ಚಿತ್ರದುರ್ಗ ಜಿಲ್ಲೆಯ ಕಾಂಗ್ರೆಸ್ ಶಾಸಕ ಕೆ.ಸಿ. ವೀರೇಂದ್ರ ಪಪ್ಪಿಗೆ ಜಾರಿ ನಿರ್ದೇಶನಾಲಯ (ಇಡಿ) ಮತ್ತೊಂದು ಶಾಕ್ ನೀಡಿದೆ. ಚಳ್ಳಕೆರೆ ನಗರದ ಹಲವು ಬ್ಯಾಂಕ್‌ಗಳ ಮೇಲೆ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದು, ಶಾಸಕರಿಗೆ ಸಂಬಂಧಿಸಿದ 17 ಬ್ಯಾಂಕ್ ಖಾತೆಗಳ ಕುರಿತು ತೀವ್ರ ಪರಿಶೀಲನೆ ನಡೆಸಿದ್ದಾರೆ.
ಚಳ್ಳಕೆರೆಯ ಕೊಟಕ್ ಮಹೀಂದ್ರ ಬ್ಯಾಂಕ್, ಆಕ್ಸಿಸ್ ಬ್ಯಾಂಕ್, ಫೆಡರಲ್ ಬ್ಯಾಂಕ್, ಕರ್ನಾಟಕ ಬ್ಯಾಂಕ್ ಸೇರಿದಂತೆ ಹಲವು ಬ್ಯಾಂಕ್‌ಗಳ ಮೇಲೆ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ನಾಲ್ಕು ಇನ್ನೋವಾ ಕಾರುಗಳಲ್ಲಿ ಆಗಮಿಸಿದ 10ಕ್ಕೂ ಹೆಚ್ಚು ಇಡಿ ಅಧಿಕಾರಿಗಳ ತಂಡವು ಬ್ಯಾಂಕ್‌ಗಳು ತೆರೆಯುತ್ತಿದ್ದಂತೆಯೇ ಒಳಗೆ ಹೋಗಿ ದಾಖಲೆಗಳನ್ನು ಪರಿಶೀಲಿಸಿದೆ. ಶಾಸಕ ಕೆ.ಸಿ. ವೀರೇಂದ್ರ ಪಪ್ಪಿಗೆ ಸಂಬಂಧಿಸಿದ ಬ್ಯಾಂಕ್ ಖಾತೆಗಳು ಮತ್ತು ಲಾಕರ್‌ಗಳ ಕುರಿತು ವಿವರವಾದ ತನಿಖೆ ನಡೆಸಲಾಗುತ್ತಿದ್ದು, ಇಂದು ಲಾಕರ್‌ಗಳನ್ನು ತೆರೆಯುವ ಸಾಧ್ಯತೆಯಿದೆ.
ಈ ದಾಳಿಯ ಹಿನ್ನೆಲೆಯಲ್ಲಿ ಶಾಸಕ ವೀರೇಂದ್ರ ಪಪ್ಪಿಯವರ ಆರ್ಥಿಕ ಚಟುವಟಿಕೆಗಳ ಮೇಲೆ ಗಂಭೀರ ಆರೋಪಗಳು ಕೇಳಿಬಂದಿವೆ. ಅಕ್ರಮ ಹಣ ವರ್ಗಾವಣೆ ಮತ್ತು ಆನ್‌ಲೈನ್ ಬೆಟ್ಟಿಂಗ್ ದಂಧೆಯ ಆರೋಪದಡಿಯಲ್ಲಿ ಇಡಿ ತನಿಖೆ ನಡೆಸುತ್ತಿದೆ. ಈಗಾಗಲೇ ಆಗಸ್ಟ್ 22 ರಂದು ಶಾಸಕರ ಚಳ್ಳಕೆರೆಯ ನಿವಾಸದ ಮೇಲೆ ಇಡಿ ದಾಳಿ ನಡೆಸಿತ್ತು. ಆ ದಾಳಿಯಲ್ಲಿ 55 ಕೋಟಿ ರೂಪಾಯಿಗಳಷ್ಟು ಹಣವನ್ನು ಜಪ್ತಿ ಮಾಡಲಾಗಿತ್ತು, ಜೊತೆಗೆ 9 ಬ್ಯಾಂಕ್ ಖಾತೆಗಳು, ಒಂದು ಡಿಮ್ಯಾಟ್ ಖಾತೆ, ಮತ್ತು 262 ಮ್ಯೂಲ್ ಖಾತೆಗಳನ್ನು ಫ್ರೀಜ್ ಮಾಡಲಾಗಿತ್ತು.





