ಕಲಬುರಗಿ : ಆಪ್ತ ಸ್ನೇಹಿತನಿಂದಲೇ ಯುವಕನೊಬ್ಬ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಕಲಬುರಗಿ ಜಿಲ್ಲೆಯ ಕಮಲಾಪುರ ತಾಲೂಕಿನ ಮುರಡಿ ಗ್ರಾಮದಲ್ಲಿ ನಡೆದಿದೆ.
28 ವರ್ಷದ ಅಂಬರೀಶ್ ಎಂಬ ಯುವಕನನ್ನು ಆತನ ಸ್ನೇಹಿತ ಅಜಯ್ ಹಾಗೂ ಆತನ ಗೆಳೆಯರು ವೈರ್‌ನಿಂದ ಕುತ್ತಿಗೆ ಬಿಗಿದು ಕೊಲೆ ಮಾಡಿದ್ದಾರೆ. ಈ ಘಟನೆಗೆ ಅಜಯ್‌ನ ಪತ್ನಿಯೊಂದಿಗೆ ಅಂಬರೀಶ್‌ನ ಅಕ್ರಮ ಸಂಬಂಧವೇ ಕಾರಣ ಎಂದು ತಿಳಿದುಬಂದಿದೆ. ಕೊಲೆಯಾದ ಬಳಿಕ ಅಜಯ್ ಸ್ವತಃ ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದು, ನಂತರ ನೇರವಾಗಿ ನರೋಣಾ ಪೊಲೀಸ್ ಠಾಣೆಗೆ ಹೋಗಿ ಶರಣಾಗಿದ್ದಾನೆ.
ಘಟನೆಯ ವಿವರ
ಅಂಬರೀಶ್ ಹಾಗೂ ಅಜಯ್ ಇಬ್ಬರು ಆಪ್ತ ಸ್ನೇಹತರು. ಆದರೆ, ಅಜಯ್‌ನ ಪತ್ನಿಯೊಂದಿಗೆ ಅಂಬರೀಶ್‌ಗೆ ಅಕ್ರಮ ಸಂಬಂಧವಿತ್ತು ಎಂಬ ಶಂಕೆಯಿಂದ ಈ ಕೊಲೆ ನಡೆದಿದೆ. ಕೆಲವು ದಿನಗಳ ಹಿಂದೆ ಅಜಯ್‌ನ ಪತ್ನಿ ಮನೆಯನ್ನು ತೊರೆದು ಹೋಗಿದ್ದರು. ಈ ವಿಷಯದಲ್ಲಿ ಮಾತುಕತೆಗಾಗಿ ಅಂಬರೀಶ್‌ನನ್ನು ಬೆಂಗಳೂರಿನಿಂದ ಕಲಬುರಗಿಯ ಮುರಡಿ ಗ್ರಾಮಕ್ಕೆ ಕರೆತರಲಾಗಿತ್ತು. ಅಜಯ್ ತನ್ನ ಪತ್ನಿಯನ್ನು ತನ್ನೊಂದಿಗೆ ಇರಲು ಒಪ್ಪಿಸುವಂತೆ ಅಂಬರೀಶ್‌ನಿಗೆ ಹೇಳಿದ್ದ. ಆದರೆ, ಈ ಸಂಧಾನದ ವೇಳೆಯೇ ಅಜಯ್ ತನ್ನ ಗೆಳೆಯರೊಂದಿಗೆ ಸೇರಿಕೊಂಡು ತನ್ನ ಮನೆಯಲ್ಲಿಯೇ ಅಂಬರೀಶ್‌ನನ್ನು ವೈರ್‌ನಿಂದ ಕುತ್ತಿಗೆ ಬಿಗಿದು ಕೊಲೆ ಮಾಡಿದ್ದಾನೆ.
ಕೊಲೆಯಾದ ತಕ್ಷಣ ಅಜಯ್ ಪೊಲೀಸರಿಗೆ ಕರೆ ಮಾಡಿ, ತಾನೇ ಸ್ನೇಹಿತನನ್ನು ಕೊಲೆ ಮಾಡಿರುವುದಾಗಿ ತಿಳಿಸಿದ್ದಾನೆ. ಬಳಿಕ ಯಾವುದೇ ತಡವಿಲ್ಲದೆ ನರೋಣಾ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದಾನೆ. ಪೊಲೀಸರು ಘಟನೆಯ ಕುರಿತು ಎಫ್‌ಐಆರ್ ದಾಖಲಿಸಿಕೊಂಡಿದ್ದು, ತನಿಖೆಯನ್ನು ಆರಂಭಿಸಿದ್ದಾರೆ. ಅಂಬರೀಶ್‌ನ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.
ನರೋಣಾ ಪೊಲೀಸ್ ಠಾಣೆಯಲ್ಲಿ ಈ ಘಟನೆಗೆ ಸಂಬಂಧಿಸಿದಂತೆ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 302 (ಕೊಲೆ) ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಅಜಯ್ ಮತ್ತು ಆತನ ಗೆಳೆಯರನ್ನು ವಶಕ್ಕೆ ಪಡೆದಿರುವ ಪೊಲೀಸರು, ಘಟನೆಯ ಸಂಪೂರ್ಣ ವಿವರವನ್ನು ತನಿಖೆಯ ಮೂಲಕ ಕಂಡುಹಿಡಿಯಲು ಪ್ರಯತ್ನಿಸುತ್ತಿದ್ದಾರೆ.





