ಪ್ರಶಾಂತ್ ಎಸ್, ಪ್ರೋಗ್ರಾಂ ಪ್ರೊಡ್ಯೂಸರ್
ಮಾರ್ಚ್ 22ರಂದು ಕರ್ನಾಟಕ ಸ್ತಬ್ಧವಾಗಲಿದೆ. ಮಹಾರಾಷ್ಟ್ರ ಹಾಗೂ ಬೆಳಗಾವಿ ಭಾಗದಲ್ಲಿ ಮರಾಠಿಗರ ದಬ್ಬಾಳಿಕೆ, ಪುಂಡಾಟಿಕೆ ಖಂಡಿಸಿ ವಿವಿಧ ಕನ್ನಡಪರ ಸಂಘಟನೆಗಳು ಕರ್ನಾಟಕ ಬಂದ್‌ಗೆ ಕರೆ ನೀಡಿವೆ. ಹಾಗಾದರೆ ಆ ದಿನ ಏನಿರುತ್ತೆ..? ಏನಿರಲ್ಲ..? ಮಾರ್ಚ್ ತಿಂಗಳ ಹೋರಾಟ ಹೇಗಿರುತ್ತೆ..? ಅನ್ನೋ ಸಂಪೂರ್ಣ ಮಾಹಿತಿ ಮುಂದಿದೆ ಓದಿ..
ಕನ್ನಡ ಮಾತಾಡಿದಕ್ಕೆ ಕೆಎಸ್ಆರ್ಟಿಸಿ ಬಸ್ ಕಂಡಕ್ಟರ್ ಮೇಲೆ ಮರಾಠಿ ಪುಂಡರು ಹಲ್ಲೆ ಮಾಡಿದ ಪ್ರಕರಣ ಸದ್ಯಕ್ಕೆ ತಣ್ಣಗಾಗುವ ಲಕ್ಷಣಗಳು ಕಾಣುತ್ತಿಲ್ಲ. ಕೆಲ ಮರಾಠಿ ಕಿಡಿಗೇಡಿಗಳು ಕನ್ನಡಿಗರ ತಾಳ್ಮೆ ಹಾಗೂ ಸ್ವಾಭಿಮಾನವನ್ನ ಕೆಣಕುವ ಕೃತ್ಯವನ್ನು ಮುಂದುವರೆಸಿದ್ದಾರೆ. ಮಹಾರಾಷ್ಟ್ರದಲ್ಲಿ ಕೆಎಸ್ಆರ್ಟಿಸಿ ಬಸ್ ಸಿಬ್ಬಂದಿಗಳ ಮೇಲೆ ಹಲ್ಲೆ, ಬಸ್‌ಗಳಿಗೆ ಮಸಿ ಬಳಿದು ಪುಂಡಾಟಿಕೆ ಮೆರೆಯುತ್ತಿದ್ದಾರೆ. ದಿನದಿಂದ ದಿನಕ್ಕೆ ಮರಾಠಿಗರ ಗೂಂಡಾಗಿರಿ ಎಲ್ಲೆ ಮೀರಿದ್ದು ಕಲ್ಯಾಣ ಕರ್ನಾಟಕ ಸಾರಿಗೆ ಬಸ್ ಡ್ರೈವರ್ ಮುಖಕ್ಕೆ ಮಸಿ ಬಳಿದಿದ್ದಲ್ಲದೇ ಜೈ ಮಹಾರಾಷ್ಟ್ರ ಎಂದು ಕೂಗುವಂತೆ ಹಿಂಸೆ ನೀಡಿದ್ದಾರೆ.
ಮಹಾರಾಷ್ಟ್ರ ಹಾಗೂ ಬೆಳಗಾವಿ ಗಡಿಯಲ್ಲಿ ಪ್ರಕ್ಷುಬ್ಧ ವಾತಾವರಣ ಸೃಷ್ಟಿಯಾಗಿದೆ. ಪದೇ ಪದೇ ಗಾಂಚಾಲಿ ತೋರಿಸುತ್ತಿರುವ ಮರಾಠಿ ಭಾಷಿಕರಿಗೆ ಬುದ್ದಿ ಕಲಿಸಲು ಕನ್ನಡಪರ ಸಂಘಟನೆಗಳು ರಣಕಹಳೆ ಮೊಳಗಿಸಿವೆ. ಮರಾಠಿಗರ ಅಟ್ಟಹಾಸ ವಿರೋಧಿ ಹಾಗೂ ಕನ್ನಡಿಗರ ಪರವಾಗಿ, ಕರ್ನಾಟಕದ ಪರವಾಗಿ ಮಹತ್ವದ ನಿರ್ಧಾರ ಕೈಗೊಳ್ಳಲು ಮುಂದಾಗಿವೆ. ಹೀಗಾಗಿ ಕನ್ನಡ ಒಕ್ಕೂಟ- ಕರ್ನಾಟಕ ರಾಜ್ಯ ಅಧ್ಯಕ್ಷ ಹಾಗೂ ಕನ್ನಡ ಪರ ಮುಂಚೂಣಿ ಹೋರಾಟಗಾರ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಸಭೆ ನಡೆಸಲಾಯಿತು. ವಿವಿಧ ಕನ್ನಡಪರ ಸಂಘಟನೆಗಳ ನಾಯಕರು, ಅಧ್ಯಕ್ಷರು, ಕಾರ್ಯಕರ್ತರು ಚರ್ಚಿಸಿ ಮಾರ್ಚ್ 22 ರಂದು ಅಖಂಡ ಕರ್ನಾಟಕ ಬಂದ್‌ಗೆ ನಿರ್ಧರಿಸಿದ್ದಾರೆ.
ಬೆಂಗಳೂರಿನ ವುಡ್ ಲ್ಯಾಂಡ್ಸ್ ಹೋಟೆಲ್‌ನಲ್ಲಿ ಸಭೆ ನಡೆಸಿದ ನಂತರ ಮಾತನಾಡಿದ ವಾಟಾಳ್ ನಾಗರಾಜ್ ಅವರು, ಕನ್ನಡಕ್ಕಾಗಿ, ಕನ್ನಡಿಗರಿಗಾಗಿ, ಕನ್ನಡಿಗರ ಮರ್ಯಾದೆಗಾಗಿ ಮಾರ್ಚ್ 22 ಅಖಂಡ ಕರ್ನಾಟಕ ಬಂದ್ ಮಾಡಲಾಗುವುದು ಅಂತ ಹೇಳಿದ್ದಾರೆ. ಮರಾಠಿಗರ ದಬ್ಬಾಳಿಕೆ ವಿರುದ್ಧ ಮಾರ್ಚ್ ತಿಂಗಳ ಹೋರಾಟ ವಿವರವನ್ನೂ ತಿಳಿಸಿದ್ದಾರೆ.
ಮಾರ್ಚ್ 3ರಂದು ರಾಜಭವನ ಮುತ್ತಿಗೆ ಹಾಕಲಾಗವುದು. ಮಾರ್ಚ್ 7ರಂದು ಬೆಳಗಾವಿ ಚಲೋ ಹೋರಾಟಕ್ಕೆ ಕರೆ ನೀಡಲಾಗಿದೆ. ಇನ್ನು ಮಾರ್ಚ್ 11ರಂದು ಮೇಕೆದಾಟಿಗಾಗಿ ಅತ್ತಿಬೆಲೆಯಲ್ಲಿ ತಮಿಳುನಾಡು ಗಡಿ ಬಂದ್ ಮಾಡಿ, ನಾಡಿನ ಹಿತ ಕಾಪಾಡುವಂತೆ ಸರ್ಕಾರಕ್ಕೆ ಒತ್ತಡ ಹೇರುವ ಕೆಲಸವನ್ನು ಕನ್ನಡಪರ ಹೋರಾಟಗಾರರು ಮಾಡಲಿದ್ದಾರೆ. ಮಾರ್ಚ್ 14ರಂದು ರಾಮನಗರ, ಮಂಡ್ಯ, ಮೈಸೂರು ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ಮಾಡಲಿದ್ದಾರೆ. ಮಾರ್ಚ್ 17ರಂದು ಹೊಸಕೋಟೆ -ಚೆನ್ನೈ ಹೆದ್ದಾರಿ ತಡೆ ಮಾಡುವುದಾಗಿ ವಾಟಳ್ ನಾಗರಾಜ್ ತಿಳಿಸಿದ್ದಾರೆ.
ಮಾರ್ಚ್ 22ರಂದು ಬೆಳಿಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆವರೆಗೆ ಕರ್ನಾಟಕ ಬಂದ್‌ಗೆ ಕರೆ ನೀಡಲಾಗಿದೆ. ಅಖಂಡ ಕರ್ನಾಟಕ ಬಂದ್ ದಿನ ಔಷಧಿ ಅಂಗಡಿ, ಸರ್ಕಾರಿ, ಖಾಸಗಿ ಆಸ್ಪತ್ರೆಗಳು, ಮಕ್ಕಳ ಆಸ್ಪತ್ರೆ, ಆ್ಯಂಬುಲೆನ್ಸ್ ಸೇರಿ ತುರ್ತು ಸೇವೆ ಇರಲಿದೆ. ಇವುಗಳಿಗೆ ಯಾವುದೇ ರೀತಿಯ ನಿರ್ಬಂಧ ಇರಲ್ಲ. ಉಳಿದಂತೆ ಎಲ್ಲವನ್ನು ಬಂದ್ ಮಾಡಲಾಗುವುದು ಎಂದು ತಿಳಿಸಿದ್ದಾರೆ.