ಚಿಕ್ಕಮಗಳೂರು (ಡಿ.25): ರಜಾದಿನಗಳ ಹಿನ್ನಲೆಯಲ್ಲಿ ಕರ್ನಾಟಕದ ಪ್ರಮುಖ ಪ್ರವಾಸಿ ತಾಣಗಳು ಪ್ರವಾಸಿಗರಿಂದ ತುಂಬಿ ತುಳುಕುತ್ತಿವೆ. ಅದರಲ್ಲೂ ಚಿಕ್ಕಮಗಳೂರು ಜಿಲ್ಲೆಯ ಮುಳ್ಳಯ್ಯನಗಿರಿ, ದತ್ತಪೀಠ ಸೇರಿದಂತೆ ವಿವಿಧ ಪ್ರವಾಸಿ ಹಾಗೂ ಧಾರ್ಮಿಕ ಸ್ಥಳಗಳಿಗೆ ಭಾರಿ ಸಂಖ್ಯೆಯಲ್ಲಿ ಜನರು ಹರಿದು ಬರುತ್ತಿದ್ದಾರೆ. ಇದರ ಪರಿಣಾಮವಾಗಿ ಪ್ರಮುಖ ರಸ್ತೆಗಳಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದ್ದು, ಪ್ರವಾಸಿಗರು ಗಂಟೆಗಟ್ಟಲೇ ರಸ್ತೆಯಲ್ಲೇ ಕಾಯುವಂತಾಗಿದೆ. ಈ ಭಾರಿ ಜನದಟ್ಟಣೆಯ ನಡುವೆಯೇ ದುರ್ಘಟನೆಯೊಂದು ಸಂಭವಿಸಿದ್ದು, ದತ್ತಪೀಠದಿಂದ ಹಿಂದಿರುಗುತ್ತಿದ್ದ ಪ್ರವಾಸಿಗರ ಜೀಪ್ ಪಲ್ಟಿಯಾದ ಪರಿಣಾಮ ಏಳು ಮಂದಿ ಗಾಯಗೊಂಡಿದ್ದಾರೆ.
ಮುಳ್ಳಯ್ಯನಗಿರಿ ಮಾರ್ಗದ ತಿಪ್ಪನಹಳ್ಳಿ ಎಸ್ಟೇಟ್ ಕ್ರಾಸ್ ಬಳಿ ಈ ಅಪಘಾತ ಸಂಭವಿಸಿದೆ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಮೂಲದ ಏಳು ಮಂದಿ ಪ್ರವಾಸಿಗರು ತಮ್ಮ ಜೀಪ್ ಮೂಲಕ ಚಿಕ್ಕಮಗಳೂರಿಗೆ ಆಗಮಿಸಿದ್ದರು. ಕೆಲಸಕ್ಕೆ ರಜೆ ಇದ್ದ ಕಾರಣ ಪ್ರವಾಸದ ಉದ್ದೇಶದಿಂದ ಕುಟುಂಬ ಸಮೇತರಾಗಿ ಧಾರ್ಮಿಕ ಕ್ಷೇತ್ರವಾದ ದತ್ತಪೀಠಕ್ಕೆ ತೆರಳಿದ್ದರು. ದತ್ತಪೀಠ ದರ್ಶನ ಮುಗಿಸಿಕೊಂಡು ಮರಳುವ ವೇಳೆ ತಿರುವುಗಳಿರುವ ಮುಳ್ಳಯ್ಯನಗಿರಿ ಮಾರ್ಗದಲ್ಲಿ ಚಾಲಕನ ನಿಯಂತ್ರಣ ತಪ್ಪಿ ಜೀಪ್ ಪಲ್ಟಿಯಾಗಿದೆ.
ಅಪಘಾತದಿಂದ ಜೀಪ್‌ನಲ್ಲಿದ್ದ ಏಳು ಮಂದಿಗೂ ಗಾಯಗಳಾಗಿವೆ. ಸ್ಥಳೀಯರು ಹಾಗೂ ಇತರೆ ಪ್ರವಾಸಿಗರು ತಕ್ಷಣವೇ ನೆರವಿಗೆ ಧಾವಿಸಿ, ಅವರನ್ನು ಚಿಕ್ಕಮಗಳೂರು ಜಿಲ್ಲಾಸ್ಪತ್ರೆಗೆ ರವಾನಿಸಿದ್ದಾರೆ. ಗಾಯಾಳುಗಳು ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರ ಸ್ಥಿತಿ ಗಂಭೀರವಲ್ಲ ಎಂದು ವೈದ್ಯರು ತಿಳಿಸಿದ್ದಾರೆ.
ರೈತ ಸಮಾವೇಶಕ್ಕೆ ತೆರಳುವಾಗ ಭೀಕರ ಅಪಘಾತ: ವಾಹನ ಪಲ್ಟಿಯಾಗಿ 30ಕ್ಕೂ ಹೆಚ್ಚು ಮಂದಿಗೆ ಗಾಯ
ಬೆಳಗಾವಿ: ಮೈಸೂರಿನಲ್ಲಿ ಆಯೋಜಿಸಲಾಗಿರುವ ಬಹುನಿರೀಕ್ಷಿತ ‘ವಿಶ್ವ ರೈತ ಸಮಾವೇಶ’ಕ್ಕೆ ಹೊರಟಿದ್ದ ರೈತರ ವಾಹನವೊಂದು ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಜಾಲಿಕ್ಕೊಪ್ಪ ಗ್ರಾಮದ ಬಳಿ ನಿಯಂತ್ರಣ ತಪ್ಪಿ ಪಲ್ಟಿಯಾದ ಪರಿಣಾಮ 30ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ಚಾಲಕನ ನಿಯಂತ್ರಣ ತಪ್ಪಿದ ವಾಹನ
ಸೋಮವಾರ ಮುಂಜಾನೆ ಬೈಲಹೊಂಗಲ ತಾಲೂಕಿನ ಗರಜೂರ ಗ್ರಾಮದ ರೈತರು ಮತ್ತು ಮಹಿಳೆಯರು ದೊಡ್ಡ ಸಂಖ್ಯೆಯಲ್ಲಿ ಮೈಸೂರಿಗೆ ತೆರಳಲು ವಾಹನವೊಂದನ್ನು ಏರಿದ್ದರು. ಆದರೆ, ಜಾಲಿಕ್ಕೊಪ್ಪ ಗ್ರಾಮದ ಸಮೀಪ ಬರುತ್ತಿದ್ದಂತೆ ಚಾಲಕನ ನಿಯಂತ್ರಣ ತಪ್ಪಿದ ವಾಹನವು ರಸ್ತೆಯ ಬದಿಗೆ ಉರುಳಿ ಬಿದ್ದಿದೆ. ವಾಹನ ಪಲ್ಟಿಯಾಗುತ್ತಿದ್ದಂತೆ ಒಳಗಿದ್ದ ಪ್ರಯಾಣಿಕರ ಆಕ್ರಂದನ ಮುಗಿಲು ಮುಟ್ಟಿತ್ತು.
9 ಜನರಿಗೆ ಗಂಭೀರ ಗಾಯ
ಈ ಅಪಘಾತದಲ್ಲಿ ಒಟ್ಟು 30ಕ್ಕೂ ಹೆಚ್ಚು ರೈತರು ಗಾಯಗೊಂಡಿದ್ದು, ಅವರಲ್ಲಿ 9ಕ್ಕೂ ಹೆಚ್ಚು ಜನರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ. ಗಾಯಾಳುಗಳ ಕೈ, ಕಾಲು ಮತ್ತು ಬೆನ್ನಿನ ಭಾಗಕ್ಕೆ ಬಲವಾದ ಪೆಟ್ಟು ಬಿದ್ದಿದೆ. ಅಪಘಾತ ನಡೆದ ಕೂಡಲೇ ಸ್ಥಳೀಯರು ಗಾಯಾಳುಗಳನ್ನು ವಾಹನದಿಂದ ಹೊರತೆಗೆಯಲು ಸಹಾಯ ಮಾಡಿದ್ದಾರೆ.
ಆಸ್ಪತ್ರೆಗೆ ದಾಖಲು ಮತ್ತು ತನಿಖೆ
ಗಾಯಾಳುಗಳನ್ನು ತಕ್ಷಣವೇ ಬೈಲಹೊಂಗಲ ಮತ್ತು ಬೆಳಗಾವಿಯ ಜಿಲ್ಲಾ ಆಸ್ಪತ್ರೆಗಳಿಗೆ ರವಾನಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನಾ ಸ್ಥಳಕ್ಕೆ ಬೈಲಹೊಂಗಲ ಪೊಲೀಸ್ ಠಾಣೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಪ್ರೇಕ್ಷಣೀಯ ಸ್ಥಳದಲ್ಲಿ ಕೊಳಕ್ಕೆ ಬಿದ್ದು ತಾಯಿ-ಮಗಳು ಸಾ*ವು
ಕನಕಪುರ ತಾಲೂಕಿನ ಹೊಸದುರ್ಗ ಗ್ರಾಮದ ಸಮೀಪವಿರುವ ರಾಮದೇವರ ಬೆಟ್ಟದ ಕೊಳದಲ್ಲಿ ಬಿದ್ದು ತಾಯಿ ಮತ್ತು ಮಗಳು ಮೃತಪಟ್ಟಿರುವ ದಾರುಣ ಘಟನೆ ನಡೆದಿದೆ.
ಬೆಂಗಳೂರಿನ ಕೆಂಗೇರಿ ನಿವಾಸಿಗಳಾದ ಭಾಗ್ಯಲಕ್ಷ್ಮಿ (35) ಮತ್ತು ಅವರ ಪುತ್ರಿ ಚಾರ್ವಿ (16) ಮೃತಪಟ್ಟ ದುರ್ದೈವಿಗಳು. ಭಾನುವಾರ ಕುಟುಂಬ ಸಮೇತ ರಾಮದೇವರ ಬೆಟ್ಟಕ್ಕೆ ಪ್ರವಾಸಕ್ಕೆ ತೆರಳಿದ್ದರು. ಈ ಸಂದರ್ಭದಲ್ಲಿ ಬೆಟ್ಟದ ಮೇಲಿರುವ ಕೊಳದ ಬಳಿ ನಡೆದು ಹೋಗುವಾಗ ಪುತ್ರಿ ಚಾರ್ವಿ ಆಕಸ್ಮಿಕವಾಗಿ ಕಾಲು ಜಾರಿ ನೀರಿಗೆ ಬಿದ್ದಿದ್ದಾಳೆ. ತಾಯಿ ಭಾಗ್ಯಲಕ್ಷ್ಮಿ, ಆಕೆಯನ್ನು ರಕ್ಷಿಸಲು ತಕ್ಷಣವೇ ಕೊಳಕ್ಕೆ ಜಿಗಿದಿದ್ದಾರೆ.ನೀರಿ ಆಳ ಹೆಚ್ಚಿದ್ದರಿಂದ ಇಬ್ಬರಿಗೂ ಈಜಿ ಮೇಲೆ ಬರಲು ಸಾಧ್ಯವಾಗದೆ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.
ಭಾಗ್ಯಲಕ್ಷ್ಮಿ ಅವರ ಪತಿ ಜೀವನ್ ಅವರು ಸ್ಥಳದಲ್ಲೇ ಇದ್ದರೂ, ನೀರಿನ ರಭಸಕ್ಕೆ ಇಬ್ಬರನ್ನೂ ರಕ್ಷಿಸಲು ಸಾಧ್ಯವಾಗಲಿಲ್ಲ ಎಂದು ಪತಿ ಜೀವನ್ ತಿಳಿಸಿದ್ದಾರೆ. ಸ್ಥಳೀಯರ ಮಾಹಿತಿ ಮೇರೆಗೆ ಸ್ಥಳಕ್ಕೆ ಧಾವಿಸಿದ ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ, ಮೃತದೇಹಗಳನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.





