ಬೆಂಗಳೂರು: ಹಾಸನಾಂಬ ದೇವಾಲಯದ ವಾರ್ಷಿಕ ಉತ್ಸವ ಈ ಬಾರಿ ಅಕ್ಟೋಬರ್ 9 ರಿಂದ 23 ರವರೆಗೆ ನಡೆಯಲಿದೆ. ಈ ಸಂದರ್ಭದಲ್ಲಿ ಭಕ್ತರಿಗೆ ಸುಗಮ ದರ್ಶನಕ್ಕಾಗಿ ಹಾಗೂ ಗೊಂದಲ ತಪ್ಪಿಸಲು ವಿಐಪಿ ಪಾಸ್ ಸೇರಿದಂತೆ ಇತರೆ ಪಾಸ್‌ಗಳಿಗೆ ಕೆಲವು ನಿರ್ಬಂಧಗಳನ್ನು ಹೇರಲಾಗಿದೆ ಎಂದು ಹಾಸನ ಉಸ್ತುವಾರಿ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ. ಬೆಂಗಳೂರಿನ ವಿಕಾಸಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ವರ್ಷ 25 ಲಕ್ಷ ಭಕ್ತರು ದರ್ಶನಕ್ಕೆ ಆಗಮಿಸುವ ನಿರೀಕ್ಷೆಯಿದೆ ಎಂದು ಹೇಳಿದರು.
ಭಕ್ತರ ಸಂಖ್ಯೆಯಲ್ಲಿ ಏರಿಕೆ
ವರ್ಷದಿಂದ ವರ್ಷಕ್ಕೆ ಹಾಸನಾಂಬ ದರ್ಶನಕ್ಕೆ ಆಗಮಿಸುವ ಭಕ್ತರ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿದೆ. 2021 ರಲ್ಲಿ 1 ಲಕ್ಷ ಭಕ್ತರಿದ್ದರೆ, 2024 ರ ವೇಳೆಗೆ ಈ ಸಂಖ್ಯೆ 20 ಲಕ್ಷಕ್ಕೆ ಏರಿತ್ತು. ಈ ವರ್ಷ 25 ಲಕ್ಷ ಭಕ್ತರು ಆಗಮಿಸುವ ಸಾಧ್ಯತೆಯಿದೆ. ಇದರಿಂದ ದರ್ಶನದ ವ್ಯವಸ್ಥೆಯನ್ನು ಸುಗಮಗೊಳಿಸಲು ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ. ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ಎಚ್ಚರಿಕೆ ವಹಿಸಲಾಗುವುದು ಎಂದು ಸಚಿವರು ಭರವಸೆ ನೀಡಿದರು.
ವಿಐಪಿ ದರ್ಶನಕ್ಕೆ ಕಟ್ಟುನಿಟ್ಟಿನ ನಿಯಮ
ರಾಜ್ಯಪಾಲರು, ಮುಖ್ಯಮಂತ್ರಿಗಳು, ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ, ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳು ಹಾಗೂ ಮಾಜಿ ಪ್ರಧಾನಿಗಳಿಗೆ ಮಾತ್ರ ಎಸ್ಕಾರ್ಟ್ ಸೌಲಭ್ಯದೊಂದಿಗೆ ದೇವಸ್ಥಾನಕ್ಕೆ ನೇರ ಪ್ರವೇಶವಿರಲಿದೆ. ಇತರ ಸಚಿವರು, ಶಾಸಕರು, ನ್ಯಾಯಮೂರ್ತಿಗಳು ಮತ್ತು ಗಣ್ಯರಿಗೆ ನೇರ ಭೇಟಿಗೆ ಅವಕಾಶವಿಲ್ಲ. ಅವರು ತಾವು ಯಾವ ದಿನ ದೇವಾಲಯಕ್ಕೆ ಭೇಟಿ ನೀಡಲಿದ್ದಾರೆ ಎಂಬುದನ್ನು ಜಿಲ್ಲಾಡಳಿತಕ್ಕೆ ಇಮೇಲ್ ಅಥವಾ ದೂರವಾಣಿ ಮೂಲಕ ಮುಂಚಿತವಾಗಿ ತಿಳಿಸಬೇಕು. ನಂತರ, ನಿಗದಿತ ದಿನದಂದು ಅವರು ಹಾಸನದ ಪರಿವೀಕ್ಷಣಾ ಮಂದಿರಕ್ಕೆ ಆಗಮಿಸಬೇಕು. ಅಲ್ಲಿಂದ ಜಿಲ್ಲಾಡಳಿತದ ವಾಹನದಲ್ಲಿ ಅವರನ್ನು ಮತ್ತು ಅವರೊಂದಿಗಿನ ನಾಲ್ಕು ಜನರನ್ನು ದೇವಸ್ಥಾನಕ್ಕೆ ಕರೆದೊಯ್ಯಲಾಗುವುದು. ಈ ವ್ಯವಸ್ಥೆಯಿಂದ ಭದ್ರತೆ ಸಮಸ್ಯೆ ಮತ್ತು ಸಾರ್ವಜನಿಕರ ದರ್ಶನಕ್ಕೆ ತೊಂದರೆಯಾಗದಂತೆ ಎಚ್ಚರಿಕೆ ವಹಿಸಲಾಗುವುದು.
ಗೋಲ್ಡ್ ಪಾಸ್ ಮತ್ತು ಸಾರ್ವಜನಿಕ ದರ್ಶನ
ಪ್ರತಿದಿನ 1,000 ಗೋಲ್ಡ್ ಪಾಸ್‌ಗಳನ್ನು ಗಣ್ಯ ವ್ಯಕ್ತಿಗಳಿಗೆ ವಿತರಿಸಲಾಗುವುದು. ಈ ಪಾಸ್‌ನೊಂದಿಗೆ ಒಬ್ಬ ವ್ಯಕ್ತಿಗೆ ಮಾತ್ರ ದೇವಾಲಯ ಪ್ರವೇಶಕ್ಕೆ ಅವಕಾಶವಿರಲಿದೆ. ಗೋಲ್ಡ್ ಪಾಸ್ ಹೊಂದಿರುವವರು ಬೆಳಗ್ಗೆ 7:30 ರಿಂದ 10 ಗಂಟೆಯವರೆಗೆ ದೇವಸ್ಥಾನಕ್ಕೆ ಭೇಟಿ ನೀಡಬಹುದು. ವಿಐಪಿಗಳಿಗೆ ಬೆಳಗ್ಗೆ 10:30 ರಿಂದ ಮಧ್ಯಾಹ್ನ 12:30 ರವರೆಗೆ ಅವಕಾಶವಿರಲಿದೆ. ಈ ಸಮಯದ ನಂತರ ಆ ಗೇಟ್‌ಗಳನ್ನು ಮುಚ್ಚಲಾಗುವುದು. ಸಾರ್ವಜನಿಕರಿಗೆ ₹300 ಮತ್ತು ₹1,000 ಬೆಲೆಯ ಪಾಸ್‌ಗಳನ್ನು ವಿತರಿಸಲಾಗುವುದು, ಇದರೊಂದಿಗೆ ದರ್ಶನ ಮತ್ತು ಪ್ರಸಾದವನ್ನು ಪಡೆಯಬಹುದು. ಪ್ರತಿದಿನ 70,000 ರಿಂದ 80,000 ಭಕ್ತರು ದರ್ಶನ ಪಡೆಯುವಂತೆ ವ್ಯವಸ್ಥೆ ಮಾಡಲಾಗಿದೆ.
ಹಾಸನಾಂಬ ದೇವಾಲಯವು ಅಕ್ಟೋಬರ್ 9 ರಿಂದ 23 ರವರೆಗೆ ತೆರೆದಿರಲಿದೆ. ಅಕ್ಟೋಬರ್ 9 ಮತ್ತು 23 ರಂದು ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧವಿರಲಿದ್ದು, ಆ ದಿನಗಳಲ್ಲಿ ಪೂಜಾ ಕೈಂಕರ್ಯಗಳು ನಡೆಯಲಿವೆ. ಅಕ್ಟೋಬರ್ 10 ರಿಂದ 22 ರವರೆಗೆ ಭಕ್ತರಿಗೆ ನಿರಂತರ ದರ್ಶನಕ್ಕೆ ಅವಕಾಶವಿರಲಿದೆ. ಇದರ ಜೊತೆಗೆ, ಭಕ್ತರಿಗೆ ಕರ್ನಾಟಕದ ಸಂಸ್ಕೃತಿ ಮತ್ತು ಜಾನಪದ ಕಲೆಗಳನ್ನು ಪರಿಚಯಿಸಲು ಮೂರು ವೇದಿಕೆಗಳನ್ನು ಸಿದ್ಧಪಡಿಸಲಾಗುತ್ತಿದೆ. ಒಂದು ವೇದಿಕೆಯಲ್ಲಿ ಜಾನಪದ ಕಲೆಗಳ ಪ್ರದರ್ಶನ, ಇನ್ನೊಂದರಲ್ಲಿ ಸ್ಥಳೀಯ ಯುವಕರ ಕಲಾ ಪ್ರದರ್ಶನ, ಮತ್ತು ಮೂರನೇ ವೇದಿಕೆಯಲ್ಲಿ ಸಾಂಪ್ರದಾಯಿಕ ನೃತ್ಯ ಪ್ರದರ್ಶನ ಆಯೋಜಿಸಲಾಗುವುದು.
ಹೆಲಿ ಟೂರಿಸಂ, ಫಲಪುಷ್ಪ ಪ್ರದರ್ಶನ, ಕರಕುಶಲ ವಸ್ತುಗಳ ಮಾರಾಟ ಮೇಳ ಸೇರಿದಂತೆ ಪ್ರವಾಸೋದ್ಯಮ ಇಲಾಖೆಯಿಂದ ಹಾಸನಾಂಬ ಪ್ರವಾಸಿ ಪ್ಯಾಕೇಜ್ ಆರಂಭಿಸುವ ಚಿಂತನೆ ನಡೆದಿದೆ. ಭದ್ರತೆಗಾಗಿ 2,000 ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗುತ್ತಿದೆ. 280 ಕ್ಕೂ ಹೆಚ್ಚು ಸಿಸಿಟಿವಿ ಕ್ಯಾಮೆರಾಗಳು, ಡ್ರೋನ್ ಕ್ಯಾಮೆರಾಗಳು ಮತ್ತು ಎಐ ತಂತ್ರಜ್ಞಾನವನ್ನು ಬಳಸಲಾಗುವುದು. ದೇವಾಲಯದ ಬಳಿ ಕಂಟ್ರೋಲ್ ರೂಂ ಸ್ಥಾಪಿಸಲಾಗುವುದು ಎಂದು ಸಚಿವರು ತಿಳಿಸಿದರು.