ಬಹುನಿರೀಕ್ಷಿತ ಕನ್ನಡ ಚಲನಚಿತ್ರ ಕಾಂತಾರ ಚಾಪ್ಟರ್ 1 ಬಿಡುಗಡೆಗೆ ಮುನ್ನವೇ ಸಾಮಾಜಿಕ ಮಾಧ್ಯಮದಲ್ಲಿ ಒಂದು ವಿವಾದಕ್ಕೆ ಕೇಂದ್ರಬಿಂದುವಾಗಿದೆ. ಚಿತ್ರದ ಪ್ರಚಾರ ಕಾರ್ಯಕ್ರಮಗಳು ಪೂರ್ಣಗತಿಯಲ್ಲಿರುವ ಈ ಸಮಯದಲ್ಲಿ, ಚಿತ್ರ ನೋಡುವ ಪ್ರೇಕ್ಷಕರು ಮಾಂಸಾಹಾರ ತಿನ್ನಬಾರದು, ಧೂಮಪಾನ ಮಾಡಬಾರದು ಎಂಬ ವಿಷಯವನ್ನು ನಮೂದಿಸಿದ ಒಂದು ನಕಲಿ (ಫೇಕ್) ಪೋಸ್ಟರ್ ವೈರಲ್ ಆಗಿರುವುದು ಗಮನಕ್ಕೆ ಬಂದಿದೆ. ಈ ಬಗ್ಗೆ ಮಾತನಾಡಿದ ನಚಿತ್ರದ ನಿರ್ದೇಶಕ ರಿಷಬ್ ಶಟ್ಟಿ ಪೋಸ್ಟರ್ ಅಧಿಕೃತವಲ್ಲ, ಸುಳ್ಳು ಸುದ್ದಿ ಎಂದು ಸ್ಪಷ್ಟ ಪಡಿಸಿದ್ದಾರೆ.
ವಿವಾದದ ಮೂಲ ಮತ್ತು ಚಿತ್ರತಂಡದ ಪ್ರತಿಕ್ರಿಯೆ
ಸೆಪ್ಟೆಂಬರ್ 22, 2025 ರಂದು ಬೆಂಗಳೂರಿನಲ್ಲಿ ನಡೆದ ಒಂದು ಪತ್ರಿಕಾ ಸಮ್ಮೇಳನದಲ್ಲಿ, ಈ ವಿವಾದದ ಬಗ್ಗೆ ರಿಷಬ್ ಶೆಟ್ಟಿ ಅವರನ್ನು ಪ್ರಶ್ನಿಸಲಾಗಿತ್ತು. ಇದಕ್ಕೆ ಪ್ರತಿಕ್ರಿಯಿಸಿದ ಅವರು, “ಊಟೋಪಚಾರಗಳನ್ನು, ಅವರವರ ಅಭ್ಯಾಸಗಳನ್ನು ಪ್ರಶ್ನಿಸೋಕೆ ಯಾರಿಗೂ ಅಧಿಕಾರ ಇರಲ್ಲ. ಅದೆಲ್ಲ ಅವರವರ ಸ್ವಂತ ವಿವೇಚನೆಗೆ ಬಿಟ್ಟಂತಹ ವಿಚಾರಗಳು” ಎಂದು ಹೇಳಿದ್ದಾರೆ .
ಈ ಪೋಸ್ಟರ್‌ಗೂ ಹಾಗೂ ನಮ್ಮ ಪ್ರೊಡಕ್ಷನ್ ಹೌಸ್‌ಗೂ ಯಾವುದೇ ಸಂಬಂಧವಿಲ್ಲ ಎಂದು ರಿಷಬ್ ಶೆಟ್ಟಿ ಪ್ರತಿಕ್ರಿಯಿಸಿದ್ದಾರೆ. ಇಂತಹ ಕಾರ್ಯಗಳು ಸಿನಿಮಾ ಜನಪ್ರಿಯವಾಗಿರುವಾಗ ತಮ್ಮ ವಿಚಾರವನ್ನು ಮುಂದಿಡಲು ಕೆಲವರು ಮಾಡುವ ಪ್ರಯತ್ನಗಳೆಂದು ತಿಳಿಸಿದರು. ಈ ನಕಲಿ ಪೋಸ್ಟರ್ ಅನ್ನು ನೋಡಿದಾಗ ತಂಡಕ್ಕೆ ಆಶ್ಚರ್ಯವಾಗಿದ್ದು, ಅದರ ಬಗ್ಗೆ ತಕ್ಷಣವೇ ಆಂತರಿಕವಾಗಿ ಚರ್ಚಿಸಲಾಗಿದೆ ಎಂದು ಹೇಳಿದರು. ಅಂತಿಮವಾಗಿ ಆ ಪೋಸ್ಟರ್ ಅನ್ನು ಸೃಷ್ಟಿಸಿದ ವ್ಯಕ್ತಿಯೇ ಅದನ್ನು ತೆಗೆದುಹಾಕಿ ಕ್ಷಮೆಯಾಚಿಸಿದ್ದಾನೆ ಎಂದು ರಿಷಬ್ ಶೆಟ್ಟಿ ತಿಳಿಸಿದ್ದಾರೆ.