ಬೆಂಗಳೂರು: ಈ ವರ್ಷದ ದೀಪಾವಳಿ ಆಚರಣೆ ಪರಿಸರ ಸ್ನೇಹಿ ರೀತಿಯಲ್ಲಿ ನಡೆಯಲಿದೆ. ಪರಿಸರ ಸಂರಕ್ಷಣೆಗೆ ಪ್ರಾಮುಖ್ಯತೆ ನೀಡಿದ ಸರ್ಕಾರ ‘ಹಸಿರು ಪಟಾಕಿ’ಗಳ ಮಾರಾಟ ಮತ್ತು ಬಳಕೆಯ ಮೇಲೆ ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೊಳಿಸಿದೆ. ಪರಿಸರ ಇಲಾಖೆಯ ಸಚಿವ ಈಶ್ವರ ಖಂಡ್ರೆ ಅವರು ಈ ನಿಯಮಗಳ ಬಗ್ಗೆ ಹಬ್ಬಕ್ಕೆ ಏಳು ತಿಂಗಳ ಮುಂಚಿತವಾಗಿಯೇ ಪಟಾಕಿ ಮಾರಾಟಗಾರರು ಮತ್ತು ತಯಾರಕರಿಗೆ ನೋಟೀಸ್ ನೀಡುವಂತೆ ಸೂಚನೆ ನೀಡಿದ್ದಾರೆ .
ಸರ್ಕಾರದ ನೀತಿ ಪ್ರಕಾರ, ಈ ಬಾರಿ ದೀಪಾವಳಿಯ ಸಂದರ್ಭದಲ್ಲಿ ಹಸಿರು ಪಟಾಕಿಗಳ ಹೊರತಾಗಿ ಬೇರೆ ಪಟಾಕಿ ಮಾರಾಟಕ್ಕೆ ಅವಕಾಶ ನೀಡಬಾರದು ಎಂದು ಸ್ಪಷ್ಟಪಡಿಸಲಾಗಿದೆ . ಸಚಿವರ ಸೂಚನೆಯ ಪ್ರಕಾರ, ಪ್ಲಾಸ್ಟರ್ ಆಫ್ ಪ್ಯಾರೀಸ್ (ಪಿ.ಓ.ಪಿ.) ಮೂರ್ತಿಗಳ ತಯಾರಿಕೆ, ಸಾಗಾಟ ಮತ್ತು ಮಾರಾಟವನ್ನು ನಿಷೇಧಿಸಲಾಗಿದೆ. ಪರಿಸರ ಇಲಾಖೆಯು ಈಗಾಗಲೇ ರಾಜ್ಯದಾದ್ಯಂತದ ಪಟಾಕಿ ಮಾರಾಟಗಾರರಿಗೆ ನೋಟಿಸ್ ನೀಡುವ ಪ್ರಕ್ರಿಯೆ ಆರಂಭಿಸಿದೆ .
ಮಾರುಕಟ್ಟೆಗೆ ಬರುವ ಎಲ್ಲಾ ಪಟಾಕಿಗಳು ಹಸಿರು ಮಾನದಂಡಗಳನ್ನುಪಾಲಿಸಬೇಕು. ಶಿವಕಾಶಿಯಿಂದ ತಯಾರಾಗಿ ಸಾಗಿಸಲ್ಪಟ್ಟ ಎಲ್ಲಾ ಪಟಾಕಿಗಳು QR ಕೋಡ್, ಹಸಿರು ನಿಶಾನ (ಗ್ರೀನ್ ಲೇಬಲ್)ಮತ್ತುNIRI ಲೋಗೋವನ್ನು ಹೊಂದಿರುತ್ತವೆ. ಈ ಪಟಾಕಿಗಳು ಸಾಂಪ್ರದಾಯಿಕ ಪಟಾಕಿಗಳಿಗಿಂತ ಕಡಿಮೆ ಶಬ್ದಮಟ್ಟ ಮತ್ತು ಕಡಿಮೆ ಮಾಲಿನ್ಯ ಉಂಟುಮಾಡುವಂತಿರುತ್ತವೆ. ಸುಪ್ರೀಂಕೋರ್ಟ್ ನೀಡಿರುವ ತೀರ್ಪಿನ ಅನುಸರಣೆಯಲ್ಲೂ ಈ ಕ್ರಮ ಜಾರಿಯಾಗಿದೆ .
ಈ ಹೊಸ ನಿಯಮಗಳಿಗೆ ವ್ಯಾಪಾರಿ ಸಂಘಗಳು ಸಹಕಾರ ನೀಡಿದ್ದಾರೆ. ವಿಶಾಲ ಕರ್ನಾಟಕ ಪಟಾಕಿ ವರ್ತಕರ ಕ್ಷೇಮ ಅಭಿವೃದ್ಧಿ ಸಂಘದ ರಾಜ್ಯ ಅಧ್ಯಕ್ಷ ಕೇಶವ ಅವರು, ಸರ್ಕಾರ ನಮಗಾಗಿ ಮಳಿಗೆಗಳನ್ನು ಒದಗಿಸಿದೆ ಮತ್ತು ಜನರಲ್ಲಿ ಪಟಾಕಿಗಳೊಂದಿಗೆ ಹಬ್ಬವನ್ನು ಆಚರಿಸುವ ಉತ್ಸಾಹ ಇನ್ನೂ ಜೀವಂತವಾಗಿದೆ. ವ್ಯಾಪಾರಿಗಳಾಗಿ ಪರಿಸರವನ್ನು ಬೆಂಬಲಿಸಲು ತಲಾ ಐದು ಸಸಿಗಳನ್ನು ನೆಡುವುದಾಗಿಯೂ ಅವರು ಪ್ರತಿಜ್ಞೆ ಮಾಡಿದ್ದಾರೆ.
ಹಬ್ಬದ ಋತುವಿನಲ್ಲಿ ಸುರಕ್ಷಿತ ಮತ್ತು ನಿಯಂತ್ರಿತ ಮಾರಾಟವನ್ನು ಖಚಿತಪಡಿಸಿಕೊಳ್ಳಲು ಸರ್ಕಾರವು ಕರ್ನಾಟಕದಾದ್ಯಂತ ಗೊತ್ತುಪಡಿಸಿದ ಅಧಿಕೃತ ಕೇಂದ್ರಗಳಲ್ಲಿ ಪಟಾಕಿ ಅಂಗಡಿಗಳನ್ನು ಹಂಚಿಕೆ ಮಾಡುತ್ತದೆ. ಬೆಂಗಳೂರಿನ ಪ್ರತಿ ವಾರ್ಡ್‌ನಲ್ಲಿರುವ ಬಿಬಿಎಂಪಿ ಆಟದ ಮೈದಾನಗಳಲ್ಲಿ ಪಟಾಕಿ ಅಂಗಡಿಗಳನ್ನು ಸ್ಥಾಪಿಸಲಾಗುವುದು. ನಾಗರಿಕ ಅಧಿಕಾರಿಗಳು ಸುರಕ್ಷತಾ ತಪಾಸಣೆ ನಡೆಸಿದ ನಂತರ, ಪೊಲೀಸ್ ಆಯುಕ್ತರು ಹಂಚಿಕೆ ಪ್ರಕ್ರಿಯೆಯನ್ನು ನೋಡಿಕೊಳ್ಳುತ್ತಾರೆ. ಪಾರದರ್ಶಕತೆಯನ್ನು ಹೆಚ್ಚಿಸಲು ಪರವಾನಗಿ ಪಡೆದ ವ್ಯಾಪಾರಿಗಳಿಗೆ ಮಳಿಗೆಗಳನ್ನು ನಿಯೋಜಿಸಲಾಗುವುದು.
ಕಳೆದ ವರ್ಷ ಆನೇಕಲ್ ನಡೆದ ಪಟಾಕಿ ದುರಂತದ ನಂತರ ಸರ್ಕಾರ ಈ ಕಟ್ಟುನಿಟ್ಟಿನ ಕ್ರಮಗಳನ್ನು ಮುಂದೆ ತಂದಿದೆ. ಹಬ್ಬದ ಸಂಭ್ರಮ ಮತ್ತು ಸಾರ್ವಜನಿಕ ಸುರಕ್ಷತೆಯ ನಡುವೆ ಸಮತೋಲನ ಕಾಯ್ದುಕೊಳ್ಳುವುದು ಈ ನೀತಿಯ ಉದ್ದೇಶವಾಗಿದೆ.