ್ವಾನವನ್ನು ಕಳುಹಿಸಲಾಗಿತ್ತು ಎಂದು ತಿಳಿಸಿದ್ದಾರೆ. “ಮುಖ್ಯಮಂತ್ರಿಯವರು ಖುದ್ದು ಹಾಜರಾಗಲು ಸಾಧ್ಯವಾಗದಿದ್ದರೆ, ವಿಡಿಯೊ ಕಾನ್ಫರೆನ್ಸ್ ಮೂಲಕ ಕಾರ್ಯಕ್ರಮದಲ್ಲಿ ಭಾಗಿಯಾಗುವಂತೆ ಜುಲೈ 12ರಂದು ಕಳುಹಿಸಿದ ಪತ್ರದಲ್ಲಿ ತಿಳಿಸಲಾಗಿತ್ತು” ಎಂದು ಗಡ್ಕರಿ ಸ್ಪಷ್ಟಪಡಿಸಿದ್ದಾರೆ. ಕೇಂದ್ರ ಸರ್ಕಾರವು ಯಾವುದೇ ಶಿಷ್ಟಾಚಾರವನ್ನು ಉಲ್ಲಂಘಿಸಿಲ್ಲ ಎಂದು ಹೇಳಿದ ಅವರು, ಕರ್ನಾಟಕ ಸರ್ಕಾರದ ಸಹಕಾರವನ್ನು ಕೇಂದ್ರವು ಸದಾ ಶ್ಲಾಘಿಸುತ್ತದೆ ಎಂದಿದ್ದಾರೆ. ಒಕ್ಕೂಟ ವ್ಯವಸ್ಥೆಯನ್ನು ಬಲಪಡಿಸುವ ಉದ್ದೇಶದಿಂದ ಎಲ್ಲಾ ರಾಜ್ಯಗಳೊಂದಿಗೆ ಸಮನ್ವಯ ಸಾಧಿಸಲು ಕೇಂದ್ರ ಸರ್ಕಾರ ಬದ್ಧವಾಗಿದೆ ಎಂದು ಗಡ್ಕರಿ ತಿಳಿಸಿದ್ದಾರೆ.
In a major step towards boosting regional connectivity, the inauguration and foundation stone laying ceremony for multiple key infrastructure projects is being held today in Shivamogga, Karnataka.
An official invitation was duly extended to the Chief Minister of Karnataka, Shri… pic.twitter.com/yDPbRdsygd
— Nitin Gadkari (@nitin_gadkari) July 14, 2025
ಸಿದ್ದರಾಮಯ್ಯನವರ ಆಕ್ಷೇಪ
ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಸೇತುವೆ ಉದ್ಘಾಟನೆಯ ಕಾರ್ಯಕ್ರಮದ ಕರಡು ಆಹ್ವಾನ ಪತ್ರಿಕೆಯಲ್ಲಿ ತಮ್ಮ ಹೆಸರನ್ನು ಮುದ್ರಿಸಲಾಗಿದರೂ, ಈ ಬಗ್ಗೆ ಕೇಂದ್ರ ಸಚಿವಾಲಯದಿಂದ ಯಾವುದೇ ಮಾಹಿತಿಯನ್ನು ನೀಡಲಾಗಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಗಡ್ಕರಿಗೆ ಬರೆದ ಪತ್ರದಲ್ಲಿ, “ಕಾರ್ಯಕ್ರಮದ ಬಗ್ಗೆ ಯಾವುದೇ ಅಧಿಕೃತ ಮಾಹಿತಿಯನ್ನು ನನಗೆ ನೀಡಿಲ್ಲ. ಇಂತಹ ಕಾರ್ಯಕ್ರಮಗಳನ್ನು ಆಯೋಜಿಸುವ ಮುನ್ನ ರಾಜ್ಯ ಸರ್ಕಾರದೊಂದಿಗೆ ಸಮಾಲೋಚನೆ ನಡೆಸಬೇಕು” ಎಂದು ತಿಳಿಸಿದ್ದಾರೆ. ಸಾಧ್ಯವಾದರೆ ಕಾರ್ಯಕ್ರಮವನ್ನು ಮುಂದೂಡುವಂತೆ ಕೇಳಿಕೊಂಡಿದ್ದ ಅವರು, ಭವಿಷ್ಯದಲ್ಲಿ ಇಂತಹ ಘಟನೆಗಳನ್ನು ತಪ್ಪಿಸಲು ಕೇಂದ್ರ ಸಚಿವಾಲಯಕ್ಕೆ ಸೂಕ್ತ ನಿರ್ದೇಶನ ನೀಡುವಂತೆ ವಿನಂತಿಸಿದ್ದಾರೆ.
ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಅಂಬಾರಗೋಡು-ಕಳಸವಳ್ಳಿ ಸೇತುವೆಯು ಸಿಗಂದೂರು ಶಾರದಾಂಬೆ ದೇವಸ್ಥಾನಕ್ಕೆ ಭಕ್ತರಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ಸೇತುವೆಯಾಗಿದೆ. ಈ ಸೇತುವೆಯು ಸ್ಥಳೀಯರಿಗೆ ಸಂಚಾರ ಸೌಲಭ್ಯವನ್ನು ಒದಗಿಸುವುದರ ಜೊತೆಗೆ, ಈ ಭಾಗದ ಪ್ರವಾಸೋದ್ಯಮವನ್ನು ಉತ್ತೇಜಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಜುಲೈ 14ರಂದು ಭಾರೀ ಮಳೆಯ ನಡುವೆಯೂ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಈ ಸೇತುವೆಯನ್ನು ಲೋಕಾರ್ಪಣೆ ಮಾಡಿದರು.





