ಹಾಸನ: ಹಾಸನ ತಾಲೂಕಿನ ಮೊಸಳೆಹೊಸಹಳ್ಳಿ ಗ್ರಾಮದಲ್ಲಿ ಗಣೇಶ ಮೂರ್ತಿ ವಿಸರ್ಜನೆ ಮೆರವಣಿಗೆಯ ಸಂದರ್ಭದಲ್ಲಿ ಭೀಕರ ದುರಂತ ಸಂಭವಿಸಿದೆ. ಟ್ರಕ್ ಒಂದು ಏಕಾಏಕಿ ಡಿವೈಡರ್ ದಾಟಿ ಮೆರವಣಿಗೆಯ ಮೇಲೆ ಹರಿದ ಪರಿಣಾಮ 9 ಜನ ಸಾವನ್ನಪ್ಪಿದ್ದು, 20ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಗಣೇಶ ವಿಸರ್ಜನೆಗಾಗಿ ಮೊಸಳೆಹೊಸಹಳ್ಳಿ ಗ್ರಾಮಸ್ಥರು ರಸ್ತೆಯ ಒಂದು ಬದಿಯಲ್ಲಿ ಮೆರವಣಿಗೆಯೊಂದಿಗೆ ಸಾಗುತ್ತಿದ್ದಾಗ, ಟ್ರಕ್ ವೇಗವಾಗಿ ಬಂದು ಜನರ ಮೇಲೆ ಢಿಕ್ಕಿಹೊಡೆದಿದೆ. ಈ ಘಟನೆಯಿಂದ ಟ್ರಕ್ಗೆ ಸಿಲುಕಿದ 4 ಜನ ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ. ಗಾಯಾಳುಗಳನ್ನು ತಕ್ಷಣವೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆಯ ವೇಳೆ 5 ಜನ ಮೃತಪಟ್ಟಿದ್ದಾರೆ.
ಸರ್ಕಾರದಿಂದ ಪರಿಹಾರ ಘೋಷಣೆ:
ರಾಜ್ಯ ಸರ್ಕಾರವು ಮೃತರ ಕುಟುಂಬಕ್ಕೆ ತಲಾ 5 ಲಕ್ಷ ರೂ. ಪರಿಹಾರವನ್ನು ಘೋಷಿಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ದುಃಖದ ಸಂದರ್ಭದಲ್ಲಿ ಸಂತ್ರಸ್ತ ಕುಟುಂಬಗಳಿಗೆ ಸಾಂತ್ವನ ಸೂಚಿಸಿದ್ದಾರೆ. “ಹಾಸನದ ಮೊಸಳೆಹೊಸಹಳ್ಳಿಯಲ್ಲಿ ಗಣೇಶ ಮೆರವಣಿಗೆಯ ಮೇಲೆ ಟ್ರಕ್ ಡಿಕ್ಕಿಯಿಂದ 9 ಜನ ಸಾವನ್ನಪ್ಪಿರುವುದು ಮತ್ತು 20ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಸುದ್ದಿ ತಿಳಿದು ತೀವ್ರ ದುಃಖವಾಯಿತು.
ಮೃತರ ಆತ್ಮಕ್ಕೆ ಶಾಂತಿ ಸಿಗಲಿ, ಗಾಯಾಳುಗಳು ಶೀಘ್ರ ಗುಣಮುಖರಾಗಲಿ ಎಂದು ಪ್ರಾರ್ಥಿಸುತ್ತೇನೆ. ಸರ್ಕಾರವು ಮೃತರ ಕುಟುಂಬಕ್ಕೆ ತಲಾ 5 ಲಕ್ಷ ರೂ. ಪರಿಹಾರ ಮತ್ತು ಗಾಯಾಳುಗಳ ಚಿಕಿತ್ಸಾ ವೆಚ್ಚವನ್ನು ಭರಿಸಲಿದೆ. ಈ ದುಃಖದ ಘಳಿಗೆಯಲ್ಲಿ ಸಂತ್ರಸ್ತರ ಜೊತೆ ನಾವೆಲ್ಲರೂ ಇದ್ದೇವೆ,” ಎಂದು ಸಿಎಂ ಹೇಳಿದ್ದಾರೆ.
ಹಾಸನದಲ್ಲಿ ಗಣೇಶ ವಿಸರ್ಜನೆಗಾಗಿ ಮೆರವಣಿಗೆಯಲ್ಲಿ ತೆರಳುತ್ತಿದ್ದವರ ಮೇಲೆ ಲಾರಿ ಹರಿದು ಹಲವರು ಸಾವಿಗೀಡಾಗಿ, ಸುಮಾರು 20ಕ್ಕೂ ಹೆಚ್ಚು ಮಂದಿ ಗಂಭೀರ ಗಾಯಗೊಂಡ ಸುದ್ದಿ ತಿಳಿದು ಅತೀವ ದುಃಖವಾಯಿತು.
ಮೃತರ ಆತ್ಮಕ್ಕೆ ಶಾಂತಿ ಸಿಗಲಿ, ಗಾಯಾಳುಗಳು ಆದಷ್ಟು ಶೀಘ್ರ ಗುಣಮುಖರಾಗಲಿ ಎಂದು ಪ್ರಾರ್ಥಿಸುತ್ತೇನೆ.ಮೃತರ ಕುಟುಂಬಗಳಿಗೆ ಸರ್ಕಾರದ ವತಿಯಿಂದ…
— Siddaramaiah (@siddaramaiah) September 12, 2025
ಗಾಯಾಳುಗಳಿಗೆ ತಕ್ಷಣದ ಚಿಕಿತ್ಸೆಗಾಗಿ ಸರ್ಕಾರವು ಎಲ್ಲ ರೀತಿಯ ವ್ಯವಸ್ಥೆ ಮಾಡಿದ್ದು, ಈ ಘಟನೆಯ ಕುರಿತು ತನಿಖೆಗೆ ಆದೇಶಿಸಲಾಗಿದೆ.