ನೆಲಮಂಗಲ, ಡಿಸೆಂಬರ್ 12: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದ ಸರ್ಕಾರಿ ಆಸ್ಪತ್ರೆಯ ಆವರಣದಲ್ಲಿ ಮಾನವ ತಲೆಬುರುಡೆ ಪತ್ತೆಯಾಗಿದೆ. ಆಸ್ಪತ್ರೆಯ ಕಸ ಬಿಸಾಡುವ ಸ್ಥಳದಲ್ಲಿ ಇದ್ದಕ್ಕಿದ್ದಂತೆ ಕಂಡುಬಂದ ಈ ತಲೆಬುರುಡೆ, ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ವೈದ್ಯರು, ರೋಗಿಗಳು ಹಾಗೂ ಸಾರ್ವಜನಿಕರು ಬೆಚ್ಚಿಬಿದ್ದಿದ್ದು, ಪೊಲೀಸರು ತನಿಖೆಗೆ ಮುಂದಾಗಿದ್ದಾರೆ.
ಘಟನೆಯ ವಿವರ
ನೆಲಮಂಗಲ ಸರ್ಕಾರಿ ಆಸ್ಪತ್ರೆಯ ಆವರಣದಲ್ಲಿ ಸ್ವಚ್ಛತಾ ಕಾರ್ಯಕ್ರಮ ನಡೆಯುತ್ತಿತ್ತು. ಆಸ್ಪತ್ರೆಯ ಸಿಬ್ಬಂದಿ ಕಸದ ರಾಶಿಯನ್ನು ಸ್ವಚ್ಛಗೊಳಿಸುವ ಸಂದರ್ಭದಲ್ಲಿ ಈ ತಲೆಬುರುಡೆ ಕಂಡುಬಂದಿದೆ. ಆಸ್ಪತ್ರೆಯ ಅಡ್ಮಿನಿಸ್ಟ್ರೇಟಿವ್ ಮೆಡಿಕಲ್ ಆಫೀಸರ್ (ಎಎಮ್‌ಒ) ಡಾ. ಸೋನಿಯಾ ಅವರು ಈ ಬಗ್ಗೆ ಮಾತನಾಡಿ, “ಸ್ವಚ್ಛತಾ ಅಭಿಯಾನದಲ್ಲಿ ಕಸದ ಮಧ್ಯೆ ತಲೆಬುರುಡೆ ಪತ್ತೆಯಾಗಿದೆ. ಇದು ನಾಲ್ಕೈದು ವರ್ಷಗಳ ಹಳೆಯದೆಂದು ಶಂಕಿಸಲಾಗಿದೆ. ನೆಲಮಂಗಲ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದೇವೆ. ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದು, ತನಿಖೆಯನ್ನು ಮುಂದುವರಿಸುವುದಾಗಿ ತಿಳಿಸಿದ್ದಾರೆ” ಎಂದು ಹೇಳಿದ್ದಾರೆ.
ನೆಲಮಂಗಲ ಪೊಲೀಸ್ ಠಾಣೆಯ ಅಧಿಕಾರಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿ, ತಲೆಬುರುಡೆಯನ್ನು ವಶಪಡಿಸಿಕೊಂಡಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ ಇದು ಮಾನವನ ತಲೆಬುರುಡೆಯೇ ಎಂದು ದೃಢಪಡಿಸಲಾಗಿದ್ದು, ಫಾರೆನ್ಸಿಕ್ ಪರೀಕ್ಷೆಗಾಗಿ ಕಳುಹಿಸಲಾಗಿದೆ.
ಗೌರಿ ಹಬ್ಬದ ದಿನವೇ ಕಸದಲ್ಲಿ ಮನುಷ್ಯನ ಮೂಳೆಗಳು ಪತ್ತೆ
ಬೆಂಗಳೂರು: ಗೌರಿ ಹಬ್ಬದ ದಿನವೇ ಕಸದ ರಾಶಿಯಲ್ಲಿ ಮನುಷ್ಯನ ತಲೆಬುರುಡೆ, ಕೈ ಮತ್ತು ಕಾಲಿನ ಮೂಳೆಗಳು ಪತ್ತೆಯಾಗಿದ್ದು, ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯ ಸಮೀಪದ ಗೋವಿಂದಶೆಟ್ಟಿಪಾಳ್ಯದಲ್ಲಿ ಕಂಡು ಬಂದಿದೆ. ಕಸ ಸುರಿಯಲು ಬಂದ ಸ್ಥಳೀಯ ಜನರು ಈ ಭಯಾನಕ ದೃಶ್ಯವನ್ನು ಕಂಡು ದಿಗ್ಭ್ರಮೆಗೊಂಡಿದ್ದಾರೆ.
ಗೌರಿ ಹಬ್ಬದ ದಿನ, ಎಂದಿನಂತೆ ಗೋವಿಂದಶೆಟ್ಟಿಪಾಳ್ಯದ ಜನರು ತಮ್ಮ ಮನೆಯ ಕಸವನ್ನು ಸುರಿಯಲು ಸ್ಥಳೀಯ ಕಸದ ರಾಶಿಗೆ ತೆರಳಿದ್ದರು. ಆದರೆ, ಕಸದ ರಾಶಿಯಲ್ಲಿ ಮನುಷ್ಯನ ಮೂಳೆಗಳು ಕಂಡುಬಂದಾಗ ಎಲ್ಲರೂ ಒಮ್ಮೆಗೆ ಆಘಾತಕ್ಕೊಳಗಾದರು. ತಲೆಬುರುಡೆಯ ಜೊತೆಗೆ ಕೈ ಮತ್ತು ಕಾಲಿನ ಮೂಳೆಗಳು ಪತ್ತೆಯಾಗಿವೆ. ಈ ದೃಶ್ಯವನ್ನು ಕಂಡ ಜನರು ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದರು. ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ಮೂಳೆಗಳನ್ನು ವಶಪಡಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
ಈ ಘಟನೆಯಿಂದ ಸ್ಥಳೀಯರಲ್ಲಿ ಹಲವಾರು ಊಹಾಪೋಹಗಳು ಹರಡಿವೆ. ಕೆಲವರು ಈ ಮೂಳೆಗಳನ್ನು ಮಾಟಮಂತ್ರಕ್ಕೆ ಬಳಸಿರಬಹುದೆಂದು ಶಂಕಿಸಿದ್ದಾರೆ. ಗಣೇಶ ದೇವಸ್ಥಾನದ ಸಮೀಪದಲ್ಲಿ ಈ ರೀತಿಯ ಘಟನೆ ಸಂಭವಿಸಿರುವುದು ಜನರ ಭಯವನ್ನು ಇನ್ನಷ್ಟು ಹೆಚ್ಚಿಸಿದೆ.





