ಹಾಸನ: ಜನತಾದಳ ಪಕ್ಷದ ರಜತ ಮಹೋತ್ಸವದ ಅಂಗವಾಗಿ ಹಾಸನದಲ್ಲಿ ಇಂದು ಬೃಹತ್ ಜನತಾ ಸಮಾವೇಶಕ್ಕೆ ವೇದಿಕೆ ಸಜ್ಜಾಗಿದೆ. ‘ದಳ ಕೋಟೆ’ ಎಂದೇ ಪ್ರಸಿದ್ಧವಾಗಿರುವ ಹಾಸನ ಜಿಲ್ಲೆಯ ಬೂವನಹಳ್ಳಿಯಲ್ಲಿ ಬೆಳಗ್ಗೆ 11 ಗಂಟೆಗೆ ನಡೆಯಲಿರುವ ಈ ಮಹಾಸಮಾವೇಶಕ್ಕೆ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಹಾಗೂ ಮಾಜಿ ಸಚಿವ ಹೆಚ್.ಡಿ. ರೇವಣ್ಣ ಅವರ ನೇತೃತ್ವ ವಹಿಸಿದ್ದು, ಕಾಂಗ್ರೆಸ್ ವಿರುದ್ಧ ರಾಜಕೀಯ ಅಬ್ಬರ ನಡೆಸಲು ಜೆಡಿಎಸ್ ಸಜ್ಜಾಗಿದೆ.
ಕಾರ್ಯಕ್ರಮಕ್ಕೆ ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠರಾದ ಹೆಚ್.ಡಿ. ದೇವೇಗೌಡರು ಸಹ ಭಾಗವಹಿಸಲಿದ್ದು, ಈ ಸಮಾವೇಶವು ಪಕ್ಷಕ್ಕೆ ಮರುಜೀವ ತುಂಬುವ ಉದ್ದೇಶದೊಂದಿಗೆ ಆಯೋಜಿಸಲಾಗಿದೆ. ಮುಂದಿನ ಲೋಕಸಭೆ ಹಾಗೂ ವಿಧಾನಸಭಾ ಚುನಾವಣೆಗಳ ಹಿನ್ನೆಲೆ ಪಕ್ಷದ ಶಕ್ತಿಪ್ರದರ್ಶನಕ್ಕೆ ಇದು ಪ್ರಮುಖ ವೇದಿಕೆಯಾಗಿದೆ. ಸಮಾವೇಶದಲ್ಲಿ ಒಂದೂವರೆ ಲಕ್ಷಕ್ಕೂ ಹೆಚ್ಚು ಕಾರ್ಯಕರ್ತರು ಹಾಗೂ ಅಭಿಮಾನಿಗಳು ಸೇರುವ ನಿರೀಕ್ಷೆಯಿದ್ದು, ಇದಕ್ಕಾಗಿ ಭದ್ರತೆ ದೃಷ್ಟಿಯಿಂದ ಹೆಚ್ಚುವರಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
ಕಾರ್ಯಕ್ರಮಕ್ಕೂ ಮುನ್ನ ದೇವೇಗೌಡರ ಕುಟುಂಬದ ಮನೆ ದೇವರಾದ ದೇವೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ಬೆಳಗ್ಗೆ ದೇವೇಗೌಡರು ದೇವೇಶ್ವರನಿಗೆ ಪೂಜೆ ಸಲ್ಲಿಸಿ ನಂತರ ಸಮಾವೇಶ ಸ್ಥಳಕ್ಕೆ ಆಗಮಿಸಲಿದ್ದಾರೆ. ಮಧ್ಯಾಹ್ನ 12 ಗಂಟೆ ವೇಳೆಗೆ ಅವರು ಬೃಹತ್ ವೇದಿಕೆಗೆ ಪ್ರವೇಶಿಸಲಿದ್ದಾರೆ. ಇದೇ ವೇಳೆ ಶೃಂಗೇರಿ ಶಾರದಾಂಬ ದೇವಿಯ ಮಂಟಪವನ್ನು ನಿರ್ಮಿಸಿ ವಿಶೇಷ ಪೂಜಾ ವಿಧಿಗಳನ್ನು ನೆರವೇರಿಸಲಾಗುತ್ತಿದೆ. ಸಮಾವೇಶಕ್ಕೂ ಮುನ್ನ ದೇವೇಗೌಡರ ಕುಟುಂಬ ಶಾರದಾಂಬೆಗೆ ನಮಿಸಿ ಆಶೀರ್ವಾದ ಪಡೆಯಲಿದೆ.
ಈ ಬೃಹತ್ ಕಾರ್ಯಕ್ರಮದಲ್ಲಿ ಜೆಡಿಎಸ್‌ನ ಎಲ್ಲಾ 19 ಶಾಸಕರು, ಸಂಸದರು, ಮಾಜಿ ಸಚಿವರು, ಮಾಜಿ ಶಾಸಕರು, ಪಕ್ಷದ ಪ್ರಮುಖ ನಾಯಕರು, ಯುವ ಘಟಕ ಹಾಗೂ ಮಹಿಳಾ ಘಟಕದ ಮುಖಂಡರು ಭಾಗಿಯಾಗಲಿದ್ದಾರೆ. ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ, ಮಾಜಿ ಸಚಿವ ಹೆಚ್.ಡಿ. ರೇವಣ್ಣ, ನಿಖಿಲ್ ಕುಮಾರಸ್ವಾಮಿ ಸೇರಿದಂತೆ ಅನೇಕ ನಾಯಕರು ವೇದಿಕೆಯಲ್ಲಿ ಭಾಗವಹಿಸಿ ಕಾರ್ಯಕರ್ತರನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ.
ಹಾಸನ ನಗರ ಸಂಪೂರ್ಣವಾಗಿ ಜೆಡಿಎಸ್ ಮಯವಾಗಿದ್ದು, ಎಲ್ಲೆಡೆ ಫ್ಲೆಕ್ಸ್, ಬ್ಯಾನರ್, ಬಾವುಟಗಳು ಹಾಗೂ ಬೃಹತ್ ಕಟೌಟ್‌ಗಳು ರಾರಾಜಿಸುತ್ತಿವೆ. ನಗರದ ಪ್ರಮುಖ ವೃತ್ತಗಳು, ರಸ್ತೆ ಬದಿಗಳು ಹಾಗೂ ಪ್ರಮುಖ ಸ್ಥಳಗಳಲ್ಲಿ ಪಕ್ಷದ ಬಾವುಟಗಳು ಹಾರಾಡುತ್ತಿದ್ದು, ಕಾರ್ಯಕರ್ತರಲ್ಲಿ ಅಪಾರ ಉತ್ಸಾಹ ಕಂಡುಬರುತ್ತಿದೆ. ಸಮಾವೇಶಕ್ಕಾಗಿ ವಿಶೇಷವಾಗಿ ನಿರ್ಮಿಸಲಾದ ವೇದಿಕೆ, ಬೆಳಕು ಅಲಂಕಾರ, ಶಬ್ದ ವ್ಯವಸ್ಥೆ ಮತ್ತು ಭದ್ರತಾ ವ್ಯವಸ್ಥೆ ಗಮನ ಸೆಳೆಯುತ್ತಿದೆ.





