ಸಿಲಿಕಾನ್ ಸಿಟಿ ಬೆಂಗಳೂರು ಹೊರವಲಯದಲ್ಲಿ ಅನಧಿಕೃತ ಪಿಜಿಗಳ ಹಾವಳಿ ಹೆಚ್ಚಾಗಿದ್ದು, ನಿಯಮ ಉಲ್ಲಂಘಿಸಿ ಕಟ್ಟಡ ನಿರ್ಮಿಸಿ ವಸತಿ ಸೌಲಭ್ಯ ಹೆಸರಿನಲ್ಲಿ ವಾಣಿಜ್ಯ ಚಟುವಟಿಕೆ ನಡೆಸಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಇದೀಗ ಇಂತಹ ಅಕ್ರಮ ಪಿಜಿಗಳ ವಿರುದ್ಧ ಪಂಚಾಯಿತಿ ಅಧಿಕಾರಿಗಳು ಕಾರ್ಯಾಚರಣೆಗೆ ಮುಂದಾಗಿದ್ದು, 35ಕ್ಕೂ ಹೆಚ್ಚು ಪಿಜಿಗಳಿಗೆ ನೋಟಿಸ್ ಜಾರಿ ಮಾಡಿದ್ದಾರೆ.
ಆನೇಕಲ್ ತಾಲೂಕಿನ ಬ್ಯಾಗಡದೇನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅನಧಿಕೃತ ಪಿಜಿಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ ಎನ್ನಲಾಗಿದೆ. ಈಡನ್ ಗಾರ್ಡನ್, ನಕ್ಷತ್ರ ಲೇಔಟ್ ಹಾಗೂ ಶ್ರೀ ಸಾಯಿ ಬಡಾವಣೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಿಜಿಗಳು ತಲೆ ಎತ್ತಿವೆ. ಕಟ್ಟಡ ನಿರ್ಮಾಣಕ್ಕೆ ಪಡೆಯಲಾದ ಅನುಮತಿಯನ್ನು ಮೀರಿ ಬಹುಮಹಡಿ ಕಟ್ಟಡಗಳನ್ನು ನಿರ್ಮಿಸಿ ಪಿಜಿಗಳಾಗಿ ಪರಿವರ್ತಿಸಲಾಗಿದೆ ಎಂಬ ಆರೋಪವಿದೆ.
ಪಂಚಾಯಿತಿ ನಿಯಮಗಳ ಪ್ರಕಾರ ಎರಡು ಅಂತಸ್ತಿನ ಕಟ್ಟಡ ನಿರ್ಮಾಣಕ್ಕೆ ಅನುಮತಿ ಪಡೆದು, ಬಳಿಕ ಆರರಿಂದ ಏಳು ಅಂತಸ್ತಿನವರೆಗೆ ಕಟ್ಟಡಗಳನ್ನು ನಿರ್ಮಿಸಲಾಗಿದೆ ಎನ್ನಲಾಗಿದೆ. ಕಟ್ಟಡಗಳ ಸುತ್ತಲೂ ಕಡ್ಡಾಯವಾಗಿ ಬಿಡಬೇಕಾದ ಸೆಟ್ಬ್ಯಾಕ್ ಪ್ರದೇಶವನ್ನೂ ನಿಯಮಬಾಹಿರವಾಗಿ ಬಳಸಿಕೊಳ್ಳಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಇದಲ್ಲದೆ, ಪಿಜಿ ನಡೆಸಲು ಅಗತ್ಯವಿರುವ ಅನುಮತಿಗಳನ್ನು ಪಡೆಯದೆ ವಸತಿ ವ್ಯವಸ್ಥೆ ಕಲ್ಪಿಸಲಾಗುತ್ತಿದೆ ಎನ್ನಲಾಗಿದೆ.
ನೀರಿನ ಬಳಕೆ ಹಾಗೂ ತ್ಯಾಜ್ಯ ನಿರ್ವಹಣೆ ಸೇರಿದಂತೆ ಅಗತ್ಯ ಮೂಲಸೌಕರ್ಯಗಳ ಬಗ್ಗೆಯೂ ಸೂಕ್ತ ಕ್ರಮ ಕೈಗೊಂಡಿಲ್ಲ ಎಂಬ ಆರೋಪವಿದೆ. ನಿರ್ದಿಷ್ಟವಾಗಿ ಅಲಯನ್ಸ್ ಕಾಲೇಜಿನ ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡು ಪಿಜಿಗಳನ್ನು ನಡೆಸಲಾಗುತ್ತಿದ್ದು, ದುಪ್ಪಟ್ಟು ದರದಲ್ಲಿ ಬಾಡಿಗೆ ಅಥವಾ ಪಿಜಿ ಶುಲ್ಕ ವಸೂಲಿ ಮಾಡಲಾಗುತ್ತಿದೆ ಎಂಬ ಆರೋಪವೂ ಸ್ಥಳೀಯರಿಂದ ಕೇಳಿಬಂದಿದೆ.
ಈ ಎಲ್ಲ ಆರೋಪಗಳ ಹಿನ್ನೆಲೆಯಲ್ಲಿ ಬ್ಯಾಗಡದೇನಹಳ್ಳಿ ಗ್ರಾಮ ಪಂಚಾಯಿತಿ ಅಧಿಕಾರಿಗಳು ಅಖಾಡಕ್ಕಿಳಿದಿದ್ದಾರೆ. ಈಗಾಗಲೇ ನಿರ್ಮಾಣಗೊಂಡಿರುವ 35ಕ್ಕೂ ಹೆಚ್ಚು ಅನಧಿಕೃತ ಪಿಜಿಗಳಿಗೆ ನೋಟಿಸ್ ಜಾರಿ ಮಾಡಲಾಗಿದ್ದು, 15 ದಿನಗಳ ಗಡುವು ನೀಡಲಾಗಿದೆ.
ಎರಡು ಅಂತಸ್ತಿಗಿಂತ ಮೇಲಿನ ಕಟ್ಟಡಗಳಲ್ಲಿ ವಾಸಿಸುತ್ತಿರುವವರನ್ನು ಬೇರೆಡೆಗೆ ಸ್ಥಳಾಂತರಿಸುವಂತೆ ಅಧಿಕಾರಿಗಳು ಸೂಚಿಸಿದ್ದಾರೆ. ಮೇಲಿನ ಅಂತಸ್ತುಗಳಲ್ಲಿ ಇರಿಸಲಾಗಿರುವ ವಸ್ತುಗಳನ್ನೂ ತೆರವುಗೊಳಿಸಬೇಕು ಎಂದು ಎಚ್ಚರಿಕೆ ನೀಡಿದ್ದಾರೆ. ಸೂಚನೆ ಪಾಲಿಸದಿದ್ದರೆ ಕಟ್ಟಡಗಳನ್ನೇ ಸೀಜ್ ಮಾಡುವ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ನೋಟಿಸ್ನಲ್ಲಿ ಎಚ್ಚರಿಸಲಾಗಿದೆ ಎನ್ನಲಾಗಿದೆ.
ಇದಕ್ಕೂ ಮುನ್ನವೇ ನಿರ್ಮಾಣ ಹಂತದಲ್ಲಿದ್ದ 16ಕ್ಕೂ ಹೆಚ್ಚು ಕಟ್ಟಡಗಳ ವಿರುದ್ಧ ಪಂಚಾಯಿತಿ ಅಧಿಕಾರಿಗಳು ಕ್ರಮ ಕೈಗೊಂಡಿದ್ದರು. ಸುಮಾರು ಒಂದು ವಾರದ ಹಿಂದೆ ಅನಧಿಕೃತವಾಗಿ ನಿರ್ಮಾಣವಾಗುತ್ತಿದ್ದ ಕಟ್ಟಡಗಳನ್ನು ಸೀಜ್ ಮಾಡಲಾಗಿತ್ತು. ಇದೀಗ ಪೂರ್ಣಗೊಂಡು ಪಿಜಿಗಳಾಗಿ ಕಾರ್ಯನಿರ್ವಹಿಸುತ್ತಿರುವ ಕಟ್ಟಡಗಳ ಮೇಲೂ ಕ್ರಮ ಕೈಗೊಳ್ಳಲಾಗಿದೆ.
ಹೊರರಾಜ್ಯಗಳಿಂದ ಬಂದು ಕೆಲವರು ಇಲ್ಲಿ ವಸತಿ ಉದ್ದೇಶಕ್ಕಾಗಿ ನಿರ್ಮಿಸಲಾದ ಲೇಔಟ್ಗಳನ್ನು ವಾಣಿಜ್ಯ ಚಟುವಟಿಕೆಗೆ ಬಳಸಿಕೊಂಡು ಪಿಜಿ ದಂಧೆ ನಡೆಸುತ್ತಿದ್ದಾರೆ ಎಂಬ ಆರೋಪ ಸ್ಥಳೀಯರಿಂದ ಕೇಳಿಬಂದಿದೆ. ನಿಯಮ ಉಲ್ಲಂಘಿಸಿ ನಿರ್ಮಿಸಿರುವ ಕಟ್ಟಡಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ಒಟ್ಟಿನಲ್ಲಿ, ಆನೇಕಲ್ ಹೊರವಲಯದಲ್ಲಿ ಹೆಚ್ಚುತ್ತಿರುವ ಅನಧಿಕೃತ ಪಿಜಿಗಳ ವಿರುದ್ಧ ಪಂಚಾಯಿತಿ ಅಧಿಕಾರಿಗಳು ನೋಟಿಸ್ ಮೂಲಕ ಮೊದಲ ಹಂತದ ಕ್ರಮ ಕೈಗೊಂಡಿದ್ದಾರೆ.





