ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ವೆಂಕಟೇಶ್ ಕೊ*ಲೆ ಕೇಸ್‌‌: ನಾಲ್ವರು ಆರೋಪಿಗಳ ಬಂಧನ

Untitled design (6)

ಕೊಪ್ಪಳ: ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ವೆಂಕಟೇಶ್ ಕುರುಬರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಆರೋಪಿಗಳ ಪೈಕಿ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. ಈ ಘಟನೆಯು ಗಂಗಾವತಿ ನಗರದ ಲೀಲಾವತಿ ಆಸ್ಪತ್ರೆಯ ಮುಂಭಾಗದಲ್ಲಿ ತಡರಾತ್ರಿ ನಡೆದಿದ್ದು, ರಾಜಕೀಯ ದ್ವೇಷದಿಂದ ಕೂಡಿದ ಕೃತ್ಯ ಎಂದು ಶಂಕಿಸಲಾಗಿದೆ.

ಕೊಲೆಯ ವಿವರ

ಗಂಗಾವತಿಯ ಲೀಲಾವತಿ ಆಸ್ಪತ್ರೆ ಮುಂಭಾಗದಲ್ಲಿ ಮಧ್ಯರಾತ್ರಿ 2 ಗಂಟೆ ಸುಮಾರಿಗೆ ಈ ಕ್ರೂರ ಘಟನೆ ನಡೆದಿದೆ. ವೆಂಕಟೇಶ್ ಕುರುಬರ, ತಮ್ಮ ಸ್ನೇಹಿತರೊಂದಿಗೆ ದೇವಿ ಕ್ಯಾಂಪ್‌ನಿಂದ ಗಂಗಾವತಿಗೆ ಬೈಕ್‌ನಲ್ಲಿ ತೆರಳುತ್ತಿದ್ದ ವೇಳೆ, ಕಾರಿನಲ್ಲಿ ಬಂದ ದುಷ್ಕರ್ಮಿಗಳ ಗುಂಪೊಂದು ಉದ್ದೇಶಪೂರ್ವಕವಾಗಿ ಅವರ ಬೈಕ್‌ಗೆ ಗುದ್ದಿದೆ. ವೆಂಕಟೇಶ್ ಕೆಳಗೆ ಬಿದ್ದ ಕೂಡಲೇ, ಆರೋಪಿಗಳು ಮಾರಕಾಸ್ತ್ರಗಳಿಂದ ದಾಳಿ ನಡೆಸಿ, ಅವರನ್ನು ಕೊಲೆಗೈದು ಪರಾರಿಯಾಗಿದ್ದಾರೆ. ಈ ಘಟನೆಯು ಗಂಗಾವತಿ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದ್ದು, ಸ್ಥಳಕ್ಕೆ ಗಂಗಾವತಿ ಡಿವೈಎಸ್ಪಿ ಸಿದ್ಧನಗೌಡ ಪಾಟೀಲ್ ಮತ್ತು ಪೊಲೀಸ್ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಆರೋಪಿಗಳ ಬಂಧನ

ಪೊಲೀಸರು ತನಿಖೆಯನ್ನು ತೀವ್ರಗೊಳಿಸಿ, ಆರೋಪಿಗಳಾದ ಧನಂಜಯ್, ಮೈಲಾರಿ ಎಂಬ ವಿಜಯ್, ಸಲೀಂ, ಮತ್ತು ಭೀಮ ಎಂಬುವರನ್ನು ಬಳ್ಳಾರಿ ಜಿಲ್ಲೆಯ ಕಂಪ್ಲಿಯಲ್ಲಿ ಬಂಧಿಸಿದ್ದಾರೆ. ಐದನೇ ಆರೋಪಿಯ ಶೋಧ ಕಾರ್ಯ ಇನ್ನೂ ಮುಂದುವರೆದಿದೆ. ಪೊಲೀಸರು ಆರೋಪಿಗಳಿಂದ ಮಾಹಿತಿ ಸಂಗ್ರಹಿಸುತ್ತಿದ್ದು, ಕೊಲೆಯ ಹಿಂದಿನ ನಿಖರ ಕಾರಣವನ್ನು ಕಂಡುಹಿಡಿಯಲು ತನಿಖೆಯನ್ನು ಚುರುಕುಗೊಳಿಸಿದ್ದಾರೆ.

ಗಂಗಾವತಿ ಪೊಲೀಸ್ ಠಾಣೆಯಲ್ಲಿ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಲೆ ಆರೋಪದಡಿ ಎಫ್‌ಐಆರ್ ದಾಖಲಾಗಿದೆ. ತನಿಖೆಯ ಭಾಗವಾಗಿ, ಸ್ಥಳದಲ್ಲಿ ಸಿಸಿಟಿವಿ ಕ್ಯಾಮರಾಗಳ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ. ದುಷ್ಕರ್ಮಿಗಳು ಬಳಸಿದ ಕಾರನ್ನು ಗುರುತಿಸಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ.

Exit mobile version