ಕರ್ನಾಟಕ ವಿಧಾನಸಭೆಯಲ್ಲಿ ಗ್ಯಾರಂಟಿ ಯೋಜನೆ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಭಾರೀ ಗದ್ದಲ ಉಂಟಾಗಿದೆ. ತುರುವೇಕೆರೆ ಶಾಸಕ ಕೃಷ್ಣಪ್ಪ ಈ ಯೋಜನೆ ಕುರಿತು ಗಂಭೀರ ಪ್ರಶ್ನೆಗಳ ಸುರಿಮಳೆ ಸುರಿಸಿದ್ದು, ಕಾಂಗ್ರೆಸ್ ಕಾರ್ಯಕರ್ತರಿಗೆ ಸಂಬಳ ನೀಡಲಾಗುತ್ತಿದೆ, ಅದು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು. ಅವರ ಈ ಮಾತಿಗೆ ಬೆಂಬಲ ಸೂಚಿಸಿದ ಅನೇಕ ಬಿಜೆಪಿ ಶಾಸಕರು ಸದನದಲ್ಲಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಸರ್ಕಾರದ ವಿರುದ್ಧ ಬಿಜೆಪಿ ಆಕ್ರೋಶ
ಬಿಜೆಪಿ ಶಾಸಕ ಆರ್. ಅಶೋಕ್ ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದು, “ಡಿಕೆ ಶಿವಕುಮಾರ್ ಅಧ್ಯಕ್ಷರಾದ ನಂತರ, ಕಾಂಗ್ರೆಸ್ ಪಾರ್ಟಿ ಮತ್ತು ಸರ್ಕಾರದ ನಡುವೆ ವ್ಯತ್ಯಾಸವೇ ಇಲ್ಲ. ಅಂಗನವಾಡಿ ಕಾರ್ಯಕರ್ತರಿಗೆ ಸಹಾಯ ಮಾಡಲು ಹಣವಿಲ್ಲ, ಆದರೆ ಕಾಂಗ್ರೆಸ್ ಕಾರ್ಯಕರ್ತರಿಗೆ ಸಂಬಳ ನೀಡಲಾಗುತ್ತಿದೆ. ಇದು ಹೇಗೆ ಸಾಧ್ಯ?” ಎಂದು ಪ್ರಶ್ನಿಸಿದರು.
ಸರ್ಕಾರದ ನೇಮಕಾತಿ ಪ್ರಕ್ರಿಯೆ ಬಗ್ಗೆ ಪ್ರಶ್ನೆ ಮಾಡಿರುವ ಅಶೋಕ್, ಸರ್ಕಾರದ “ನೇಮಕಾತಿ ಮಾಡುತ್ತಿರುವವರು ಯಾವ ವಿದ್ಯಾರ್ಹತೆ ಹೊಂದಿದ್ದಾರೆ? ಡಾಕ್ಟರೇಟ್ ಅಥವಾ SSLC ಮಟ್ಟದ ವಿದ್ಯಾಭ್ಯಾಸವೇ ಅವರ ಅರ್ಹತೆ?” ಎಂದು ವ್ಯಂಗ್ಯವಾಡಿದರು. ಕಾಂಗ್ರೆಸ್ ಪಾರ್ಟಿಗೆ ಹಣ ಇಲ್ಲ ಅಂದ್ರೆ ಭಿಕ್ಷೆ ಬೇಡಿ ಹಣ ಪಡೆಯಿರಿ, ಟ್ಯಾಕ್ಸ್ ಹಣ ಯಾಕೆ ಕಾಂಗ್ರೆಸ್ ಕಾರ್ಯಕರ್ತರಿಗೆ ನೀಡುತ್ತೀರಿ ಎಂದರು. ಆರ್ ಅಶೋಕ್ ಅವರ ಈ ಹೇಳಿಕೆಗೆ ಸುನೀಲ್ ಕುಮಾರ್ ಅವರೂ ಬೆಂಬಲ ವ್ಯಕ್ತಪಡಿಸಿದರು.
ಡಿಕೆ ಶಿವಕುಮಾರ್ ಪ್ರತಿಕ್ರಿಯೆ
ಬಿಜೆಪಿಯ ಆರೋಪಗಳಿಗೆ ಪ್ರತಿಕ್ರಿಯೆ ನೀಡಿದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್, “ನಾವು ಯಾವುದೇ ಚರ್ಚೆಗೆ ಸಿದ್ಧ. ಬಜೆಟ್ ಕುರಿತು ಚರ್ಚಿಸಲು ಬನ್ನಿ. ನಮ್ಮ ಕಾರ್ಯಕರ್ತರಿಗೆ ಸಂಬಳ ಪಡೆಯುವ ಹಕ್ಕಿದೆ. ಇದು ಸರ್ಕಾರದ ಯೋಜನೆಯ ಭಾಗವಾಗಿದೆ” ಎಂದು ಸಮರ್ಥಿಸಿಕೊಂಡರು. ಅವರ ಈ ಹೇಳಿಕೆಗೆ ಬಿಜೆಪಿ ಸದಸ್ಯರು ತೀವ್ರ ವಿರೋಧ ವ್ಯಕ್ತಪಡಿಸಿದರು, ಇದರಿಂದಾಗಿ ಸದನದಲ್ಲಿ ಗದ್ದಲ ಉಂಟಾಗಿ, ಅದು ಹತ್ತು ನಿಮಿಷ ಮುಂದೂಡಲ್ಪಟ್ಟಿತು.
ಕಲಾಪವನ್ನು ಸುಗಮವಾಗಿ ನಡೆಸಲು ಸ್ಪೀಕರ್ ಕಚೇರಿಯಲ್ಲಿ ಸಂಧಾನ ಸಭೆ ನಡೆಸಿದ್ದು, ಸಭೆಯಲ್ಲಿ ಸಚಿವ ಕೃಷ್ಣಭೈರೇಗೌಡ ಹಾಗೂ ಮಾಜಿ ಸಚಿವ ಸುನೀಲ್ ಕುಮಾರ್ ನಡುವೆ ವಾಕ್ಸಮರ ನಡೆಯಿತು.