ಮೈಸೂರು: ರಾಜ್ಯದ ಜನತೆಗೆ 5 ಗ್ಯಾರಂಟಿಗಳ ಆಶ್ವಾಸನೆ ಕೊಟ್ಟು ಅಧಿಕಾರಕ್ಕೆ ಬಂದಿರುವ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ, ಪಂಚಗ್ಯಾರಂಟಿಗಳಲ್ಲಿ ಪ್ರಮುಖ ಯೋಜನೆಯಾಗಿರುವ ಗೃಹಲಕ್ಷ್ಮಿ ಯೋಜನೆಯು ಮಹಿಳೆಯರಿಗೆ ಸಾಮಾಜಿಕವಾಗಿ ಸಬಲೀಕರಣದ ದಿಕ್ಕಿನಲ್ಲಿ ಮಹತ್ವದ ಪಾತ್ರ ವಹಿಸಿದೆ. ಆದರೆ, ಈ ಯೋಜನೆಯಡಿ ಪ್ರತಿ ತಿಂಗಳು ಹಣ ವಿತರಣೆಗೆ ತೊಡಕುಗಳಿರುವುದರಿಂದ, ಇನ್ಮುಂದೆ ಮೂರು ತಿಂಗಳಿಗೊಮ್ಮೆ ಹಣ ವಿತರಿಸಲಾಗುವುದು ಎಂದು ಗ್ಯಾರಂಟಿ ಯೋಜನೆ ಸಮಿತಿ ಅಧ್ಯಕ್ಷ ಎಚ್.ಎಂ. ರೇವಣ್ಣ ಹೇಳಿದ್ದಾರೆ.
ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಹೆಚ್ ಎಂ ರೇವಣ್ಣ, “ಗೃಹಲಕ್ಷ್ಮಿ ಯೋಜನೆಯಡಿ ಪ್ರತಿ ತಿಂಗಳು ಹಣ ಕೊಡಲು ಕೆಲವು ತಾಂತ್ರಿಕ ತೊಡಕುಗಳಿವೆ. ಆದ್ದರಿಂದ, ಮೂರು ತಿಂಗಳಿಗೊಮ್ಮೆ ಹಣ ವಿತರಿಸುತ್ತಿದ್ದೇವೆ. ಜಿಎಸ್‌ಟಿ ಸಂಬಂಧಿತ ಸಮಸ್ಯೆಯಿಂದಾಗಿ 1.20 ಲಕ್ಷ ಫಲಾನುಭವಿಗಳಿಗೆ ಹಣ ತಲುಪಿರಲಿಲ್ಲ. ಇದರಲ್ಲಿ 58,000 ಜನರ ಸಮಸ್ಯೆಯನ್ನು ಈಗ ಬಗೆಹರಿಸಿದ್ದೇವೆ. ಉಳಿದವರ ಸಮಸ್ಯೆಯನ್ನು ಶೀಘ್ರದಲ್ಲಿ ಪರಿಹರಿಸಲಾಗುವುದು,” ಎಂದು ತಿಳಿಸಿದರು.
ರೇವಣ್ಣರವರು, “ನಾವು ಅಧಿಕಾರಕ್ಕೆ ಬಂದಾಗಿನಿಂದ ಗೃಹಲಕ್ಷ್ಮಿ ಯೋಜನೆಯ ಹಣವನ್ನು ನಿಲ್ಲಿಸಿಲ್ಲ. ಆದರೆ, ಪ್ರತಿ ತಿಂಗಳು ವಿತರಣೆಗೆ ಕೆಲವು ಆಡಳಿತಾತ್ಮಕ ತೊಡಕುಗಳಿವೆ,” ಎಂದು ಸ್ಪಷ್ಟಪಡಿಸಿದ್ದಾರೆ. ಈ ಹೇಳಿಕೆಯಿಂದ ರಾಜ್ಯದ ಲಕ್ಷಾಂತರ ಫಲಾನುಭವಿಗಳು, ವಿಶೇಷವಾಗಿ ಮಾಸಿಕ ಹಣಕ್ಕಾಗಿ ಕಾಯುತ್ತಿರುವ ಮಹಿಳೆಯರು, ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಗೃಹಲಕ್ಷ್ಮಿ ಯೋಜನೆಯಿಂದ ಆರ್ಥಿಕ ಸಬಲೀಕರಣ ಕಂಡಿರುವ ಅನೇಕ ಕುಟುಂಬಗಳಿಗೆ ಈ ಬದಲಾವಣೆಯು ತೊಂದರೆಯಾಗಬಹುದು ಎಂಬ ಆತಂಕ ವ್ಯಕ್ತವಾಗಿದೆ.
ಫಲಾನುಭವಿಗಳ ಆತಂಕ
ಗೃಹಲಕ್ಷ್ಮಿ ಯೋಜನೆಯ ಮಾಸಿಕ ಹಣದ ಮೇಲೆ ಅವಲಂಬಿತರಾಗಿರುವ ಅನೇಕ ಮಹಿಳೆಯರು, ಮೂರು ತಿಂಗಳಿಗೊಮ್ಮೆ ವಿತರಣೆಯಿಂದ ತಮ್ಮ ಆರ್ಥಿಕ ಯೋಜನೆಗೆ ತೊಂದರೆಯಾಗಬಹುದು ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ರೇವಣ್ಣರ ಈ ಹೇಳಿಕೆಯು ರಾಜ್ಯದಾದ್ಯಂತ ಚರ್ಚೆಗೆ ಕಾರಣವಾಗಿದ್ದು, ಸರ್ಕಾರವು ಈ ತೊಡಕುಗಳನ್ನು ಬಗೆಹರಿಸಿ ಮಾಸಿಕ ವಿತರಣೆಯನ್ನು ಮುಂದುವರಿಸಬೇಕೆಂಬ ಬೇಡಿಕೆ ಜೋರಾಗಿದೆ.