ಹುಬ್ಬಳಿ: ಉತ್ತರ ಕರ್ನಾಟಕದ ಅತ್ಯಂತ ಪ್ರಭಾವಿ ಮತ್ತು ಐತಿಹಾಸಿಕ ಮಠಗಳ ಪೀಠಾಧಿಪತಿಗಳಾದ ಶ್ರೀ ಗುರುಸಿದ್ಧ ರಾಜಯೋಗೇಂದ್ರ ಸ್ವಾಮೀಜಿ ವಿರುದ್ದ ಗಂಭೀರ ಆರೋಪವೊಂದು ಕೇಳಿಬಂದಿದ್ದು, ಹಣಕ್ಕಾಗಿ ಮಠದ ಆಸ್ತಿಯನ್ನೇ ಅಡವಿಟ್ಟಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಅವರ ವಿರುದ್ಧ ಪೊಲೀಸರು ದೂರು ದಾಖಲಿಸಿದ್ದಾರೆ.
ಘಟನೆಯ ಹಿನ್ನೆಲೆ ಏನು ?
ಹುಬ್ಬಳ್ಳಿಯ ಮೂರುಸಾವಿರ ಮಠ ಹಾಗೂ ಹಾನಗಲ್‌ನ ಕುಮಾರೇಶ್ವರ ಮಠದ ಉಸ್ತುವಾರಿ ಹೊಂದಿರುವ ಶ್ರೀ ಗುರುಸಿದ್ಧ ರಾಜಯೋಗೇಂದ್ರ ಸ್ವಾಮೀಜಿ ಅವರು ಮಠದ ಜಾಗ ಮತ್ತು ಜಮೀನುಗಳನ್ನು ಮಾರಾಟ ಮಾಡುವ ಅಥವಾ ನೀಡುವ ಭರವಸೆ ನೀಡಿ ಹಲವರಿಂದ ದೊಡ್ಡ ಮೊತ್ತದ ಹಣವನ್ನು ಮುಂಗಡವಾಗಿ ಪಡೆದಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಮಠದ ಆಸ್ತಿ ನೀಡುವ ಸಲುವಾಗಿ ಶ್ರೀಗಳು ಬರೋಬ್ಬರಿ 1 ಕೋಟಿ 60 ಲಕ್ಷ ರೂಪಾಯಿ ಮೊತ್ತದ ವ್ಯವಹಾರ ನಡೆಸಿದ್ದಾರೆ ಎನ್ನಲಾಗಿದೆ. ಈ ಪೈಕಿ 4 ಲಕ್ಷ ರೂಪಾಯಿ ಹಾಗೂ 12 ಲಕ್ಷ ರೂಪಾಯಿಗಳನ್ನು ಮುಂಗಡವಾಗಿ ಪಡೆದು, ನಂತರ ಭಕ್ತರಿಗೆ ಹಾಗೂ ಸಂಬಂಧಪಟ್ಟವರಿಗೆ ವಂಚನೆ ಮಾಡಿದ್ದಾರೆ ಎಂಬ ದೂರು ಕೇಳಿಬಂದಿದೆ.
ಈ ಸಂಂಬಧ ಮಠದ ಭಕ್ತರು ಮತ್ತು ಹಣ ಕಳೆದುಕೊಂಡವರು ನ್ಯಾಯಾಲಯದ ಮೊರೆ ಹೋಗಿದ್ದರು. ಅರ್ಜಿಯನ್ನು ಆಲಿಸಿದ ಕೋರ್ಟ್, ಶ್ರೀಗಳ ವಿರುದ್ಧ ದೂರು ದಾಖಲಿಸುವಂತೆ ಹಾನಗಲ್ ಪೊಲೀಸ್ ಠಾಣೆಗೆ ಆದೇಶ ನೀಡಿತ್ತು.
ನ್ಯಾಯಾಲಯದ ನಿರ್ದೇಶನದಂತೆ ಈಗ ಹಾನಗಲ್ ಪೊಲೀಸರು ಶ್ರೀ ಗುರುಸಿದ್ಧ ರಾಜಯೋಗೇಂದ್ರ ಸ್ವಾಮೀಜಿ ವಿರುದ್ಧ ಕೇಸ್ ನಂಬರ್ 23/2026 ರ ಅಡಿಯಲ್ಲಿ ಎಫ್‌ಐಆರ್ (FIR) ದಾಖಲಿಸಿದ್ದಾರೆ. ಬೇಲಿಯೇ ಎದ್ದು ಹೊಲ ಮೇಯ್ದಂತೆ ಧರ್ಮ ಮತ್ತು ಸಂಪ್ರದಾಯದ ರಕ್ಷಕರಾಗಬೇಕಿದ್ದ ಮಠಾಧೀಶರೇ ಆಸ್ತಿಗಾಗಿ ಮೋಸ ಮಾಡಿದ್ದಾರೆಂಬ ಆರೋಪ ಭಕ್ತರಲ್ಲಿ ಬೆಚ್ಚಿಬೀಳಿಸಿದೆ.
ಸಾವಿರಾರು ವರ್ಷಗಳ ಇತಿಹಾಸವಿರುವ ಮಠಕ್ಕೆ ಈ ರೀತಿಯ ಕಳಂಕ ಬಂದಿರುವುದು ಭಕ್ತರ ಆಕ್ರೋಶಕ್ಕೆ ಕಾರಣವಾಗಿದೆ. ಮಠದ ಆಸ್ತಿಯು ಭಕ್ತರ ಕೊಡುಗೆಯಾಗಿದ್ದು, ಅದನ್ನು ಪೀಠಾಧಿಪತಿಗಳು ವೈಯಕ್ತಿಕ ಲಾಭಕ್ಕಾಗಿ ಅಥವಾ ಅಕ್ರಮ ವ್ಯವಹಾರಗಳಿಗಾಗಿ ಅಡವಿಟ್ಟಿರುವುದು ಅಕ್ಷಮ್ಯ ಎಂದು ಭಕ್ತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಪ್ರಸ್ತುತ ಪೊಲೀಸರು ತನಿಖೆ ಆರಂಭಿಸಿದ್ದು, ಸ್ವಾಮೀಜಿಯವರು ಈ ಹಣವನ್ನು ಯಾತಕ್ಕಾಗಿ ಬಳಸಿದರು ಮತ್ತು ಇದರ ಹಿಂದೆ ಬೇರೆ ಯಾರಾದರೂ ಪ್ರಭಾವಿ ವ್ಯಕ್ತಿಗಳ ಹಸ್ತಕ್ಷೇಪವಿದೆಯೇ ಎಂಬ ಬಗ್ಗೆ ವಿಚಾರಣೆ ನಡೆಯಬೇಕಿದೆ. ಮಠದ ಆಡಳಿತ ಮಂಡಳಿ ಈ ಬಗ್ಗೆ ಯಾವ ರೀತಿ ಪ್ರತಿಕ್ರಿಯಿಸಲಿದೆ ಎಂದು ಕಾದು ನೋಡಬೇಕಿದೆ.





